ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿ ಸ್ಥಗಿತ

ಎರಡು ಕಂಪನಿಗಳ ನಡುವೆ ‘ಕಿತ್ತಾಟ’? l ಕಾಮಗಾರಿಗೆ ಕೆಎಸ್‌ಐಡಿಸಿ ಅತೃಪ್ತಿ
Last Updated 16 ಜನವರಿ 2022, 18:30 IST
ಅಕ್ಷರ ಗಾತ್ರ

ಬಳ್ಳಾರಿ: ರೈತರ ಪ್ರತಿಭಟನೆಗಳ ನಡುವೆಯೂ ಬಳ್ಳಾರಿ ಸಮೀಪ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಹತ್ತು ವರ್ಷಗಳ ಹಿಂದೆ (2010ರ ಆಗಸ್ಟ್‌ನಲ್ಲಿ) ಚೆನ್ನೈ ಮೂಲದ ‘ಮಾರ್ಗ್‌’ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿತ್ತು. ಈಚೆಗಷ್ಟೇ ಮಂದಗತಿಯಲ್ಲಿ ಆರಂಭವಾಗಿದ್ದ ಕಾಮಗಾರಿ ಎರಡು ಕಂಪನಿಗಳ ನಡುವಿನ ‘ಕಿತ್ತಾಟ’ದಿಂದಾಗಿ ಸ್ಥಗಿತಗೊಂಡಿದೆ.

ಚಾಗನೂರು ಗ್ರಾಮದಲ್ಲಿ 987ಎಕರೆ ಭೂಮಿಯಲ್ಲಿ ₹330 ಕೋಟಿ ವೆಚ್ಚದಲ್ಲಿ ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಬಿಲ್ಡ್‌– ಆಪರೇಟ್‌ ಅಂಡ್ ಟ್ರಾನ್ಸ್‌ಫರ್‌) ಆಧಾರದಲ್ಲಿ 30 ವರ್ಷಗಳ ಅವಧಿಗೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ವಿಮಾನ ನಿಲ್ದಾಣ ನಿರ್ಮಿಸುತ್ತಿದೆ. ಕಾಮಗಾರಿ ಗತಿ ಗಮನಿಸಿದರೆ ಇನ್ನು 10ವರ್ಷ ಕಳೆದರೂ ಯೋಜನೆ ಪೂರ್ಣಗೊಳ್ಳುವುದಿಲ್ಲ ಎಂಬ ಅನುಮಾನವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಇದರೊಟ್ಟಿಗೆ ಆರಂಭವಾದ ಶಿವಮೊಗ್ಗ, ವಿಜಯಪುರ ಹಾಗೂ ಹಾಸನ ವಿಮಾನ ನಿಲ್ದಾಣಗಳ ಕಾಮಗಾರಿ ಒಂದೆರಡು ವರ್ಷಗಳಲ್ಲಿ ಮುಗಿಯುವ ಹಂತದಲ್ಲಿವೆ. ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಗುತ್ತಿಗೆ ಪಡೆದ ‘ಮಾರ್ಗ್‌ ಶ್ರೀಕೃಷ್ಣದೇವರಾಯ ಏರ್‌ಪೋರ್ಟ್‌ ಪ್ರೈವೇಟ್‌ ಲಿ’. ಪೆರಿಫರೆಲ್‌ ರಸ್ತೆ, ಸಂಪರ್ಕ ರಸ್ತೆ, ಒಳ ರಸ್ತೆ, ಕಾಂಪೌಂಡ್‌ ನಿರ್ಮಾಣ ಹಾಗೂ ಸರ್ವೆ ಕಾರ್ಯವನ್ನು ಗುಜರಾತ್‌ ಮೂಲದ ‘ವಿಜಯ್‌ ಇನ್‌ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್‌ ಲಿ’. ಕಂಪನಿಗೆ ಕಳೆದ ವರ್ಷ (2021) ₹ 44.85 ಕೋಟಿಗೆ ಉಪ ಗುತ್ತಿಗೆ ನೀಡಿದೆ.

‘ಉಪ ಗುತ್ತಿಗೆ ಪಡೆದು ಎಂಟು ತಿಂಗಳು ಕಳೆದರೂ ಯೋಜನೆಯ ಡ್ರಾಯಿಂಗ್‌, ವಿನ್ಯಾಸ, ಬಹುಪಾಲು ಜಮೀನನ್ನು ಮಾರ್ಗ್‌ ತನಗೆ ಹಸ್ತಾಂತರಿಸಿಲ್ಲ. ಅಡೆತಡೆಗಳ ನಡುವೆ ಅಲ್ಪಸ್ವಲ್ಪ ಕಾಮಗಾರಿಯನ್ನು ಕಂಪನಿ ಮಾಡಿದೆ. ಈ ಸಂಬಂಧದ ಬಿಲ್‌ಗಳನ್ನು ಮಾರ್ಗ್‌ ಪಾವತಿಸಿಲ್ಲ. ಬಾಕಿ ಪಾವತಿಸುವಂತೆ ಪತ್ರ ಬರೆಯಲಾಗಿದೆ’ ಎಂದು ವಿಜಯ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ನಿರ್ದೇಶಕ ಜಗದೀಶ್‌ ಖಾಟುವಾಲಾ ತಿಳಿಸಿದರು.

ವಿಜಯ್‌ ಇನ್‌ಫ್ರಾ ಕಂಪನಿ ಮಾರ್ಗ್‌ಗೆ ಬರೆದಿರುವ ಪತ್ರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ‘ಬಿಲ್‌ ಪಾವತಿಸದೆ ಇರುವುದರಿಂದ ವಿಮಾನನಿಲ್ದಾಣ ಕಾಮಗಾರಿ ಸ್ಥಗಿತಗೊಳಿಸಲಾಗುವುದು’ ಎಂದೂ ಪತ್ರದಲ್ಲಿ ತಿಳಿಸಿತ್ತು.

ಕೆಎಸ್‌ಐಡಿಸಿ ಅತೃಪ್ತಿ: ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಕುರಿತು ‘ಕರ್ನಾಟಕ ರಾಜ್ಯ ಮೂಲಸೌಲಭ್ಯ ಅಭಿವೃದ್ಧಿ ನಿಗಮ’ (ಕೆಎಸ್‌ಐಡಿಸಿ) ಅತೃಪ್ತಿ ವ್ಯಕ್ತಪಡಿಸಿದೆ. ‘ವಿಮಾನ ನಿಲ್ದಾಣ ಸ್ಥಳಕ್ಕೆ ತಜ್ಞರ ಸಮಿತಿ ಕಳಿಸಿ ವರದಿ ತರಿಸಿಕೊಳ್ಳಲಾಗಿದೆ. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ’ ಎಂದು ಸಮಿತಿ ಹೇಳಿದೆ. ಪುನಃ ಮತ್ತೊಂದು ಸಮಿತಿ ಕಳುಹಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಐಡಿಸಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನನ್ನು ಬಹುತೇಕ ವಶಪಡಿಸಿಕೊಂಡು ಮಾರ್ಗ್‌ಗೆ ಹಸ್ತಾಂತರಿಸಲಾಗಿದೆ. 41 ಎಕರೆಗೆ ಸಂಬಂಧಿಸಿ ಮಾತ್ರ ತಕರಾರಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿವೆ.

ಎರಡೂವರೆ ತಿಂಗಳಿಂದ ವಿಮಾನ ನಿಲ್ದಾಣ ಕಾಮಗಾರಿ ಸ್ಥಗಿತಗೊಂಡಿರುವ ವಿಷಯ ಕೆಎಸ್‌ಐಡಿಸಿಗೆ ಅಥವಾ ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲ.

ಅನೇಕ ಸಮಸ್ಯೆಗಳಿವೆ: ಮಾರ್ಗ್‌

‘ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಹಲವು ಅಡೆತಡೆಗಳಿವೆ. ಅವುಗಳನ್ನು ಒಂದೊಂದಾಗಿ ನಿವಾರಣೆ ಮಾಡಿಕೊಂಡು ಕಾಮಗಾರಿ ತ್ವರಿತಗೊಳಿಸಲಾಗುವುದು‘ ಎಂದು ‘ಮಾರ್ಗ್‌’ ಕಂಪನಿಯ ಹಿರಿಯ ವ್ಯವಸ್ಥಾಪಕ ಅಜಿತ್‌ ಸಷ್ಟಪಡಿಸಿದರು.

‘ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನು ಹಳ್ಳಕೊಳ್ಳಗಳಿಂದ ಕೂಡಿದ್ದು, ಅದೇ ಮಾದರಿಯ ಮಣ್ಣು ತರಿಸಿ ಭರ್ತಿ ಮಾಡಬೇಕಿದೆ. ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಜತೆ ಚರ್ಚಿಸಲಾಗುತ್ತಿದೆ. ಯೋಜನೆಗೆ ಪರಿಸರ ಇಲಾಖೆ ಅನುಮತಿ ಸಿಗಬೇಕಿದೆ. ಅಲ್ಲದೆ, ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಜಮೀನು ಹಸ್ತಾಂತರಿಸಿಲ್ಲ. ಈ ಬಗ್ಗೆ ಯಾರನ್ನೂ ದೂಷಿಸಲು ನಾವು ಇಷ್ಟಪಡುವುದಿಲ್ಲ’ ಎಂದು ಅಜಿತ್‌ ವಿವರಿಸಿದರು.

‘ಬಿಲ್‌ ಪಾವತಿಸದ ಕುರಿತು ನಮ್ಮ ಪಾಲುದಾರ ಕಂಪನಿ ವಿಜಯ್‌ ಇನ್‌ಫ್ರಾ ಪ್ರಾಜೆಕ್ಟ್‌ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ. ಅಕೌಂಟ್ಸ್‌ ವಿಭಾಗದಲ್ಲಿ ಪರಿಶೀಲಿಸಲಾಗುವುದು. ಸದರಿ ಕಂಪನಿ ಜತೆ ಯಾವುದೇ ಸಮಸ್ಯೆ ಇಲ್ಲ’ ಎಂದರು.

‘ನವೆಂಬರ್‌ನಲ್ಲಿ ಬಿದ್ದ ಅಕಾಲಿಕ ಮಳೆಯಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಗಿದ್ದರಿಂದ ಕಾಮಗಾರಿ ನಿಲ್ಲಿಸಲಾಯಿತು’ ಎಂದು ಮಾರ್ಗ್‌ನ ಮತ್ತೊಬ್ಬ ಹಿರಿಯ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT