ಬುಧವಾರ, ಅಕ್ಟೋಬರ್ 21, 2020
24 °C
ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಂದ ಆದೇಶ

ಹೊಸಪೇಟೆ: ಶಾಸಕ ಭೀಮಾ ನಾಯ್ಕ ಸಹಕಾರ ಸಂಘದ ಸದಸ್ಯತ್ವ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Bheema Naik L B P

ಹೊಸಪೇಟೆ: ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ ದಾಖಲೆಗಳು ಖೊಟ್ಟಿ ಎಂದು ಸಾಬೀತಾಗಿರುವುದರಿಂದ ಹಗರಿಬೊಮ್ಮನಹಳ್ಳಿ ಶಾಸಕ ಎಲ್‌.ಬಿ.ಪಿ. ಭೀಮಾ ನಾಯ್ಕ ಅವರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವವನ್ನು ರದ್ದುಗೊಳಿಸಿ ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಲಿಯಾಕತ್‌ ಅಲಿ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ಭೀಮಾ ನಾಯ್ಕ ಅವರ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಸ್ಥಾನ, ರಾಯಚೂರು, ಬಳ್ಳಾರಿ, ಕೊಪ್ಪಳ (ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವೂ ಹೋಗಲಿದೆ.
2013, 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಭೀಮಾ ನಾಯ್ಕ ಅವರು ತಮ್ಮ ಪ್ರಮಾಣ ಪತ್ರದಲ್ಲಿ ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ದೃಢಪಡಿಸಿದ್ದಾರೆ. ಆದರೆ, ಅವರು ಆಯ್ಕೆಯಾದ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಂಘ ಅದರ ವ್ಯಾಪ್ತಿಗೆ ಬರುವುದಿಲ್ಲ. ಅಷ್ಟೇ ಅಲ್ಲ, ತಾನು ಅಡವಿ ಆನಂದದೇವನಹಳ್ಳಿ ನಿವಾಸಿ ಎಂದು ಸಾಬೀತುಪಡಿಸಲು ಜಮೀನು ಗುತ್ತಿಗೆ, ಮನೆ ಬಾಡಿಗೆಯ ಛಾಪಾ ಕಾಗದದ ಕರಾರು ಪತ್ರಗಳನ್ನು ಭೀಮಾ ನಾಯ್ಕ ಸಲ್ಲಿಸಿದ್ದಾರೆ. ಆದರೆ, ಅವುಗಳು ನೋಂದಣಿ ಆಗಿಲ್ಲ. ತಹಶೀಲ್ದಾರ್‌ ಕೂಡ ಭೀಮಾ ನಾಯ್ಕ ಅವರು ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ತಿಳಿಸಿದ್ದಾರೆ. ಹಾಗಾಗಿ ಅವರು ಸದಸ್ಯರಾಗಿ ಮುಂದುವರಿಯಲು ಅರ್ಹರಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸದಸ್ಯತ್ವ ರದ್ದಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭೀಮಾ ನಾಯ್ಕ ಅವರ ಆಯ್ಕೆ ಪ್ರಶ್ನಿಸಿ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಕೆ. ಬಸವರಾಜ, ಆರ್‌. ನಾಗನಗೌಡ ಅವರು ದೂರು ಸಲ್ಲಿಸಿದ್ದರು. 

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಭೀಮಾ ನಾಯ್ಕ, ‘ನನಗೆ ನ್ಯಾಯಾಲಯದ ಮೇಲೆ ಗೌರವ ಇದೆ. ಆದರೆ, ಇದು ಸಂಪೂರ್ಣ ರಾಜಕೀಯ ಪ್ರೇರಿತವಾದುದು. ಕೆಲ ಬಿಜೆಪಿ ಸಚಿವರು, ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಈ ಕೆಲಸ ಮಾಡಿಸಿದ್ದಾರೆ. ಅದರಲ್ಲೂ ಮಾಜಿ ಶಾಸಕ ನೇಮರಾಜ ನಾಯ್ಕ ಅವರು ನನ್ನನ್ನು ಚುನಾವಣೆಯಲ್ಲಿ ನೇರವಾಗಿ ಸ್ಪರ್ಧಿಸಲು ಆಗದೆ ಹಿಂಬಾಗಿಲಿನ ಮೂಲಕ ಈ ಕೆಲಸ ಮಾಡಿಸಿದ್ದಾರೆ. ನಾನು ಸದಸ್ಯನಾಗಿ ಆಯ್ಕೆಯಾಗಿ 44 ತಿಂಗಳು ಕಳೆದಿವೆ. ಹೊಸದಾಗಿ ಚುನಾವಣೆ ನಡೆಯಲು 16 ತಿಂಗಳು ಬೇಕು. ದೂರುದಾರರು ಇಷ್ಟು ದಿನ ಏನು ಮಾಡಿದ್ದಾರೆ. ಈ ಕುರಿತು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಿದ್ದು, ನ್ಯಾಯ ಸಿಗುವ ವಿಶ್ವಾಸ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು