ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಕ್ಕಸಾಗರ ಗ್ರಾಮ ಪಂಚಾಯಿತಿ: ಸ್ವಚ್ಛತೆಗೂ ಸೈ, ಶುದ್ಧ ನೀರಿಗೂ ಸೈ

ಗಾಂಧಿ ಪುರಸ್ಕಾರದ ಗರಿ
Last Updated 1 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಎಲ್ಲೆಡೆ ಸ್ವಚ್ಛವಾದ ಪರಿಸರ, ಅತ್ಯುತ್ತಮವಾದ ಸಿ.ಸಿ. ರಸ್ತೆ, ಚರಂಡಿಗಳ ನಿರ್ಮಾಣ ಹಾಗೂ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ.

ಇದು ತಾಲ್ಲೂಕಿನ ಬುಕ್ಕಸಾಗರ ಹಾಗೂ ವೆಂಕಟಾಪುರ ಗ್ರಾಮದಲ್ಲಿ ಕಂಡು ಬಂದ ಚಿತ್ರಣ. ಬುಕ್ಕಸಾಗರ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಯ ಪರಸ್ಪರ ಸಹಕಾರದಿಂದ ಹಾಗೂ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡ ಕಾರಣ ಎರಡೂ ಗ್ರಾಮಗಳಲ್ಲಿ ಬದಲಾವಣೆ ನೋಡುವಂತಾಗಿದೆ.

ಬುಕ್ಕಸಾಗರ ಪಂಚಾಯಿತಿ ವ್ಯಾಪ್ತಿಗೆ ವೆಂಕಟಾಪುರ ಗ್ರಾಮ ಬರುತ್ತದೆ. ಎರಡೇ ಗ್ರಾಮಗಳ ಸೀಮಿತ ವ್ಯಾಪ್ತಿ ಇರುವುದರಿಂದ ಪಂಚಾಯಿತಿಗೆ ಬರುವ ಅನುದಾನವನ್ನೇ ಸೂಕ್ತ ರೀತಿಯಲ್ಲಿ ಬಳಸಿಕೊಂಡು ಅಭಿವೃದ್ಧಿ ಕಡೆಗೆ ದಾಪುಗಾಲು ಇಟ್ಟಿವೆ.

ಕಣ್ಣೆದುರೇ ನದಿ ಹರಿದು ಹೋಗುತ್ತಿದ್ದರೂ ಜನ ಶುದ್ಧವಾದ ಕುಡಿಯುವ ನೀರಿಗೆ ಪರದಾಟ ನಡೆಸುವಂತಹ ಪರಿಸ್ತಿತಿ ಇತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬಹುಗ್ರಾಮ ಯೋಜನೆಯಡಿ ನದಿಯಿಂದ ನೀರು ಪೂರೈಸಲಾಗುತ್ತಿದೆ. ಅಷ್ಟೇ ಅಲ್ಲ, ಎರಡೂ ಗ್ರಾಮಗಳಲ್ಲಿ ತಲಾ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ, ಪೂರೈಕೆ ಮಾಡಲಾಗುತ್ತಿದೆ.

ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲೂ ಉತ್ತಮ ಕೆಲಸವಾಗಿದೆ. ಗ್ರಾಮದ ಹೊರವಲಯದಲ್ಲಿ ಎರಡು ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಪಂಚಾಯಿತಿ ವತಿಯಿಂದಲೇ ಎರಡು ಸುಸಜ್ಜಿತವಾದ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿಕೊಡಲಾಗಿದೆ.

ಇನ್ನು ಬುಕ್ಕಸಾಗರ ಗ್ರಾಮದಲ್ಲಿ ಸಿ.ಸಿ. ರಸ್ತೆ, ಚರಂಡಿ ನಿರ್ಮಾಣ ಕೆಲಸ ಪೂರ್ಣಗೊಂಡರೆ, ವೆಂಕಟಾಪುರದಲ್ಲಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಬಯಲು ಶೌಚಾಲಯವನ್ನು ಸಂಪೂರ್ಣ ತಡೆಯಲು ಮಹತ್ವದ ಕೆಲಸವಾಗಿದ್ದು, ಸಾರ್ವಜನಿಕರಿಗೆ ಶೌಚಾಲಯಗಳನ್ನು ಕಟ್ಟಿಸಿಕೊಡಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ 300ಕ್ಕೂ ಹೆಚ್ಚು ಜನರಿಗೆ ಉದ್ಯೋಗಗಳನ್ನು ಸೃಜಿಸಲಾಗಿದೆ. ಅವುಗಳ ಅಡಿಯಲ್ಲೇ ಚೆಕ್‌ ಡ್ಯಾಂ, ಅಂಗನವಾಡಿಗಳನ್ನು ನಿರ್ಮಿಸಿರುವುದು ವಿಶೇಷ. ತೆರಿಗೆ ವಸೂಲಿಯಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ. ಇದಷ್ಟೇ ಅಲ್ಲ, ಕಾಲಕಾಲಕ್ಕೆ ಗ್ರಾಮ ಸಭೆ, ವಾರ್ಡ್‌ ಸಭೆ, ಮಕ್ಕಳ ಸಭೆ, ಕಿಶೋರ ಬಾಲ ಸಭೆ ನಡೆಸಿಕೊಂಡು ಬರಲಾಗುತ್ತಿದೆ. ಒಂದೇ ವರ್ಷದ ಅವಧಿಯಲ್ಲಿ ಎರಡು ಬಾಲ್ಯ ವಿವಾಹಗಳನ್ನು ತಡೆದು, ನಿಲ್ಲಿಸಲಾಗಿದೆ. ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಸ್ವ ಇಚ್ಛೆಯಿಂದಲೇ ಹಿಂಜರಿಯುವಂತೆ ಮಾಡಿರುವುದು ವಿಶೇಷ.

‘ಯಾವುದೇ ವಿಷಯವಿರಲಿ ಜನಪ್ರತಿನಿಧಿಗಳು, ಅಲ್ಲಿನ ಸಿಬ್ಬಂದಿ ತಕ್ಷಣವೇ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ. ಸರ್ಕಾರದಿಂದ ಬರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಗ್ರಾಮದ ಅಭಿವೃದ್ಧಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ವೆಂಕಟಾಪುರ ಗ್ರಾಮದ ನಿವಾಸಿ ಶಿವಪ್ಪ.

‘ಗ್ರಾಮದ ಬಹುತೇಕ ಜನ ಈ ಹಿಂದೆ ಬಯಲಲ್ಲೇ ಶೌಚಾಲಯಕ್ಕೆ ಹೋಗುತ್ತಿದ್ದರು. ಈಗ ಎಲ್ಲರಿಗೂ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿರುವುದರಿಂದ ಅದು ನಿಂತು ಹೋಗಿದೆ’ ಎಂದು ಬುಕ್ಕಸಾಗರದ ಹನುಮಂತ ಪ್ರತಿಕ್ರಿಯಿಸಿದರು.

‘ಚರಂಡಿಗಳನ್ನು ಕಟ್ಟಿಸಿದ್ದಾರೆ. ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸಲು ಆದ್ಯತೆ ಕೊಡಬೇಕು. ಎಲ್ಲೆಡೆ ನಿತ್ಯ ಫಾಗಿಂಗ್‌ ಮಾಡಬೇಕು. ಸ್ವಚ್ಛತೆಗೆ ಇನ್ನಷ್ಟು ಒತ್ತು ಕೊಟ್ಟರೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ’ ಎಂದರು ಸುರೇಶ.

*
ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಗ್ರಾಮಸ್ಥರ ಸಹಕಾರದಿಂದ ಉತ್ತಮ ಕೆಲಸ ಮಾಡುವಂತಾಗಿದೆ. ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ.
-ಶ್ರೀಶೈಲಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

*
ಯಾವುದೇ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮುಂಚೆ ಗ್ರಾಮ ಸಭೆಯಲ್ಲಿ ಚರ್ಚಿಸಿ, ಸಲಹೆ ಪಡೆದು ಮುಂದುವರೆಯುತ್ತೇವೆ.
–ಅಲೀಪುರ ತಿಮ್ಮಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT