ಬಂದ್: ಬಳ್ಳಾರಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ

ಬಳ್ಳಾರಿ: ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೆ.10ರಂದು ದೇಶವ್ಯಾಪಿ ಬಂದ್ಗೆ ಕರೆ ಕೊಟ್ಟಿರುವ ಮೇರೆಗೆ ವಿವಿಧ ಪಕ್ಷ, ಸಂಘಟನೆಗಳು ಬಂದ್ ಚಟುವಟಿಕೆಯಲ್ಲಿ ಬೆಳಿಗ್ಗೆಯಿಂದಲೇ ಪಾಲ್ಗೊಳ್ಳಲಿವೆ.
ಬೆಳಿಗ್ಗೆ 7 ಗಂಟೆಯಿಂದಲೇ ಬಂದ್ ಚಟುವಟಿಕೆಗಳು ಆರಂಭವಾಗಲಿದ್ದು, ಯಾವುದೇ ಅಂಗಡಿ ತೆರೆಯಲು ಅವಕಾಶ ನೀಡದೇ ಇರಲು ಹಾಗೂ ವಾಹನ ಸಂಚಾರವನ್ನೂ ನಿರ್ಬಂಧಿಸಲು ಸಂಘಟನೆಗಳು ನಿರ್ಧರಿಸಿವೆ.
ಬಂದ್ ಕಾರಣದಿಂದಾಗಿ, ಭಾನುವಾರ ಅಂಗಡಿಗಳಲ್ಲಿ, ಪೆಟ್ರೋಲ್ ಬಂಕ್ಗಳಲ್ಲಿ ಹೆಚ್ಚಿನ ಜನ ಸಂದಣಿ ಕಂಡುಬಂತು. ಎಸ್ಯುಸಿಐ ಪಕ್ಷದ ಮುಖಂಡರು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬೆಳಿಗ್ಗೆ 10.30ಕ್ಕೆ ಕೇಂದ್ರದ ಸರ್ಕಾರದ ಪ್ರತಿಕೃತಿ ಸುಟ್ಟು ಬಂದ್ಗೆ ಬೆಂಬಲ ನೀಡಲಿದ್ದಾರೆ.
ಶಾಲೆ–ಕಾಲೇಜಿಗಳಿಗೆ ರಜೆ
ಶಾಲೆ,ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ಆದೇಶಿಸಿದ್ದಾರೆ. 1ನೇ ತರಗತಿಯಿಂದ ಪಿಯುಸಿವರೆಗೂ ರಜೆ ಘೋಷಿಸಲಾಗಿದ್ದು, ಇದನ್ನು ಸರಿದೂಗಿಸುವ ಸಲುವಾಗಿ ಸೆ.15ರ ಶನಿವಾರ ಶಾಲೆ–ಕಾಲೇಜುಗಳು ಇಡೀ ದಿನ ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಭದ್ರತೆ: ‘ಭದ್ರತೆ ಸಲುವಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 18 ತುಕಡಿಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಗೃಹರಕ್ಷಕ ದಳದ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುವುದು. ನಗರ ಮತ್ತು ಗ್ರಾಮಾಂತರ ಪ್ರದೇಶದ ಎಲ್ಲ ಅಧಿಕಾರಿಗಳು ಭದ್ರತಾ ಗಸ್ತು ನಡೆಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ತಿಳಿಸಿದರು.
ಕ್ರೀಡಾಕೂಟ ಮುಂದೂಡಿಕೆ: ಸಾರ್ವಜನಿಕ ಶಿಕ್ಷಣ ಇಲಾಖೆಯು ಸೋಮವಾರದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ, ಸಿರುಗುಪ್ಪ ಮತ್ತು ಕೂಡ್ಲಿಗಿಯಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಸೆ. 11 ಮತ್ತು 12ರಂದು ಕ್ರೀಡಾಕೂಟ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಹಮತ್ ಉಲ್ಲಾ ತಿಳಿಸಿದ್ದಾರೆ,
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.