ಶನಿವಾರ, ಜುಲೈ 31, 2021
21 °C
ಪ್ರಯಾಣಿಕರ ನಿರೀಕ್ಷೆಯಲ್ಲಿ ಹೊಸಪೇಟೆ, ಬಳ್ಳಾರಿ ಸಾರಿಗೆ ವಿಭಾಗ

ಇನ್ನಷ್ಟು ಸಡಿಲಿಕೆ; ಇಂದಿನಿಂದ ಬಸ್‌ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಗಣನೀಯವಾಗಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ತಗ್ಗುತ್ತಿರುವುದರಿಂದ ಎರಡೂ ಜಿಲ್ಲೆಯಲ್ಲಿ ಸೋಮವಾರದಿಂದ (ಜೂ.21) ಲಾಕ್‌ಡೌನ್‌ನಲ್ಲಿ ಇನ್ನಷ್ಟು ಸಡಿಲಿಕೆ ನೀಡಲು ನಿರ್ಧರಿಸಲಾಗಿದೆ.

ಈ ಹಿಂದಿನಂತೆಯೇ ಬೆಳಿಗ್ಗೆ ಆರರಿಂದ ಮಧ್ಯಾಹ್ನ 2ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಈ ವಿನಾಯಿತಿ ಕೊಡಲಾಗಿದೆ. ಎಂದಿನಂತೆ ವಾರಾಂತ್ಯದ ಕರ್ಫ್ಯೂ ಇರಲಿದೆ. ಆದರೆ, ಸೋಮವಾರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ರಸ್ತೆಗೆ ಇಳಿಯಲಿವೆ.

ಹೊಸಪೇಟೆ, ಬಳ್ಳಾರಿ ವಿಭಾಗದಿಂದ ತಾಲ್ಲೂಕಿನ ವಿವಿಧ ಭಾಗಗಳಿಗೆ ಬಸ್‌ ಓಡಿಸಲು ನಿರ್ಧರಿಸಲಾಗಿದೆ. ಆದರೆ, ಇದೆಲ್ಲವೂ ಪ್ರಯಾಣಿಕರ ಲಭ್ಯತೆ ಮೇಲೆ ತೀರ್ಮಾನವಾಗಲಿದೆ. ಶೇ 50ರಷ್ಟು ಪ್ರಯಾಣಿಕರೊಂದಿಗೆ ಬಸ್‌ಗಳನ್ನು ಓಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಆಸನಗಳನ್ನು ಗುರುತಿಸಲಾಗಿದೆ. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರಯಾಣಿಕರು ಈ ಕಡೆ ಸುಳಿಯುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

ಲಾಕ್‌ಡೌನ್‌ನಲ್ಲಿ ಈಗಾಗಲೇ ಹಲವು ಬಸ್‌ಗಳನ್ನು ದುರಸ್ತಿಗೊಳಿಸಿ, ಸಜ್ಜುಗೊಳಿಸಲಾಗಿದೆ. ಹೊಸದಾಗಿ ನಾಮಫಲಕಗಳನ್ನು ಬರೆಸಲಾಗಿದೆ. ಎಲ್ಲ ಬಸ್ಸುಗಳಿಗೆ ಸ್ಯಾನಿಟೈಸರ್‌ ಮಾಡಿ, ರಸ್ತೆಗೆ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸೋಮವಾರ ಬೆಳಿಗ್ಗೆ ಆರು ಗಂಟೆಯಿಂದಲೇ ಬಸ್ಸುಗಳು ರಸ್ತೆಗೆ ಇಳಿಯಲಿದ್ದು, ಸಂಜೆ ಏಳು ಗಂಟೆಯ ವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಗರದ ಕೇಂದ್ರ ಬಸ್‌ ನಿಲ್ದಾಣದ ಗೋಡೆಗಳ ಮೇಲೆ ಕೊರೊನಾ ಜಾಗೃತಿ ಚಿತ್ರ ಬರಹ ಬರೆಸಲಾಗಿದೆ. ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್‌ ಧರಿಸುವುದರ ಕುರಿತು ತಿಳಿವಳಿಕೆ ಮೂಡಿಸುವ ಚಿತ್ರಗಳು ಗಮನ ಸೆಳೆಯುತ್ತಿವೆ.

‘ಮೊದಲ ದಿನ ಹೊಸಪೇಟೆ ವಿಭಾಗದಿಂದ 30 ಸೇರಿದಂತೆ ತಾಲ್ಲೂಕು ಕೇಂದ್ರಗಳಿಂದ ಒಟ್ಟು 100 ಬಸ್‌ ಓಡಿಸುವ ಯೋಚನೆ ಇದೆ. ಆದರೆ, ಎಲ್ಲವೂ ಪ್ರಯಾಣಿಕರನ್ನು ಅವಲಂಬಿಸುತ್ತದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು