ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಸಿಂಗ್‌ ಕುಟುಂಬಕ್ಕೆ ‘ವರ’!

Last Updated 23 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ಕ್ಷೇತ್ರದಲ್ಲಿ ಇದುವರೆಗೆ ನಡೆದ ಉಪಚುನಾವಣೆಗಳು ಸಿಂಗ್‌ ಕುಟುಂಬದ ಪಾಲಿಗೆ ವರವಾಗಿ ಪರಿಣಮಿಸಿವೆ.

ಕ್ಷೇತ್ರ ಈ ಹಿಂದೆ ಎರಡು ಉಪಚುನಾವಣೆಗಳನ್ನು ಕಂಡಿದೆ. ಎರಡರಲ್ಲೂ ಸಿಂಗ್‌ ಮನೆತನದವರದ್ದೇ ಜಯಶಾಲಿಯಾಗಿರುವುದು ವಿಶೇಷ. 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರೈತ ಮುಖಂಡ ಆರ್‌. ನಾಗನಗೌಡ ಅವರು ಕಾಂಗ್ರೆಸ್‌ನಿಂದ ಜಯಭೇರಿ ಬಾರಿಸಿದ್ದರು. ಅನಾರೋಗ್ಯದಿಂದ ಅವರು 1970ರಲ್ಲಿ ನಿಧನ ಹೊಂದಿದರು. ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಆನಂದ ಸಿಂಗ್‌ ಅವರ ದೊಡ್ಡಪ್ಪ ಬಿ. ಸತ್ಯನಾರಾಯಣ ಸಿಂಗ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಅಷ್ಟೇ ಅಲ್ಲ, 1972ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿ. ಸತ್ಯನಾರಾಯಣ ಸಿಂಗ್‌ ಪುನರಾಯ್ಕೆಗೊಂಡು, ಐದು ವರ್ಷ ಶಾಸಕರಾಗಿ ಕೆಲಸ ನಿರ್ವಹಿಸಿದರು.

‘ಸತ್ಯನಾರಾಯಣ ಸಿಂಗ್‌ ಅವರು ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಾಮಾಜಿಕ ಕಳಕಳಿ, ಅಭಿವೃದ್ಧಿ ಕುರಿತು ದೂರದೃಷ್ಟಿ, ಸಾಮಾಜಿಕ ನ್ಯಾಯದ ಪರವಾಗಿದ್ದರು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಭಾವೈಕ್ಯತಾ ವೇದಿಕೆಯ ಸಂಚಾಲಕ ಪಿ. ಅಬ್ದುಲ್ಲಾ.

ಶಾಸಕ ಗುಜ್ಜಲ್‌ ಹನುಮಂತಪ್ಪ ಅವರ ನಿಧನದಿಂದ ಕ್ಷೇತ್ರ 1991ರಲ್ಲಿ ಮತ್ತೊಂದು ಉಪಚುನಾವಣೆ ಎದುರಿಸಬೇಕಾಯಿತು. ಆ ಚುನಾವಣೆಗೆ ಸತ್ಯನಾರಾಯಣ ಸಿಂಗ್‌ ಅವರ ಹಿರಿಯ ಮಗ ರತನ್‌ ಸಿಂಗ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

‘ತನ್ನದೇ ಆದ ವರ್ಚಸ್ಸು ಸಾಧಿಸಿಕೊಳ್ಳಲು ವಿಫಲರಾದ ಕಾರಣ ರತನ್‌ ಸಿಂಗ್‌ ಅವರು ರಾಜಕೀಯದಲ್ಲಿ ಹೆಚ್ಚು ಬೆಳೆಯಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. 2008, 2013 (ಬಿಜೆಪಿಯಿಂದ) ಹಾಗೂ 2018ರ (ಕಾಂಗ್ರೆಸ್‌ನಿಂದ) ಚುನಾವಣೆಯಲ್ಲಿ ಸತತ ಮೂರು ಸಲ ಗೆದ್ದು ದಾಖಲೆ ನಿರ್ಮಿಸಿದ ಆನಂದ್‌ ಸಿಂಗ್‌ ಸದ್ಯ ಅನರ್ಹಗೊಂಡಿದ್ದಾರೆ.

ಸಿಂಗ್‌ ಆರಿಸಿ ಬಂದ ಒಂದೂವರೆ ವರ್ಷದೊಳಗೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಆದರೆ, ಸಿಂಗ್‌ ಅವರ ಅನರ್ಹತೆ ಪ್ರಕರಣ ಇನ್ನಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳಬೇಕಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ನಾಮಪತ್ರ ಸಲ್ಲಿಸಲು ಸೆ. 30 ಕೊನೆ ದಿನವಾಗಿದೆ. ಅಷ್ಟರೊಳಗೆ ನ್ಯಾಯಾಲಯದಲ್ಲಿ ವಿಚಾರಣೆ ಮುಗಿದು ತೀರ್ಪು ಹೊರಬರದಿದ್ದರೆ ಸಿಂಗ್‌ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT