ಸೋಮವಾರ, ಜುಲೈ 4, 2022
22 °C

ಆರ್‌ಎಫ್‌ಒ ವಿನಯ್‌ಗೆ ಮುಖ್ಯಮಂತ್ರಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ವಲಯ ಅರಣ್ಯ ಅಧಿಕಾರಿ (ಆರ್‌ಎಫ್‌ಒ) ವಿನಯ್‌ ಕೆ.ಸಿ. ಅವರು 2021ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಅರಣ್ಯ ಸಂರಕ್ಷಣೆ ವಿಭಾಗದಲ್ಲಿ ವಿನಯ್‌ ಅವರು ಆಯ್ಕೆಯಾಗಿದ್ದಾರೆ. ಜೋಳದರಾಶಿ ಗುಡ್ಡ, ಹುಡಾ ಉದ್ಯಾನ, ಗುಂಡಾ ಸಸ್ಯ ಉದ್ಯಾನ, ಕಂಪ್ಲಿ ಸೋಮಪ್ಪನ ಕೆರೆ, ಹಂಪಿಯಲ್ಲಿ ಹಸಿರೀಕರಣಕ್ಕೆ ಶ್ರಮಿಸಿದ್ದಾರೆ.

ಎಂಜಿಎನ್‌ಆರ್‌ಇಜಿಎ ಯೋಜನೆ ಅನುಷ್ಠಾನ, 2014ರಿಂದ 2020ರ ಅವಧಿಯಲ್ಲಿ ನಾಗರಹೊಳೆ ಸಂರಕ್ಷಿತ ಪ್ರದೇಶದಲ್ಲಿ ಕಳೆ, ನೀರು ನಿರ್ವಹಣೆ ಕಾಮಗಾರಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕೆ ಅವರನ್ನು ಸಿ.ಎಂ. ಪದಕಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌. ಶ್ರೀನಿವಾಸ್‌ ತಿಳಿಸಿದ್ದಾರೆ.

ಅಂಬೇಡ್ಕರ್‌ ಸಂಘ ಉದ್ಘಾಟನೆ 29ಕ್ಕೆ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ಉದ್ಘಾಟನೆ ಮೇ 29ರಂದು ನಗರದ ಸಾಯಿಲೀಲಾ ರಂಗಮಂದಿರದಲ್ಲಿ ನಡೆಯಲಿದೆ.

ಬೆಳಿಗ್ಗೆ 9ಕ್ಕೆ ಮೆರವಣಿಗೆ ನಡೆಯಲಿದೆ. 11ಕ್ಕೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸುವರು. ಮೈಸೂರಿನ ಉರಿಲಿಂಗಿ ಪೆದ್ದಿ ಶಾಖಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕಾಂಗ್ರೆಸ್‌ ಮುಖಂಡ ಎಚ್‌. ಆಂಜನೇಯ ಪಾಲ್ಗೊಳ್ಳುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಸೋಮಶೇಖರ್‌ ಬಣ್ಣದಮನೆ ತಿಳಿಸಿದ್ದಾರೆ.

ಶಾಲಾ ಪೂರ್ವ ಶಿಕ್ಷಣ ತರಬೇತಿ

ಹೊಸಪೇಟೆ (ವಿಜಯನಗರ): ಇಲ್ಲಿನ ಎಂ.ಜೆ. ನಗರದ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಪೂರ್ವ ಶಿಕ್ಷಣ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರಸಭೆ ಸದಸ್ಯ ಮಂಜುನಾಥ ಉದ್ಘಾಟಿಸಿ, ಅಂಗನವಾಡಿ ಕೇಂದ್ರಗಳು ಆಂಗ್ಲ ಮಾಧ್ಯಮ ಶಾಲೆಗಳಂತೆ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ಕೊಡಬೇಕು ಎಂದು ತಿಳಿಸಿದರು. ಮೇಲ್ವಿಚಾರಕಿ ಅನುಪಮ, ಮುಖ್ಯಶಿಕ್ಷಕಿ ಪ್ರತಿಮಾ ಇದ್ದರು.

ಮೋದಿ ಆಯುರಾರೋಗ್ಯಕ್ಕೆ ಪೂಜೆ

ಹೊಸಪೇಟೆ (ವಿಜಯನಗರ): ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಯ, ಆರೋಗ್ಯ, ರಾಜಕೀಯ ಬೆಳವಣಿಗೆಗಾಗಿ ಮೋದಿ ಅಭಿಮಾನಿ ಬಳಗದವರು ಗುರುವಾರ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಮಾಡಿಸಿದರು.

‘ಎಂಟು ವರ್ಷಗಳಿಂದ ಮೋದಿಯವರು ದೇಶದ ಪ್ರಧಾನಿಯಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಈ ದೇಶಕ್ಕೆ ಅವರ ಅಗತ್ಯ ಬಹಳ ಇದ್ದು, ಮತ್ತೊಮ್ಮೆ ಅವರು ಈ ದೇಶದ ಪ್ರಧಾನಿಯಾಗಬೇಕು’ ಎಂದು ಪ್ರಾರ್ಥಿಸಿದರು.

ಬಳಗದ ವಿರುಪಾಕ್ಷಿ ವಿ. ಹಂಪಿ, ಎಚ್‌. ಹುಲಗಪ್ಪ, ಎಸ್. ದೇವರಾಜ್, ನಂಜುಂಡಿ, ಎಚ್. ಬಸವರಾಜ್, ಮಂಜುನಾಥ್ ಗೌಡ ಇದ್ದರು.

364 ಕ್ರೀಡಾಪಟುಗಳು ಭಾಗಿ

ಹೊಸಪೇಟೆ (ವಿಜಯನಗರ): ಮೇ 30ರಿಂದ ಜೂನ್‌ 1ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಜಯನಗರ ಜಿಲ್ಲೆಯ 364 ಕ್ರೀಡಾಪಟುಗಳು ಭಾಗವಹಿಸುವರು.

ವೈಯಕ್ತಿಕ ಕ್ರೀಡೆಯಲ್ಲಿ 244 ಮತ್ತು ಗುಂಪು ಆಟಗಳಲ್ಲಿ 120 ನೌಕರರು ಪಾಲ್ಗೊಳ್ಳುವರು ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ಮಲ್ಲಿಕಾರ್ಜುನ ಗೌಡ ತಿಳಿಸಿದ್ದಾರೆ.

ಐಟಿಐಗೆ ಅರ್ಜಿ ಆಹ್ವಾನ

ಹೊಸಪೇಟೆ (ವಿಜಯನಗರ): ನಗರದ ಜಂಬುನಾಥ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐ.ಟಿ.ಐ.) ಪ್ರಸಕ್ತ ಸಾಲಿನಲ್ಲಿ ವಿವಿಧ ವೃತ್ತಿ ತರಬೇತಿಯ ಪ್ರವೇಶಕ್ಕಾಗಿ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಜೂನ್ 6ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ 94481 73751, 94491 34920, 98451 37178 ಸಂಪರ್ಕಿಸಬಹುದು.

ಋತುಚಕ್ರ ನೈರ್ಮಲ್ಯ ಕಾರ್ಯಕ್ರಮ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಪಾಪಿನಾಯಕನಹಳ್ಳಿಯ ತಿಮ್ಮಪ್ಪ ದೇವಸ್ಥಾನದಲ್ಲಿ ಗುರುವಾರ ಮಹಿಳೆಯರಿಗೆ ‘ಋತುಚಕ್ರ ನೈರ್ಮಲ್ಯ’ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜೆಸಿಐ ಸಂಸ್ಥೆಯ ಡಾ. ಪಲ್ಲವಿ ಮಾತನಾಡಿ, ‘ಋತುಚಕ್ರ ಎನ್ನುವುದು ನೈಸರ್ಗಿಕ ಪ್ರಕ್ರಿಯೆ. ಅದರ ಬಗ್ಗೆ ಯಾವುದೇ ಸಂಕುಚಿತ ಮನೋಭಾವನೆ ಇಟ್ಟುಕೊಳ್ಳದೆ, ಮೌಢ್ಯಗಳನ್ನು ಪಾಲಿಸದೆ ವೈಜ್ಞಾನಿಕ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಉಮೇಶ ಎಂ. ಮಾತನಾಡಿ, ‘ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಅಂಶ ಕನಿಷ್ಠ 12 ಗ್ರಾಂ ಇರಬೇಕು. ಆದರೆ, ಪೌಷ್ಟಿಕಾಂಶದ ಕೊರತೆಯಿಂದ ಅದಕ್ಕಿಂತ ಕಡಿಮೆ ಇರುವುದು ಗೊತ್ತಾಗಿದೆ. ಋತುಸ್ರಾವದ ವೇಳೆ ಅದು ಇನ್ನಷ್ಟು ತಗ್ಗುತ್ತದೆ. ಮಹಿಳೆಯರು ಐರನ್ ಮತ್ತು ಫೋಲಿಕ್ ಆ್ಯಸಿಡ್ ಮಾತ್ರೆಗಳನ್ನು ಸೇವಿಸಬೇಕು’ ಎಂದು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು