ಗುರುವಾರ , ನವೆಂಬರ್ 14, 2019
19 °C

ವಾಜಪೇಯಿ ಜೈವಿಕ ಉದ್ಯಾನ | ಯೂರೋಪ್‌ನಿಂದ ಪ್ರಾಣಿ ತರಲು ಚಿಂತನೆ: ಸಿಸಿ ಪಾಟೀಲ

Published:
Updated:

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಬಿಳಿಕಲ್‌ ಸಂರಕ್ಷಿತ ಅರಣ್ಯದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಶನಿವಾರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿತು.

ಜೂನ್‌ನಲ್ಲೇ ಹುಲಿ, ಸಿಂಹ ಸಫಾರಿ ಆರಂಭಗೊಂಡಿದೆ. ಹಂಪಿ ಮೃಗಾಲಯದ ಪ್ರಾಣಿ ಪಕ್ಷಿಗಳ ಆವರಣವನ್ನು ಅರಣ್ಯ, ಪರಿಸರ, ಜೀವಶಾಸ್ತ್ರ, ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಅವರು ಉದ್ಘಾಟಿಸುವುದರೊಂದಿಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದರು.

ಒಟ್ಟು 141.49 ಹೆಕ್ಟೇರ್‌ ಪೈಕಿ 11.8 ಹೆಕ್ಟೇರ್‌ ಮೃಗಾಲಯಕ್ಕೆ ಮೀಸಲಿಡಲಾಗಿದೆ. ಒಟ್ಟು 10 ಆವರಣಗಳಿದ್ದು,  ಇದರಲ್ಲಿ ನಾಲ್ಕು ಸಸ್ತನಿಗಳು,  ಐದು ಮಾಂಸಹಾರಿ ಪ್ರಾಣಿಗಳು, ಒಂದು ಸರೀಸೃಪಗಳ ಆವರಣ ಸೇರಿದೆ. ಈ  ಆವರಣಗಳಲ್ಲಿ ಚಿರತೆ, ಕರಡಿ, ಕತ್ತೆಕಿರುಬ, ಗುಳ್ಳೆ ನರಿ, ಬೂದುತೋಳ, ಮೊಸಳೆ, ಕೆಂಪುಮೂತಿ ಮಂಗ, ಹನುಮಾನ್‌ ಮುಸುವ, ಕಪ್ಪುಹಂಸ, ಎಮೂ ಸೇರಿದೆ. ಮೃಗಾಲಯಕ್ಕೆ ಒಟ್ಟು 3.67 ಕೋಟಿ ವೆಚ್ಚ ಮಾಡಲಾಗಿದೆ.

ಇದಕ್ಕೂ ಮುನ್ನ ಮಾತನಾಡಿದ ಸಚಿವ ಸಿ.ಸಿ. ಪಾಟೀಲ, ‘ಕಲ್ಯಾಣ ಕರ್ನಾಟಕದ ಮೊದಲ ಜೈವಿಕ ಉದ್ಯಾನ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ಈ ಉದ್ಯಾನದ ಸಮಗ್ರ ಅಭಿವೃದ್ಧಿಗೆ ₹65.43 ಕೋಟಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಈಗಾಗಲೇ ₹20 ಕೋಟಿ ಬಿಡುಗಡೆಯಾಗಿದೆ. ಬರುವ ದಿನಗಳಲ್ಲಿ ಎನ್‌.ಎಂ.ಡಿ.ಸಿ. ದೇಣಿಗೆ ಮತ್ತು ನಿಶ್ಚಿತ ಠೇವಣಿಯಲ್ಲಿ ಬಂದ ಬಡ್ಡಿ ಹಣದಲ್ಲಿ ಒಟ್ಟು ₹33 ಕೋಟಿ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲಾ ಖನಿಜ ನಿಧಿಯಲ್ಲಿ ಉದ್ಯಾನದ ಅಭಿವೃದ್ಧಿಗೆ ಬಳ್ಳಾರಿ ಜಿಲ್ಲಾಧಿಕಾರಿ ₹5 ಕೋಟಿ ತೆಗೆದಿರಿಸಿದ್ದಾರೆ. ಅದನ್ನು ₹10 ಕೋಟಿ ಹೆಚ್ಚಿಸುವಂತೆ ಸೂಚಿಸಲಾಗುವುದು. ಕೆ.ಎಂ.ಇ.ಆರ್‌.ಸಿ. ಅನುದಾನ ಬಳಕೆಯ ವಿಷಯ ಸುಪ್ರೀಂಕೋರ್ಟ್‌ನಲ್ಲಿ ಇದೆ. ಈ ಕುರಿತು ವಕೀಲರೊಂದಿಗೆ ಚರ್ಚಿಸಿ, ಶೀಘ್ರ ತೀರ್ಪು ಹೊರಬಂದರೆ ಅನುದಾನ ಸದ್ಭಳಕೆ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು. ಯೂರೋಪ್‌ನಿಂದ ಕೆಲ ಪ್ರಾಣಿಗಳನ್ನು ತರುವ ಚಿಂತನೆ ಇದೆ. ಮೈಸೂರು ಮೃಗಾಲಯದ ಮಾದರಿಯಲ್ಲಿ, ಈ ಭಾಗದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)