ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಸರ್ಕಾರಿ ನೀರಲ್ಲ, ಖಾಸಗಿ ನೀರೇ ಇಷ್ಟ!

ಅಶುದ್ಧ ನೀರು ಸರಬರಾಜಿನಿಂದ ಖಾಸಗಿ ಶುದ್ಧ ಕುಡಿವ ನೀರಿನ ಘಟಕಗಳಿಗೆ ಬೇಡಿಕೆಯು
Last Updated 22 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ನಗರಸಭೆಗೆ ಸೇರಿದ ಎರಡು ನೀರಿನ ಶುದ್ಧೀಕರಣ ಘಟಕಗಳಿಂದ ನಗರಕ್ಕೆ ನೀರು ಪೂರೈಸುತ್ತಿದ್ದರೂ ಜನ ಮಾತ್ರ ಖಾಸಗಿ ಘಟಕಗಳ ಮೊರೆ ಹೋಗುತ್ತಿದ್ದಾರೆ!

‘ನಗರಸಭೆಯಿಂದ ನಲ್ಲಿಗಳಿಗೆ ಸರಬರಾಜು ಆಗುವ ನೀರು ಅಶುದ್ಧವಾಗಿರುವುದೇ ಇದಕ್ಕೆ ಕಾರಣ’ ಎನ್ನುತ್ತಾರೆ ಸಾರ್ವಜನಿಕರು. ಅದನ್ನು ಪುಷ್ಟೀಕರಿಸುವ ರೀತಿಯಲ್ಲಿ ಅಂತಹುದೇ ನೀರು ನಗರದ ಬಹುತೇಕ ಬಡಾವಣೆ ಸರಬರಾಜು ಆಗುತ್ತಿರುವುದು. ಹೀಗಾಗಿಯೇ ಜನ ಕುಡಿಯುವ ನೀರನ್ನು ಖಾಸಗಿ ಘಟಕಗಳಿಂದ ಹಣ ಪಾವತಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ. ನಗರಸಭೆಯ ನೀರು ದೈನಂದಿನ ಕೆಲಸಗಳಿಗೆ ಮಾತ್ರ ಸೀಮಿತ ಎಂಬಂತಾಗಿದೆ.

‘ಕೆಲವೊಮ್ಮೆ ನೀರು ಎಷ್ಟು ಅಶುದ್ಧವಾಗಿರುತ್ತದೆ ಎಂದರೆ ಅದು ಬಟ್ಟೆ ಒಗೆಯಲು, ಸ್ನಾನ ಮಾಡುವುದಕ್ಕೂ ಯೋಗ್ಯವಾಗಿರುವುದಿಲ್ಲ’ ಎನ್ನುತ್ತಾರೆ ಸ್ಥಳೀಯರು. ಈ ಹಿಂದಿನ ಸರ್ಕಾರದಲ್ಲಿ ಆರೊಗ್ಯ ಸಚಿವರಾಗಿದ್ದ ಶಿವಾನಂದ ಪಾಟೀಲ ಅವರು ಸ್ವತಃ ಅದನ್ನು ಕಂಡು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಅಮರಾವತಿ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದ ಅವರು, ಸ್ನಾನದ ನೀರು ಸಂಪೂರ್ಣ ಕೆಂಪಾಗಿರುವುದನ್ನು ಕಂಡು ಕೆಂಡಮಂಡಲರಾಗಿದ್ದರು. ಆದರೂ ನಂತರದ ದಿನಗಳಲ್ಲಿ ಪರಿಸ್ಥಿತಿಯಲ್ಲಿ ದೊಡ್ಡ ವ್ಯತ್ಯಾಸವೇನೂ ಕಂಡು ಬಂದಿಲ್ಲ.

ನಗರಸಭೆ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವುದರಲ್ಲಿ ಯಾವುದೇ ರೀತಿಯ ಅರ್ಥವಿಲ್ಲ ಎಂದು ಮನಗಂಡಿರುವ ಜನ, ಖಾಸಗಿ ಘಟಕಗಳಿಂದಲೇ ನೀರು ಕೊಂಡೊಯ್ಯುತ್ತಿದ್ದಾರೆ. ₹5 ಪಾವತಿಸಿದರೆ 20 ಲೀಟರ್‌ ನೀರು ಸಿಗುತ್ತದೆ. ನೀರಿನ ಬೇಡಿಕೆ ಹೆಚ್ಚಾಗಿರುವುದರಿಂದಲೇ ನಗರದಲ್ಲಿ ಸದ್ಯ 60ಕ್ಕೂ ಹೆಚ್ಚು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ನಿರ್ವಹಿಸುತ್ತಿವೆ.

ಅನುಮತಿ ಪಡೆಯದೆ ಘಟಕಗಳನ್ನು ನಡೆಸುತ್ತಿದ್ದ ಕಾರಣಕ್ಕಾಗಿ ಈ ಹಿಂದೆ ಜಿಲ್ಲಾಡಳಿತ ಕೆಲವು ದಿನಗಳವರೆಗೆ ಅವುಗಳನ್ನು ಮುಚ್ಚಿಸಿತ್ತು. ಆದರೆ, ಜನರೇ ಅವುಗಳ ಬೆನ್ನಿಗೆ ನಿಂತು, ಅವುಗಳ ಪರವಾಗಿ ಧ್ವನಿ ಎತ್ತಿದ್ದರು. ಹೀಗಾಗಿ ಪುನಃ ಅವುಗಳು ಬಾಗಿಲು ತೆರೆದವು.

ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳದೇ ಇರುವುದು, ಸೂಕ್ತ ರೀತಿಯಲ್ಲಿ ಪೈಪ್‌ಲೈನ್‌ ದುರಸ್ತಿ ಮಾಡದಿರುವುದು, ನೀರಿನ ಟ್ಯಾಂಕರ್‌ಗಳನ್ನು ಸಕಾಲಕ್ಕೆ ಸ್ವಚ್ಛಗೊಳಿಸದೇ ಇರುವುದು ಅಶುದ್ಧ ನೀರು ಪೂರೈಕೆಯಾಗಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಗರದ ಮುನ್ಸಿಪಲ್‌ ಮೈದಾನದ ಬಳಿ ₹48 ಕೋಟಿ ವೆಚ್ಚದಲ್ಲಿ ಜಪಾನ್‌ ತಂತ್ರಜ್ಞಾನದಲ್ಲಿ ಅತ್ಯಾಧುನಿಕ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಅಲ್ಲಿಯೂ ಸಹ ಟ್ಯಾಂಕರ್‌ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ.

’ಹೊಸ ತಂತ್ರಜ್ಞಾನದ ಸಹಾಯದಿಂದ ಉತ್ತಮ ರೀತಿಯಲ್ಲಿ ನೀರು ಶುದ್ಧೀಕರಿಸಲಾಗುತ್ತಿದೆ. ಆದರೆ, ಟ್ಯಾಂಕರ್‌ ಕಾಲಕಾಲಕ್ಕೆ ಸ್ವಚ್ಛಗೊಳಿಸದ ಕಾರಣ ಮಣ್ಣು ಮಿಶ್ರಿತ, ಕೊಳೆಯಾದ ನೀರು ಪೂರೈಕೆಯಾಗುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನು ಟಿ.ಬಿ. ಡ್ಯಾಂ ಬಳಿಯಿರುವ ಘಟಕದಲ್ಲಿ ಹಳೆಯ ಸಾಧನಗಳಿದ್ದು, ಪದೇ ಪದೇ ಅದು ಕೆಟ್ಟು ಹೋಗುತ್ತಿದೆ. ತಿಂಗಳಲ್ಲಿ ನಾಲ್ಕೈದು ದಿನ ದುರಸ್ತಿ ಹೆಸರಿನಲ್ಲಿ ನೀರು ಸರಬರಾಜಿಗೆ ತೊಂದರೆಯಾಗುತ್ತಿದೆ’ ಎನ್ನುವುದು ಸಾರ್ವಜನಿಕರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT