ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ವಲಯ ಘೋಷಣೆಗೆ ಕ್ಷಣಗಣನೆ

ದರೋಜಿ ಕರಡಿಧಾಮದ ಸುತ್ತ ಅಕ್ರಮ ಚಟುವಟಿಕೆಗಳಿಗೆ ಬೀಳಲಿದೆ ಕಡಿವಾಣ
Last Updated 17 ಡಿಸೆಂಬರ್ 2018, 14:11 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ದರೋಜಿ ಕರಡಿಧಾಮ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಶೀಘ್ರ ಹೊರ ಬೀಳುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯು ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು. ಆ ಗಡುವು ಸೋಮವಾರ ಕೊನೆಗೊಂಡಿದ್ದು, ‘ಪ್ರಜಾವಾಣಿ’ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಯಾರೊಬ್ಬರೂ ಆಕ್ಷೇಪಣೆ ಸಲ್ಲಿಸಿಲ್ಲ. ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ ಕುಮಾರ ಕೂಡ ಅದನ್ನು ದೃಢಪಡಿಸಿದ್ದಾರೆ. ಆಕ್ಷೇಪಣೆಗಳು ಸಲ್ಲಿಕೆಯಾಗದ ಕಾರಣ ಯಾವುದೇ ಕ್ಷಣದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಬಹುದು.

ಅಧಿಸೂಚನೆ ಹೊರಡಿಸಿದ ನಂತರ ದರೋಜಿ ಕರಡಿಧಾಮಕ್ಕೆ ಹೊಂದಿಕೊಂಡಿರುವ ಹೊಸಪೇಟೆ ತಾಲ್ಲೂಕಿನ ಹತ್ತು, ಕಂಪ್ಲಿ ತಾಲ್ಲೂಕಿನ ಆರು ಹಾಗೂ ಸಂಡೂರು ತಾಲ್ಲೂಕಿನ ಒಂದು ಗ್ರಾಮ ಸೇರಿದಂತೆ ಒಟ್ಟು 17 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತವೆ. ಆ ಗ್ರಾಮಗಳ ಸುತ್ತಲಿನ ಪ್ರದೇಶದಲ್ಲಿ ಅದಿರು, ಕಲ್ಲು ಗಣಿಗಾರಿಕೆಗೆ ಕಡಿವಾಣ ಬೀಳಲಿದೆ. ಅರಣ್ಯದಲ್ಲಿರುವ ಅಪರೂಪದ ಗಿಡ, ಮರಗಳು, ಚಿರತೆ, ಕರಡಿ ಸೇರಿದಂತೆ ಇತರೆ ವನ್ಯಜೀವಿಗಳಿಗೆ ರಕ್ಷಣೆ ಸಿಗಲಿದೆ.

‘ದರೋಜಿ ಸುತ್ತಲಿನ ಸ್ಥಳವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆಗೆ ಯಾರೊಬ್ಬರೂ ಆಕ್ಷೇಪಣೆ ಸಲ್ಲಿಸಿಲ್ಲ. ಇದರಿಂದ ಅರಣ್ಯ ಇಲಾಖೆಯ ಹಾದಿ ಸುಗಮವಾಗಿದೆ. ಕರಡಿಗಳ ಸಂತತಿ ವೃದ್ಧಿಯ ನಿಟ್ಟಿನಲ್ಲಿ ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ’ ಜನಸಂಗ್ರಾಮ ಪರಿಷತ್ತಿನ ಸದಸ್ಯ ಶಿವಕುಮಾರ ಮಾಳಗಿ.

‘ಸೂಕ್ಷ್ಮ ವಲಯ ಘೋಷಿಸಿದ ನಂತರ ಅರಣ್ಯ ಇಲಾಖೆಯು ಎಲ್ಲ 17 ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸಬೇಕು. ಸ್ಥಳೀಯರಿಗೆ ಅದರ ಸಂಪೂರ್ಣ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಜನ ಅರಿವಿಲ್ಲದೇ ತಪ್ಪು ಎಸಗಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಅಮಾಯಕ ಜನರಿಗೆ ವಿನಾಕಾರಣ ತೊಂದರೆ ಆಗಬಾರದು. ಕಾಡಂಚಿನ ಜಮೀನುಗಳಲ್ಲಿ ಕೃಷಿ ಮಾಡುವವರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

‘ಸೂಕ್ಷ್ಮ ವಲಯ ಘೋಷಣೆಯಾದ ನಂತರ ಕೇಂದ್ರವು ಉನ್ನತಾಧಿಕಾರ ಸಮಿತಿ ನೇಮಕ ಮಾಡುತ್ತದೆ. ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು ಆ ಸಮಿತಿಯಲ್ಲಿ ಇರುತ್ತಾರೆ. ಸಮಿತಿ ಸಭೆ ಸೇರಿದಾಗ ಗ್ರಾಮಸ್ಥರನ್ನು ಕರೆಸಿ, ಅಹವಾಲು ಸ್ವೀಕರಿಸಬೇಕು. ಅವರ ಪ್ರತಿಯೊಂದು ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ ನಂತರವೇ ಮಾಸ್ಟರ್‌ ಪ್ಲಾನ್‌ ಅಂತಿಮಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಸೂಕ್ಷ್ಮ ವಲಯ ಘೋಷಿಸಿದ ನಂತರ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ಹಿಂದಿನಂತೆ ದರೋಜಿ ಸುತ್ತಮುತ್ತಲಿನ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬಹುದು. ಕೇವಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ’ ಎಂದು ಡಿ.ಎಫ್‌.ಒ. ರಮೇಶಕುಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT