ಸೋಮವಾರ, ಜನವರಿ 20, 2020
19 °C

ಹಣಕಾಸು ಮಂತ್ರಿ ಮನಸ್ಸು ಬದಲಿಸಿದ ದಾಸಿಮಯ್ಯ: ಬಿ.ವಿ. ವಸಂತಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಸಾಮಾನ್ಯ ಕಾರ್ಮಿಕರಾಗಿದ್ದ ದೇವರ ದಾಸಿಮಯ್ಯನವರು ಹಣಕಾಸು ಮಂತ್ರಿಯಾಗಿದ್ದ ಬಸವಣ್ಣನವರ ಮನಸ್ಸು ಬದಲಿಸಿದ್ದರು. ಅವರ ವ್ಯಕ್ತಿತ್ವ ಎಷ್ಟು ಘನವಾಗಿತ್ತು ಎಂಬುದನ್ನು ಇದರಿಂದ ಅರಿಯಬಹುದು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ದೇವರ ದಾಸಿಮಯ್ಯ ಅಧ್ಯಯನ ಪೀಠ ಹಾಗೂ ಮುದನೂರು ಮಹಾಸಂಸ್ಥಾನ ಮಠದ ಟ್ರಸ್ಟ್‌ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ನೇಕಾರಿಕೆ; ವೃತ್ತಿ ಮತ್ತು ಸಂಸ್ಕೃತಿ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಹನ್ನೆರಡನೇ ಶತಮಾನದಲ್ಲಿ ವಚನ ಚಳವಳಿಗೆ ತಾತ್ವಿಕ ರೂಪ ಕೊಟ್ಟವರೇ ದೇವರ ದಾಸಿಮಯ್ಯನವರು. ಅವರ ವಚನಗಳ ಪ್ರಭಾವ ಬಸವಣ್ಣನವರ ಮೇಲೂ ಆಗಿದೆ. ಅದಕ್ಕೆ ಸಾಕ್ಷಿ ಬಸವಣ್ಣನವರು ರಚಿಸಿದ ವಚನಗಳು. ಅವರ 18 ವಚನಗಳಲ್ಲಿ ದಾಸಿಮಯ್ಯನವರನ್ನು ಪ್ರಸ್ತಾಪಿಸಿದ್ದಾರೆ’ ಎಂದರು.

‘ಅಕ್ಕಮಹಾದೇವಿ ಅವರ ವಚನಗಳಲ್ಲಿ ಲಿಂಗ ದಾಸಿಮಯ್ಯ ಎಂದು ಬರೆದುಕೊಂಡಿದ್ದಾರೆ. ನೇಯ್ಗೆ ಅಂದರೆ ಐಕ್ಯ, ಐಕ್ಯ ಅಂದರೆ ನೇಯ್ಗೆ. ಅಂಗ–ಲಿಂಗ ಒಂದಾದರೆ ಶೂನ್ಯ. 1974ರ ವರೆಗೆ ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಅವರ ಹೆಸರಿನ ಬಗ್ಗೆ ಯಾವುದೇ ಗೊಂದಲವಿರಲಿಲ್ಲ. ಆದರೆ, ಇತ್ತೀಚೆಗೆ ಸಾಹಿತಿ ಎಂ. ಚಿದಾನಂದಮೂರ್ತಿ ಅವರು ದಾಸಿಮಯ್ಯ ಆದ್ಯ ವಚನಕಾರರಲ್ಲ ಎಂದು ಹೇಳಿದ್ದಾರೆ. ಆದರೆ, ವಾಸ್ತವಕ್ಕೆ ದೂರವಾದ ಸಂಗತಿ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಉದ್ಘಾಟಿಸಿ, ‘ರೈತರು ಮತ್ತು ನೇಕಾರರು ಎರಡು ಕಣ್ಣುಗಳಿದ್ದಂತೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಎರಡೂ ವರ್ಗದವರಿಗೆ ಬಹಳ ಅನ್ಯಾಯವಾಗುತ್ತಿದೆ. ನೇಕಾರರು ತಯಾರಿಸಿದ ಬಟ್ಟೆಗಳನ್ನು ಖರೀದಿಸಲು ಸರ್ಕಾರ ಸ್ಪಷ್ಟವಾದ ನೀತಿ ರೂಪಿಸಬೇಕಿದೆ’ ಎಂದರು.

‘ಬೆಂಗಳೂರು ವಿಶ್ವವಿದ್ಯಾಲಯದ ಕೆಂಪೇಗೌಡ ಅಧ್ಯಯನ ಪೀಠಕ್ಕೆ ಸರ್ಕಾರ ₹50 ಕೋಟಿ ಕೊಟ್ಟರೆ, ದೇವರ ದಾಸಿಮಯ್ಯನವರ ಪೀಠಕ್ಕೆ ₹25 ಲಕ್ಷ ಕೊಟ್ಟು ಕೈ ತೊಳೆದುಕೊಂಡಿದೆ. ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೇಕೇ ಕಾಣುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ನೇಕಾರರು ತಯಾರಿಸುವ ಬಟ್ಟೆಗಳ ಮೇಲೆ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ.) ಹೇರಿ ಅಪಮಾನ ಮಾಡಿದೆ. ಅದನ್ನು ಕೂಡಲೇ ಹಿಂಪಡೆಯಬೇಕು. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಸಬ್ಸಿಡಿ ಕೊಡಬೇಕು. ದೇವರ ದಾಸಿಮಯ್ಯನವರ ಮೂಲ ಸ್ಥಳ ಮುದನೂರು ಗ್ರಾಮವನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು’ ಎಂದು ಆಗ್ರಹಿಸಿದರು.

ಕುಲಪತಿ ಪ್ರೊ.ಸ.ಚಿ. ರಮೇಶ, ‘ದಾಸಿಮಯ್ಯನವರು ವಚನಕಾರರಷ್ಟೇ ಅಲ್ಲ. ಅವರೊಬ್ಬ ವಿಜ್ಞಾನಿಯಾಗಿದ್ದರು. ಅಂತಹ ಮಹಾನುಭಾವನ ಪೀಠಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ಕೊಟ್ಟು ಬೆಳೆಸಬೇಕು’ ಎಂದರು.

ಮುದನೂರು ಮಹಾಸಂಸ್ಥಾನ ಮಠದ ಈಶ್ವರಾನಂದ ಸ್ವಾಮೀಜಿ, ಮಠದ ಕಾರ್ಯದರ್ಶಿ ರಾಮಸ್ವಾಮಿ, ಕುಲಸಚಿವ ಎ. ಸುಬ್ಬಣ್ಣ ರೈ, ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಗೋವಿಂದ, ನೇಕಾರ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ನಾಗಪ್ಪ, ಕೊಪ್ಪಳ ಜಿಲ್ಲಾ ನೇಕಾರ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಳಪ್ಪ ಕೊಂಕ್ತಿ, ಬಳ್ಳಾರಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸಿ. ದೇವಾನಂದ, ಸಾಹಿತಿಗಳಾದ ಜಿ.ಆರ್‌. ಮಂಜೇಶ್‌, ವಿಠ್ಠಪ್ಪ ಗೋರಂಟ್ಲಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು