ಮೀನುಗಾರಿಕೆಗೆ ಟೆಂಡರ್ ರದ್ದುಗೊಳಿಸಲು ಆಗ್ರಹ

ಹೊಸಪೇಟೆ: ಮೀನುಗಾರಿಕೆಗೆ ಟೆಂಡರ್ ಆಹ್ವಾನಿಸುತ್ತಿರುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿ.ಐ.ಟಿ.ಯು) ನೇತೃತ್ವದಲ್ಲಿ ಸ್ಥಳೀಯ ಮೀನುಗಾರರು ಮಂಗಳವಾರ ನಗರದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತುಂಗಭದ್ರಾ ಜಲಾಶಯ ನಿರ್ಮಾಣವಾದ ದಿನದಿಂದಲೂ ಸ್ಥಳೀಯರು ಯಾವುದೇ ಅಡೆತಡೆಗಳಿಲ್ಲದೆ ಮೀನುಗಾರಿಕೆ ಮಾಡುತ್ತಿದ್ದರು. ಆದರೆ, ಹತ್ತು ವರ್ಷಗಳಿಂದ ಟೆಂಡರ್ ಕರೆದು, ಹೊರಭಾಗದವರಿಗೆ ಮೀನುಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಸ್ಥಳೀಯ ಮೀನುಗಾರರ ಬದುಕು ಅತಂತ್ರವಾಗಿದೆ. ಕೂಡಲೇ ಟೆಂಡರ್ ಕರೆಯುವುದನ್ನು ನಿಲ್ಲಿಸಿ, ಸ್ಥಳೀಯ ಮೀನುಗಾರರಿಗೆ ಮೀನುಗಾರಿಕೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಇ.ವಿ. ಕ್ಯಾಂಪ್, ಮರಿಯಮ್ಮನಹಳ್ಳಿ, ಕ್ಯಾತರಕಿ ತಾಂಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಬಡ ಮೀನುಗಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಲಕ್ಷಾಂತರ ರೂಪಾಯಿ ಪಾವತಿಸುವ ಸಾಮರ್ಥ್ಯ ಹೊಂದಿಲ್ಲ. ಮಾನವೀಯ ನೆಲೆಯಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಅವಕಾಶ ಕಲ್ಪಿಸಿಕೊಡಬೇಕು. ಒಂದು ವಾರದೊಳಗೆ ಮೀನುಗಾರರ ಸಭೆ ಕರೆದು, ಸಮಸ್ಯೆ ಇತ್ಯರ್ಥ ಪಡಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿದೆ.
ಯೂನಿಯನ್ ಜಿಲ್ಲಾ ಅಧ್ಯಕ್ಷ ಭಾಸ್ಕರ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಜೆ. ಸತ್ಯಬಾಬು, ಕಾರ್ಯದರ್ಶಿ ಎಂ. ಗೋಪಾಲ್, ತಾಲ್ಲೂಕು ಅಧ್ಯಕ್ಷೆ ನಾಗರತ್ನಮ್ಮ ಹಾಗೂ ಮೀನುಗಾರರು ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.