ಶನಿವಾರ, ಏಪ್ರಿಲ್ 17, 2021
32 °C
ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಡಿ. ಕ್ರೂಜ್‌ ಆಗ್ರಹ

ನೌಕರರ ಕನಿಷ್ಠ ವೇತನ ₹26 ಸಾವಿರಕ್ಕೆ ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಕನಿಷ್ಠ ವೇತನವನ್ನು ₹26,000 ಹೆಚ್ಚಿಸಬೇಕು’ ಎಂದು ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಡಾ. ಎ.ಎಂ. ಡಿ.ಕ್ರೂಜ್‌ ಆಗ್ರಹಿಸಿದರು.

ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ಯೂನಿಯನ್‌ ಸಾಮಾನ್ಯ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈಲ್ವೆ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಲಕ್ಷಾಂತರ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಇದುವರೆಗೆ ಜಾರಿಗೆ ಬಂದಿಲ್ಲ. ₹18,000 ಕನಿಷ್ಠ ವೇತನ ನಿಗದಿಪಡಿಸಿ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ. ಇದು ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ’ ಎಂದು ಹೇಳಿದರು.

‘ಕನಿಷ್ಠ ವೇತನ ನಿಗದಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಹಾಗೂ ಮಜ್ದೂರ್‌ ಯೂನಿಯನ್‌ ಸಹಮತಕ್ಕೆ ಬಂದಿಲ್ಲ. ಈ ಕುರಿತು ವಿಸ್ತೃತ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸಲು ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ಎಲ್ಲ ಆಯಾಮಗಳಿಂದ ಮಾಹಿತಿ ಕಲೆ ಹಾಕಿ, ನೌಕರರ ಪರವಾದ ವರದಿ ಸಲ್ಲಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದರು.

‘ರಾಷ್ಟ್ರೀಯ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದೆ. ಇದರಿಂದ ಲಕ್ಷಾಂತರ ನೌಕರರು ಹೊರಗುಳಿಯುವ ಸಾಧ್ಯತೆ ಇದೆ. ಇದರಲ್ಲಿ ಕೆಲವೊಂದು ಮಾರ್ಪಾಡು ಮಾಡಿ ಜಾರಿಗೆ ತರಬೇಕು. 13 ಲಕ್ಷ ಹುದ್ದೆಗಳು ದೇಶದಾದ್ಯಂತ ಖಾಲಿ ಇವೆ. ಅವುಗಳನ್ನು ಆದಷ್ಟು ಶೀಘ್ರ ತುಂಬಿಕೊಳ್ಳಬೇಕು. ಆದರೆ, ಸರ್ಕಾರ ನಿವೃತ್ತ ನೌಕರರನ್ನು ಬಳಸಿಕೊಳ್ಳುತ್ತಿದೆ. ಇದರಿಂದ ಕೆಲಸದಲ್ಲಿ ದಕ್ಷತೆ ಇರುವುದಿಲ್ಲ. ಅದರಲ್ಲೂ ಒಂದು ಲಕ್ಷ ಸುರಕ್ಷತೆಯ ವಿಭಾಗದ ಹುದ್ದೆಗಳು ಖಾಲಿಯಿದ್ದು, ಅವುಗಳನ್ನಾದರೂ ತುರ್ತಾಗಿ ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ರೈಲ್ವೆಯಲ್ಲಿ ಪ್ರಯಾಣಿಕ ರೈಲುಗಳಿಂದ ಯಾವುದೇ ಆದಾಯ ಇಲ್ಲ. ಸರಕು ಸಾಗಣೆ ರೈಲುಗಳಿಂದಷ್ಟೇ ಸರ್ಕಾರಕ್ಕೆ ಆದಾಯವಿದೆ. ಆದರೆ, ಇದೊಂದೆ ಮಾನದಂಡ ಅನುಸರಿಸಿ ರೈಲ್ವೆ ಖಾಸಗೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ. ಕೋಟ್ಯಂತರ ಜನ ರೈಲುಗಳನ್ನು ಅವಲಂಬಿಸಿ ನಿತ್ಯ ದೂರದ ಊರುಗಳಿಗೆ ಓಡಾಡುತ್ತಾರೆ. ಅದು ಸಹ ಖಾಸಗಿಯವರಿಗೆ ಒಪ್ಪಿಸಿ ದುಬಾರಿಯಾದರೆ ಜನ ಸಂಕಷ್ಟಕ್ಕೆ ಒಳಗಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರೈಲ್ವೆಯಲ್ಲಿ ಚುನಾವಣೆ ನಡೆಸುತ್ತೇವೆ ಎಂದು ಸರ್ಕಾರ ಹೆದರಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಅಂತಹ ತಂತ್ರಗಾರಿಕೆಗೆ ನಾವು ಹೆದರುವುದಿಲ್ಲ. ಆಗಸ್ಟ್‌ 29ಕ್ಕೆ ದೇಶದಾದ್ಯಂತ ಮಾನ್ಯತೆ ಪಡೆದ ಯೂನಿಯನ್‌ಗಳಿಗೆ ಚುನಾವಣೆ ನಿಗದಿಯಾಗಿದೆ. ನೈರುತ್ಯ ರೈಲ್ವೆ ವ್ಯಾಪ್ತಿಗೆ ತಮಿಳುನಾಡು, ಗೋವಾ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಬರುತ್ತವೆ. ಒಟ್ಟು 33,000 ಕಾಯಂ ನೌಕರರಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಅನೇಕ ವರ್ಷಗಳಿಂದ ನಮ್ಮ ಯೂನಿಯನ್‌ ನೌಕರರ ಹಿತ ಕಾಯಲು ಶ್ರಮಿಸುತ್ತಿದೆ. ಹೀಗಾಗಿ ಬರುವ ಚುನಾವಣೆಯಲ್ಲಿ ಎಲ್ಲ ನೌಕರರ ಬೆಂಬಲದೊಂದಿಗೆ ನಮ್ಮ ಯೂನಿಯನ್‌ ಚುನಾವಣೆಯಲ್ಲಿ ಗೆಲ್ಲಲ್ಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಯೂನಿಯನ್‌ ವಲಯ ಅಧ್ಯಕ್ಷ ಆರ್‌.ಆರ್‌. ನಾಯಕ, ಖಜಾಂಚಿ ವಿ.ಇ. ಚರಕೈ, ವಿಭಾಗೀಯ ಕಾರ್ಯದರ್ಶಿ ಅಲ್ಬರ್ಟ್‌ ಡಿ. ಕ್ರೂಜ್‌, ಹೊಸಪೇಟೆ ಘಟಕದ ಅಧ್ಯಕ್ಷ ಎಸ್‌. ಮಸ್ತಾನ್‌ ಅಲಿ, ಖಜಾಂಚಿ ಬಿ. ಶ್ರೀನಿವಾಸ ರಾವ, ಉಪಾಧ್ಯಕ್ಷರಾದ ವೈ.ವಿ. ಮುರಳಿ, ಸಿ. ರಾಮಮೂರ್ತಿ, ಖಜಾಂಚಿ ಡಿ.ಎಂ. ನೂರ್‌ ಮೊಹಮ್ಮದ್‌, ಸಹಾಯಕ ಕಾರ್ಯದರ್ಶಿಗಳಾದ ಬಿ.ವಿ.ವಿ.ಎಸ್‌.ಎನ್‌. ಪ್ರಸಾದ್‌, ಎ. ಓಬಳೇಸ್‌, ರಾಜವಲಿ, ಕೆ. ಚಂದ್ರಕಾಂತ, ಬಿ. ರಾಮಕೃಷ್ಣ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.