ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಜಯಿನಿ ಪೀಠಕ್ಕೆ ಹೊಸ ಪೀಠಾಧಿಪತಿಯ ನೇಮಕ: ವಿವಾದ

ಹಾಲಿ ಪೀಠಾಧಿಪತಿ ಇರುವಾಗ ಇನ್ನೊಬ್ಬರ ಹೆಸರು ಘೋಷಣೆ
Last Updated 14 ನವೆಂಬರ್ 2020, 19:55 IST
ಅಕ್ಷರ ಗಾತ್ರ

ಕೊಟ್ಟೂರು/ಹೊಸಪೇಟೆ: ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಪೀಠದ ಪೀಠಾಧಿಪತಿಯ ವಿಷಯ ಈಗ ವಿವಾದಕ್ಕೆ ಕಾರಣವಾಗಿದೆ.

ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪೀಠದ ಹಾಲಿ ಪೀಠಾಧಿಪತಿಯಾಗಿದ್ದಾರೆ. ಆದರೆ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತ್ರಿಲೋಚನಾ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಉಜ್ಜಯಿನಿ ಪೀಠದ ನೂತನ, ಅಧಿಕೃತ ಪೀಠಾಧಿಪತಿಯೆಂದು ಘೋಷಿಸಲಾಗಿದೆ. ಈಗ ಇದೇ ವಿಷಯ ವಿವಾದ ಸೃಷ್ಟಿಸಿದೆ. ಭಕ್ತರಲ್ಲಿ ಗೊಂದಲ ಮೂಡಿಸಿದೆ.

ಉಜ್ಜಯಿನಿ ಪೀಠದ ಈ ಹಿಂದಿನ ಪೀಠಾಧಿಪತಿ ಮರುಳಸಿದ್ಧ ಶಿವಾಚಾರ್ಯರು ಲಿಂಗೈಕ್ಯರಾದಾಗ ನೂತನ ಪೀಠಾಧಿಪತಿ ಯಾರು ಆಗಬೇಕೆಂಬ ವಿಷಯದ ಕುರಿತು ವಿವಾದ ಎದ್ದಿತ್ತು. ಆಗ ಮರುಳಸಿದ್ಧ ಶಿವಾಚಾರ್ಯರು ಬರೆದಿಟ್ಟ ಉಯಿಲಿನಂತೆ 2011ರಲ್ಲಿ ಸಿದ್ಧಲಿಂಗ ಶಿವಾಚಾರ್ಯರನ್ನು ಪೀಠಾಧಿಪತಿಯಾಗಿ ಮಾಡಲಾಗಿತ್ತು. ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸೇರಿದಂತೆ ಪಂಚಪೀಠದ ಕೆಲವು ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ವಿಷಯ ತಣ್ಣಗಾಗಿತ್ತು.

ಒಂಬತ್ತು ವರ್ಷಗಳ ನಂತರ ಲಕ್ಷ್ಮೇಶ್ವರದಲ್ಲಿ ಕಾರ್ಯಕ್ರಮ ಆಯೋಜಿಸಿ, ತ್ರಿಲೋಚನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಉಜ್ಜಯಿನಿ ಪೀಠದ ನೂತನ ಪೀಠಾಧಿಪತಿ ಎಂದು ಕೇದಾರ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಘೋಷಿಸಿರುವುದು ವಿವಾದಕ್ಕೆ ಕಾರಣವಾಗಿದೆ.

‘ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಯಿನಿ ಸದ್ಧರ್ಮ ಪೀಠವು ಎರಡನೆಯದಾಗಿದೆ. ನಾಲ್ಕು ಪೀಠಗಳ ಸ್ವಾಮೀಜಿಗಳು ಸೇರಿಕೊಂಡು, ಶಾಸ್ತ್ರಬದ್ಧವಾಗಿ ನನ್ನನ್ನು ನೇಮಕ ಮಾಡಿದ್ದಾರೆ. ಅದಕ್ಕೆ ಲಕ್ಷಾಂತರ ಭಕ್ತರು ಕೂಡ ಸಾಕ್ಷಿಯಾಗಿದ್ದರು. 2011ರಿಂದ ನಾನೇ ಪೀಠಾಧಿಪತಿಯಾಗಿ ಮುಂದುವರೆದಿರುವೆ’ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತ್ರಿಲೋಚನಾ ಶಿವಾಚಾರ್ಯ ಸ್ವಾಮೀಜಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. ಮುಂಜಾಗರೂಕತಾ ಕ್ರಮವಾಗಿ ಶನಿವಾರ ಉಜ್ಜಯಿನಿ ಪೀಠದ ಸುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಸಚಿವ ರಾಮುಲು ಭೇಟಿ: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಶನಿವಾರ ಪೀಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದರು. ಹೊಸ ಪೀಠಾಧಿಪತಿ ವಿಚಾರದ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ, ಶ್ರೀರಾಮುಲು ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿ, ಅಲ್ಲಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT