ಹೊರಗಿನವರಿಗೆ ಜಿಲ್ಲಾ ಉಸ್ತುವಾರಿ ಹೊಣೆ: ಕಾಂಗ್ರೆಸ್‌ನಲ್ಲಿ ತಳಮಳ

7

ಹೊರಗಿನವರಿಗೆ ಜಿಲ್ಲಾ ಉಸ್ತುವಾರಿ ಹೊಣೆ: ಕಾಂಗ್ರೆಸ್‌ನಲ್ಲಿ ತಳಮಳ

Published:
Updated:
Deccan Herald

ಹೊಸಪೇಟೆ: ಜೆ.ಡಿ.ಎಸ್‌.–ಕಾಂಗ್ರೆಸ್‌ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರವು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿ, ಹೊರಗಿನವರಿಗೆ ಜಿಲ್ಲೆಯ ಹೊಣೆ ವಹಿಸಿದೆ. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ.

ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಕಲಘಟಗಿ ಕ್ಷೇತ್ರದಿಂದ ಚುನಾಯಿತರಾಗಿದ್ದ ಸಂತೋಷ್‌ ಲಾಡ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಆ ಪಕ್ಷದ ಇಬ್ಬರು ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಜೆ.ಡಿ.ಎಸ್‌. ಯಾವುದೇ ಕ್ಷೇತ್ರದಲ್ಲಿ ಜಯ ಸಾಧಿಸಿಲ್ಲ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿಯೇ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಿ, ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸಬೇಕಿತ್ತು. ಅದರ ಬದಲಾಗಿ ಅನ್ಯ ಜಿಲ್ಲೆಯವರಿಗೆ ಜವಾಬ್ದಾರಿ ವಹಿಸಿದ್ದರಿಂದ ಪಕ್ಷದ ಸಂಘಟನೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬಂದಿವೆ.

‘ಹಾಗೆ ನೋಡಿದರೆ ಸಂತೋಷ್‌ ಲಾಡ್‌ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಆದರೆ, ಸಂಡೂರು ಬಿಟ್ಟು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಿ ಸಚಿವರಾದ ನಂತರ ಜಿಲ್ಲೆಗೆ ಬಂದು ಹೋಗುವುದು ಅಪರೂಪವಾಗಿತ್ತು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಆಗೊಮ್ಮೆ, ಈಗೊಮ್ಮೆ ಅತಿಥಿಯಂತೆ ಬಂದು ಹೋಗುತ್ತಿದ್ದರು. ಬಹುತೇಕ ಸಮಯ ಜಿಲ್ಲೆಯಿಂದ ದೂರವೇ ಉಳಿದಿದ್ದರು. ಇದರಿಂದ ಪಕ್ಷ ಸಂಘಟನೆ ಹಾಗೂ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿತ್ತು. ಈಗ ಮತ್ತೆ ಅದೇ ದಾರಿಯಲ್ಲಿ ಹೊರಟಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವವರು ಸದ್ಯದ ಮಟ್ಟಿಗೆ ಯಾರು ಇಲ್ಲ. ಇರುವವರಲ್ಲಿಯೇ ಯಾರನ್ನಾದರೂ ಬೆಳೆಸಿದರೆ ಭವಿಷ್ಯದ ದೃಷ್ಟಿಯಿಂದ ಪಕ್ಷಕ್ಕೆ ಅನುಕೂಲವಾಗಬಹುದು. ಇಲ್ಲದಿದ್ದರೆ ಬಹಳ ಸಮಸ್ಯೆ ಆಗುತ್ತದೆ’ ಎಂದರು.

‘ಬಿಜೆಪಿ ಜಿಲ್ಲೆಯಲ್ಲಿ ‘ಆಪರೇಷನ್‌ ಕಮಲ’ ನಡೆಸುವ ಸಾಧ್ಯತೆ ಇದೆ. ಅದನ್ನು ಹತ್ತಿಕ್ಕಲು ಶಿವಕುಮಾರ ಅವರಿಗೆ ಬಳ್ಳಾರಿ ಹೊಣೆ ವಹಿಸಿರಬಹುದು. ಆದರೆ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸರಿಯಾದ ನಿರ್ಧಾರವಲ್ಲ’ ಎಂದು ಇನ್ನೊಬ್ಬ ಮುಖಂಡರು ತಿಳಿಸಿದರು.

ಪಕ್ಷದಲ್ಲಿ ಉಂಟಾಗಿರುವ ತಳಮಳ ಕುರಿತು ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !