ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಗನ್ನಡ ಪ್ರವೇಶಕ್ಕೆ ಹೆದರಬೇಕಿಲ್ಲ

ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ವಿಶ್ರಾಂತ ಕುಲಪತಿ ಮಲ್ಲೇಪುರಂ ವೆಂಕಟೇಶ್‌ ಹೇಳಿಕೆ
Last Updated 18 ಜನವರಿ 2019, 13:12 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಳಗನ್ನಡ ಪ್ರವೇಶಕ್ಕೆ ಹೆದರಬೇಕಿಲ್ಲ. ಹಳಗನ್ನಡ ಕಬ್ಬಿಣದ ಕಡಲೆ ಎನ್ನುವುದು ಕೆಲವರಲ್ಲಿ ಮನೆ ಮಾಡಿರುವ ಮಾನಸಿಕ ರೋಗ’ ಎಂದು ಸಂಸ್ಕೃತಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ, ಶಂಕರ್‌ ಆನಂದ್ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಭಾಗಿತ್ವದಲ್ಲಿ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಹಳಗನ್ನಡ ಕಾವ್ಯ; ರಸಗ್ರಹಣ ಅನುಸಂಧಾನ’ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಹಳಗನ್ನಡದ ಬಗ್ಗೆ ಜಿಗುಪ್ಸೆ, ತಾತ್ಸಾರ ಈಗ ಹೆಚ್ಚಾಗಿದೆ. ಓದುವ ಪರಿಪಾಠವೂ ತಗ್ಗಿದೆ. ಹಳಗನ್ನಡದ ಗದ್ಯಾನುವಾದ ಆಗಬೇಕೆಂದು ಕೆಲವರು ಹೇಳುತ್ತಾರೆ. ಆದರೆ, ಅದಕ್ಕೆ ನನ್ನ ವಿರೋಧವಿದೆ. ಗದ್ಯಾನುವಾದ ಮಾಡಿದರೆ ಮೂಲಕಾವ್ಯ, ಕಂದಪದ್ಯದ ಸೌಂದರ್ಯ ತಿಳಿದುಕೊಳ್ಳಲು ಆಗುವುದಿಲ್ಲ. ಅದು ಇರುವ ರೀತಿಯಲ್ಲೇ ಓದಿ ಅರ್ಥೈಸಿಕೊಳ್ಳಬೇಕು’ ಎಂದು ಹೇಳಿದರು.

‘1,200 ವರ್ಷಗಳ ಹಿಂದಿನ ಕನ್ನಡ ವಾಂಶಿಕ ಪರಂಪರೆ ಇದೆ ಎನ್ನುವುದು ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯಿಂದ ತಿಳಿದು ಬರುತ್ತದೆ. ಲಕ್ಷ್ಮೀಶನ ಜೈಮಿನಿ ಭಾರತವು ಕುವೆಂಪು ಅವರ ಮೇಲೆ ಬಹಳ ಪ್ರಭಾವ ಬೀರಿದೆ. ಇಷ್ಟೆಲ್ಲ ಇರುವಾಗ ಗದ್ಯಾನುವಾದದ ಅಗತ್ಯವಿಲ್ಲ. ಹಳಗನ್ನಡದ ಕಾವ್ಯಗಳೊಂದಿಗೆ ಅನುಸಂಧಾನ ಏರ್ಪಡಬೇಕು. ಆಗ ಅವುಗಳು ಸುಲಭವಾಗಿ ಅರ್ಥವಾಗುತ್ತವೆ’ ಎಂದು ತಿಳಿಸಿದರು.

ಸಾಹಿತಿ ಎಸ್‌. ಶಿವಾನಂದ ಮಾತನಾಡಿ, ‘ಕಾವ್ಯ ಓದುವ ಅಭಿರುಚಿ ಬೆಳೆಸಿಕೊಂಡರೆ ಅದರಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಜತೆಗೆ ತ್ಯಾಗ, ಪ್ರೀತಿ ಬೆಳೆಯುತ್ತದೆ. ಕಾವ್ಯ ಓದುವ ಪ್ರೀತಿ ಬೆಳೆಸಿಕೊಂಡವರು ನಕರಾತ್ಮಕ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ’ ಎಂದು ಹೇಳಿದರು.

‘ಹಳಗನ್ನಡದಲ್ಲಿ ಅನೇಕ ಉತ್ಕೃಷ್ಟ ಕವಿತೆಗಳನ್ನು ರಚಿಸಲಾಗಿದೆ. ಆದರೆ, ಅವುಗಳನ್ನು ಬಿಟ್ಟು ನಾವು ಬೇರೆಯದರ ಹಿಂದೆ ಹೋಗುತ್ತಿದ್ದೇವೆ. ಶಿಕ್ಷಕರು, ಪ್ರಾಧ್ಯಾಪಕರಿಗೆ ಹಳಗನ್ನಡ ಓದಲು, ಬರುವುದಿಲ್ಲ. ಇನ್ನು ವಿದ್ಯಾರ್ಥಿಗಳ ಪಾಡು ಏನಾಗಬಾರದು. ನಮಗೆ ಹಿಂದಣ್ಣ ಹೆಜ್ಜೆಗಳು ಬೇಕಿಲ್ಲ’ ಎಂದರು.

‘ಓದಿನಿಂದ ಮಾನಸಿಕ, ಬೌದ್ಧಿಕ ರೋಮಾಂಚನ ಸಿಗುತ್ತದೆ. ಅದಕ್ಕಿಂತ ಆನಂದ ಬೇರೆ ಬೇಕಿಲ್ಲ. ಇಂದು ಕಾವ್ಯದ ಓದು ಬಹಳ ಕಡಿಮೆಯಾಗಿದೆ. ಬೇರೆ ಬೇರೆ ದೃಷ್ಟಿಕೋನದಿಂದ ಓದುವುದಂತೂ ಸಂಪೂರ್ಣ ನಿಂತೇ ಹೋಗಿದೆ’ ಎಂದು ತಿಳಿಸಿದರು.

ಆಕಾಶವಾಣಿ ಕಲಾವಿದ ಎಂ.ಆರ್.ಸತ್ಯನಾರಾಯಣ, ಕಾಸಿಂ ಮಲ್ಲಿಗೆ ಬಡೆವೂರು ಗಮಕ ವಾಚನ ಪ್ರಸ್ತುತಪಡಿಸಿದರು.ಕಾಲೇಜು ಪ್ರಾಚಾರ್ಯ ಬಿ.ಜಿ.ಕನಕೇಶಮೂರ್ತಿ, ಉದ್ಯಮಿ ಸೈಯದ್‌ ನಾಜಿಮುದ್ದೀನ್‌, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಯತ್ನಳ್ಳಿ ಮಲ್ಲಯ್ಯ, ಕನ್ನಡ ವಿಭಾಗದ ಮುಖ್ಯಸ್ಥ ನಾಗಣ್ಣ ಕಿಲಾರಿ ಹಾಗೂ ಕನ್ನಡ ಶಿಕ್ಷಕರು, ಪ್ರಾಧ್ಯಾಪಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT