ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದಲ್ಲಿ ಸಿಲುಕಿದ ಟ್ರಕ್‌ ಪಲ್ಟಿ: ನೀರಿನಲ್ಲಿ ಕೊಚ್ಚಿಹೋದ ಚಾಲಕ

Last Updated 3 ಆಗಸ್ಟ್ 2022, 13:43 IST
ಅಕ್ಷರ ಗಾತ್ರ

ತೆಕ್ಕಲಕೋಟೆ/ಬಳ್ಳಾರಿ: ಪ್ರವಾಹದಲ್ಲಿ ಸಿಕ್ಕಿದ ಟ್ರಕ್‌ ಪಲ್ಟಿಯಾಗಿ ಅದರಲ್ಲಿದ್ದ ಚಾಲಕರಿಬ್ಬರ ಪೈಕಿ ಒಬ್ಬರು ನೀರಿನಲ್ಲಿ ಕೊಚ್ಚಿಹೋದ ಘಟನೆ ಸಿರುಗುಪ್ಪ ತಾಲ್ಲೂಕಿನ ರಾರಾವಿ ಬಳಿಯ ವೇದಾವತಿ ನದಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.

ನೀರಿನಲ್ಲಿ ಕೊಚ್ಚಿಹೋದ ಚಾಲಕನನ್ನು ಹುಸೇನಿ (25) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಚಾಲಕ ಅಹಮ್ಮದ್‌ (55) ಎಂಬಾತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸುರಪುರದ ಎಸ್‌ಡಿಆರ್‌ಎಫ್‌ ತಂಡ ಬುಧವಾರ ರಕ್ಷಣೆ ಮಾಡಿದೆ. ಈ ಇಬ್ಬರು ಕರ್ನೂಲ್‌ ಜಿಲ್ಲೆಯ ನಂದಿ ಕೊಟ್ಟೂರು ಮಂಡಲದ ಬ್ರಾಹ್ಮಣ ಕೊಟ್ಟೂರು ಗ್ರಾಮದವರು.

ರಕ್ಷಣಾ ಕಾರ್ಯಾಚರಣೆ ವೇಳೆ ರಕ್ಷಣಾ ಬೋಟ್‌ ಕೂಡಾ ಪಲ್ಟಿ ಆಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮಂಜುನಾಥ ಕುರಿ, ನಾಗರಿಕರಾದ ಬಂಡಿ ನಾಗೇಶ್‌ ಆಧೋನಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಗಿಡಗಂಟೆಗಳ ನಡುವೆ ಸಿಕ್ಕಿಕೊಂಡಿದ್ದ ಅವರನ್ನೂ ರಕ್ಷಣೆ ಮಾಡಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಇಡೀ ರಾತ್ರಿ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಂಡರು. ಅಗ್ನಿಶಾಮಕ ದಳದ ಸಿಬ್ಬಂದಿ, ಸುರುಪುರದ ಎಸ್‌ಡಿಆರ್‌ಎಫ್‌ ತಂಡ ಹಾಗೂ ಜಿಂದಾಲ್‌ನ ಪರಿಣಿತರ ತಂಡ ಸೇರಿ 50 ಮಂದಿ ಕಾರ್ಯಚಾರಣೆಯಲ್ಲಿ ಭಾಗವಹಿಸಿದ್ದರು.

ಸಿರುಗುಪ್ಪದಿಂದ ಭತ್ತ ತುಂಬಿಕೊಂಡು ಕರ್ನೂಲ್‌ಗೆ ಹೊರಟಿದ್ದ ಲಾರಿ ಚಾಲಕ ನೀರಿನ ಪ್ರವಾಹ ಲೆಕ್ಕಿಸದೆ ರಾರಾವಿ ಸಮೀಪದ ವೇದಾವತಿ ಸೇತುವೆ ದಾಟಿಸಲು ಯತ್ನಿಸಿದ. ಮುಂದೆ ಕ್ಯಾಂಟರ್‌ ಗಾಡಿಯೊಂದು ಹೊರಟಿದ್ದರಿಂದ ಲಾರಿ ಚಾಲಕ ಧೈರ್ಯ ಮಾಡಿದ. ಆದರೆ, ಟೈರ್‌ ಸ್ಕಿಡ್‌ ಆಗಿ ಲಾರಿ ಪ‍ಲ್ಟಿಯಾಯಿತು. ಕ್ಯಾಬಿನ್‌ನಿಂದ ಹೊರಬಂದ ಚಾಲಕರಿಬ್ಬರು ಲಾರಿ ಮೇಲೇರಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದರು.

ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಪ್ರವಾಹ ಏರಿಕೆಯಾದ್ದರಿಂದ ಇಬ್ಬರೂ ನೀರಿಗೆ ಜಿಗಿದರು. ಸಮೀಪದಲ್ಲಿದ್ದ ನಡುಗಡೆ ಬಳಿ ಗಿಡಗಂಟೆಗಳನ್ನು ಹಿಡಿದು ಕುಳಿತಿದ್ದರು. ನೀರಿನ ರಭಸ ಜೋರಾಗಿದ್ದರಿಂದ ಹುಸೇನಿ ನೀರಿನಲ್ಲಿ ಕೊಚ್ಚಿಹೋದ. ಅಹಮ್ಮದ್‌ ಅವರನ್ನು ರಕ್ಷಿಸಲಾಗಿದೆ. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ತಿಮ್ಮಾರೆಡ್ಡಿ ಹಾಗೂ ಸಿರುಗುಪ್ಪ ಇನ್‌ಸ್ಪೆಕ್ಟರ್ ಯಶವಂತ್‌ ಬಿಸ್ನಳ್ಳಿ ರಕ್ಷಣಾ ಕಾರ್ಯಕ್ಕೆ ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT