ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾವಂತರಿಂದಲೇ ಮತದಾನಕ್ಕೆ ನಿರ್ಲಕ್ಷ್ಯ: ಕೆ.ಎಂ. ರಾಜಶೇಖರ

Last Updated 25 ಜನವರಿ 2019, 12:15 IST
ಅಕ್ಷರ ಗಾತ್ರ

ಹೊಸಪೇಟೆ: ‘ವಿದ್ಯಾವಂತರೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿರುವುದು ದುರದೃಷ್ಟಕರ. ಅದರಲ್ಲೂ ನಗರಗಳಿಗಿಂತ ಗ್ರಾಮೀಣ ಪ್ರದೇಶದ ಜನ ಹೆಚ್ಚಾಗಿ ಚುನಾವಣೆಯಲ್ಲಿ ತಪ್ಪದೇ ಹಕ್ಕು ಚಲಾಯಿಸುತ್ತಿದ್ದಾರೆ’ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ವಕೀಲರ ಸಂಘದ ಸಹಭಾಗಿತ್ವದಲ್ಲಿ ಶುಕ್ರವಾರ ಇಲ್ಲಿನ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕಡ್ಡಾಯ ಮತದಾನ ಮತ್ತು ಸೂಕ್ತ ವ್ಯಕ್ತಿಯ ಆಯ್ಕೆ ಎಲ್ಲರ ಕರ್ತವ್ಯ. ಮತ ಹಾಕುವ ಮುಂಚೆ ಯೋಚಿಸದೆ ಅಯೋಗ್ಯರನ್ನು ಗೆಲ್ಲಿಸಲಾಗುತ್ತಿದೆ. ಬಹುತೇಕ ಜನಪ್ರತಿನಿಧಿಗಳಿಗೆ ಕ್ಷೇತ್ರದ ಅಭಿವೃದ್ಧಿಗಿಂತ ವೋಟ್‌ ಬ್ಯಾಂಕ್‌ ಗಟ್ಟಿಗೊಳಿಸುವ ಯೋಚನೆಯೇ ಹೆಚ್ಚು. ಅದಕ್ಕಾಗಿ ಅಭಿವೃದ್ಧಿಯೇ ಮರೆತು ಬಿಡುತ್ತಾರೆ’ ಎಂದರು.

‘ನಮ್ಮ ಸಂವಿಧಾನ ಎಲ್ಲರಿಗೂ ನೀಡಿರುವ ಬಹುದೊಡ್ಡ ಅಸ್ತ್ರವೆಂದರೆ ಮತದಾನದ ಹಕ್ಕು. ಅದನ್ನು ಎಲ್ಲರೂ ಸರಿಯಾಗಿ ಬೆಳೆಸಿದರೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಹುದು. ಬದಲಾವಣೆ ತರಬಹುದು. ಚುನಾವಣೆಯಲ್ಲಿ ಅರ್ಹರಾದವರು ಯಾರು ಇಲ್ಲ ಎಂದು ಅನಿಸಿದರೆ ನೋಟಾಕ್ಕೆ ಮತ ಹಾಕಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಸಹಾಯಕ ಆಯುಕ್ತ ಪಿ.ಎನ್‌. ಲೋಕೇಶ್‌ ಮಾತನಾಡಿ, ‘ಮತದಾನ ಪ್ರತಿಯೊಬ್ಬರ ಹಕ್ಕು. ಯಾರು ಕೂಡ ಅದರಿಂದ ವಂಚಿತರಾಗಬಾರದು. ಎಲ್ಲರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ಗುರುತಿನ ಚೀಟಿ ಪಡೆದುಕೊಳ್ಳಬೇಕು. ಕಾಲಕಾಲಕ್ಕೆ ನಡೆಯುವ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಪೂರ್ಣಿಮಾ ಕೆ.ಯಾದವ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ಚೆನ್ನಪ್ಪ, ನ್ಯಾಯಾಧೀಶ ಶಿವನಗೌಡ, ತಹಶೀಲ್ದಾರ್‌ ಎಚ್.ವಿಶ್ವನಾಥ್‌, ಪ್ರಾಚಾರ್ಯ ಬಿ.ಜಿ.ಕನಕೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ, ಮುಖ್ಯಶಿಕ್ಷಕ ಪದ್ಮನಾಭ ಕರಣಂ, ವಕೀಲರ ಸಂಘದ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಡಿ.ವೀರನಗೌಡ ಇದ್ದರು.

ಇದೇ ವೇಳೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿರುವ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT