ಶನಿವಾರ, ಜೂನ್ 6, 2020
27 °C

ಬಂಡವಾಳಶಾಹಿಗಳಿಂದ ಕುಲಗೆಟ್ಟ ಶಿಕ್ಷಣ: ಚಂದ್ರಶೇಖರ್‌ ಶಾಸ್ತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ‘ಧನದಾಹಿಗಳು, ಜಾತಿವಾದಿಗಳು, ರಾಜಕಾರಣಿಗಳು ಹಾಗೂ ಬಂಡವಾಳಷಾಹಿಗಳ ಹಿಡಿತಕ್ಕೆ ಸಿಲುಕಿ ಇಡೀ ನಮ್ಮ ಶಿಕ್ಷಣ ವ್ಯವಸ್ಥೆ ಕುಲಗೆಡುತ್ತಿದೆ’ ಎಂದು ವಿಜಯನಗರ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ್‌ ಶಾಸ್ತ್ರಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

‘ಶಿಕ್ಷಣ ಕ್ಷೇತ್ರ ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಶಿಕ್ಷಣ ಕೇವಲ ಪ್ರಮಾಣ ಪತ್ರಗಳನ್ನು ಕೊಡುವ ಸಾಧನವಾಗಿದೆ. ಬದುಕು ರೂಪಿಸುತ್ತಿಲ್ಲ. ನಿರುದ್ಯೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮದ ಹೆಸರಿನಲ್ಲಿ ಪೈಪೋಟಿ ನಡೆಯುತ್ತಿದೆ. ನಗರ ಮತ್ತು ಗ್ರಾಮೀಣ, ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂಬ ಬೇಧ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಭಾವನೆ ಬರುತ್ತಿದೆ’ ಎಂದರು.

‘ಶಾಲೆಗಳ ಗೋಡೆ ಮೇಲೆ ಕಪ್ಪು ಹಲಗೆ ಹೋಗಿ ಎಲ್‌.ಸಿ.ಡಿ. ಪರದೆಗಳು ಬಂದಿವೆ. ಆದರೆ, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಆಗುತ್ತಿಲ್ಲ. ಕಾಲೇಜುಗಳು ಬ್ಯೂಟಿ ಪಾರ್ಲರ್‌ಗಳ ಸ್ವರೂಪ ಪಡೆದುಕೊಂಡಿವೆ. ದೇಶಕ್ಕೆ ಸರಿಯಾಗಿ ತೆರಿಗೆ ಕಟ್ಟದ ನಟ–ನಟಿಯರು, ಕ್ರಿಕೆಟಿಗರು ನಮ್ಮ ಯುವಕ–ಯುವತಿಯರಿಗೆ ಆದರ್ಶಪ್ರಾಯರಾಗಿದ್ದಾರೆ. ಮೌಲಿಕವಾದ, ಗುಣಮಟ್ಟದ ಶಿಕ್ಷಣದ ಜತೆಗೆ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ತಮ್ಮ ತಮ್ಮ ಕರ್ತವ್ಯ ಅರಿತುಕೊಂಡು ಕೆಲಸ ಮಾಡಿದರೆ ವ್ಯವಸ್ಥೆ ಬದಲಾಗಲು ಸಾಧ್ಯ’ ಎಂದು ಹೇಳಿದರು.

‘ಮಾಧ್ಯಮ, ಮೊಬೈಲ್‌ ಹಾಗೂ ಹಣದಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ಪೋಷಕರು ಮಾಡುವ ಹೋಲಿಕೆ, ಓಲೈಕೆ ಕೂಡ ಮಕ್ಕಳಲ್ಲಿ ಬೇಧಭಾವ ಸೃಷ್ಟಿಸುತ್ತಿದೆ. ಇದು ಬದಲಾಗಬೇಕು. ಪೋಷಕರು ಮನೆಯಲ್ಲಿ ಎಲ್ಲ ಮಕ್ಕಳನ್ನು ಸಮನಾಗಿ ಕಾಣಬೇಕು’ ಎಂದು ಕಿವಿಮಾತು ಹೇಳಿದರು.

ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಮಾತನಾಡಿ, ‘ಸಂಪನ್ಮೂಲ ಇದ್ದರೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಗಳು ಖಾಸಗಿಯವರೊಂದಿಗೆ ಪೈಪೋಟಿ ಕೊಡಲು ಸಾಧ್ಯವಾಗುತ್ತಿಲ್ಲ ಏಕೆ? ಸರ್ಕಾರಿ ಶಾಲೆಯ ಶಿಕ್ಷಕರಾದವರಿಗೆ ನಾವು ಸುರಕ್ಷಿತ ವಲಯದಲ್ಲಿದ್ದೇವೆ ಎಂಬ ಭಾವನೆ ಇದೆ. ಇದು ಕೂಡ ಶಿಕ್ಷಣದ ಗುಣಮಟ್ಟ ಕುಸಿಯಲು ಪ್ರಮುಖ ಕಾರಣವಾಗಿದೆ’ ಎಂದರು.

‘ಎಲ್ಲ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆಗೆ ಶಿಕ್ಷಕರ ದಿನವಾದ ಇಂದು ಎಲ್ಲ ಶಿಕ್ಷಕರು ಸಂಕಲ್ಪ ಮಾಡಬೇಕು. ಒಂದುವೇಳೆ ಪ್ರಾಥಮಿಕ, ಪ್ರೌಢಶಾಲೆಯ ಹಂತದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಭವಿಷ್ಯದಲ್ಲಿ ಎಲ್ಲ ರೀತಿಯ ಸವಾಲುಗಳು, ಸ್ಪರ್ಧೆಗಳನ್ನು ಅವರು ಸುಲಭವಾಗಿ ಎದುರಿಸಬಲ್ಲರು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಉಪಾಧ್ಯಕ್ಷ ಬಿ.ಎಸ್‌. ಶಿವಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್‌. ರಾಜಪ್ಪ, ಸದಸ್ಯೆ ಗೌರಮ್ಮ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಶಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ. ರೇವಣಸಿದ್ದಪ್ಪ, ಮುಖ್ಯಶಿಕ್ಷಕರು ಮತ್ತು ಉಪಪ್ರಾಚಾರ್ಯರ ಸಂಘದ ಅಧ್ಯಕ್ಷ ಸಣ್ಣ ಈರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ. ಚಂದ್ರಶೇಖರ್‌, ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಯಮನೂರಪ್ಪ, ರೋಟರಿ ಕ್ಲಬ್‌ ಅಧ್ಯಕ್ಷ ಮುನಿವಾಸುದೇವ ರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು