ನಲಿ–ಕಲಿ ಪರಿಣಾಮಕಾರಿ ಅನುಷ್ಠಾನ: ಎ.ಕೆ.ಶಾಲೆ ಹೂವಿನಹಡಗಲಿ ತಾಲ್ಲೂಕಿಗೆ ಮಾದರಿ

7

ನಲಿ–ಕಲಿ ಪರಿಣಾಮಕಾರಿ ಅನುಷ್ಠಾನ: ಎ.ಕೆ.ಶಾಲೆ ಹೂವಿನಹಡಗಲಿ ತಾಲ್ಲೂಕಿಗೆ ಮಾದರಿ

Published:
Updated:
Deccan Herald

ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದ ಹರಿಜನ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿ–ಕಲಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು, ಈ ಶಾಲೆ ತಾಲ್ಲೂಕಿಗೆ ಮಾದರಿಯಾಗಿದೆ.

ಶಾಲೆಯ ಒಳ ಹೋದರೆ ‘ಅಕ್ಷರ ಲೋಕ’ದ ದರ್ಶನವಾಗುತ್ತದೆ. ಮಕ್ಕಳನ್ನು ಆಕರ್ಷಿಸಲು ಮೂರು ಕೊಠಡಿಗಳನ್ನು ಅಂದವಾಗಿ ವಿನ್ಯಾಸಗೊಳಿಸಲಾಗಿದೆ. ಮಕ್ಕಳು ಸುಲಭವಾಗಿ ಕಲಿಯಲು ಸಾಧ್ಯವಾಗುವಂತೆ ಕನ್ನಡ ವರ್ಣಮಾಲೆ, ಪದಗಳ ರಚನೆ, ಮಗ್ಗಿ, ಹಣ್ಣು, ತರಕಾರಿ, ಪ್ರಾಣಿ, ಪಕ್ಷಿ, ವಾಹನಗಳು, ವಿಜ್ಞಾನ ಆವಿಷ್ಕಾರ, ದಿಕ್ಕುಗಳ ಮಾಹಿತಿಯ ಗೋಡೆ ಬರಹ, ಚಿತ್ರಪಟಗಳು ಗಮನ ಸೆಳೆಯುತ್ತಿವೆ.

ಶೈಕ್ಷಣಿಕ ವ್ಯವಸ್ಥೆಯ ಬುನಾದಿಯನ್ನು ಗಟ್ಟಿಗೊಳಿಸುವುದು ನಲಿ–ಕಲಿ ಪದ್ಧತಿಯ ಆಶಯ. ಮಕ್ಕಳನ್ನು ಬಾಲ್ಯದಲ್ಲಿ ಸೃಜನಶೀಲರಾಗಿಸಿ, ಗುಣಾತ್ಮಕ ಶಿಕ್ಷಣದ ಕಡೆ ಕರೆದೊಯ್ಯಲು ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಜಾರಿಗೊಳಿಸಿದೆ. ಹೊಳಲು ಎ.ಕೆ. ಶಾಲೆಯ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರ (ಎಸ್‌.ಡಿ.ಎಂ.ಸಿ.) ವಿಶೇಷ ಆಸಕ್ತಿಯ ಫಲವಾಗಿ ನಲಿ–ಕಲಿ ಪದ್ಧತಿ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿದೆ.

ಮುಖ್ಯಶಿಕ್ಷಕ ಶ್ರೀಮಂತ, ಶಿಕ್ಷಕರಾದ ಡಿ.ಎಂ.ಉಮಾದೇವಿ, ಬಿ.ಎಂ.ಜಗದಂಬಾ, ಗೀತಾ, ಅನುಸೂಯ ಹರಿಹರ ಅವರು ನಲಿ–ಕಲಿಗಾಗಿ ವೈಯಕ್ತಿಕ ಹಣ ವ್ಯಯಿಸಿದ್ದಾರೆ. ಎಸ್‌.ಡಿ.ಎಂ.ಸಿ. ಅಧ್ಯಕ್ಷ ಈರಮ್ಮನವರ ಶಿವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಹನುಮಂತಪ್ಪ ವೈಯಕ್ತಿಕ ದೇಣಿಗೆ ನೀಡುವ ಜತೆಗೆ ದಾನಿಗಳಿಂದ ನೆರವು ಕೊಡಿಸಿದ್ದಾರೆ. ₨75 ಸಾವಿರ ವೆಚ್ಚದಲ್ಲಿ ಶಾಲೆಯ ಮೂರು ಕೊಠಡಿಗಳನ್ನು ‘ನಲಿ–ಕಲಿ’ಗಾಗಿ ಸಜ್ಜುಗೊಳಿಸಲಾಗಿದೆ.

ಒಂದರಿಂದ ಮೂರನೇ ತರಗತಿ ಮಕ್ಕಳನ್ನು ಒಟ್ಟುಗೂಡಿಸಿ ಮೂರು ಪ್ರತ್ಯೇಕ ಘಟಕಗಳನ್ನು ರಚಿಸಿ ಬೋಧನೆ ಮಾಡಲಾಗುತ್ತಿದೆ. ಗೋಡೆ ಬರಹ, ಕಲಿಕಾ ಚಪ್ಪರ, ವಾಲ್‌ ಸ್ಲೇಟ್‌ ಚಿತ್ರಪಟಗಳ ಮೂಲಕ ಶಿಕ್ಷಕರು ಚಟುವಟಿಕೆ ಆಧಾರಿತ ಬೋಧನ ಕ್ರಮ ಅಳವಡಿಸಿಕೊಂಡಿದ್ದಾರೆ. ನಲಿ–ಕಲಿಯ ಅನುಷ್ಠಾನದಿಂದ ಇಲ್ಲಿನ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸಿದ್ದಾರೆ.

ಈ ಶಾಲೆಯಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೈಕ್ಷಣಿಕ ಪರಿಸರ ಸುಧಾರಣೆ ಆಗಿರುವುದರಿಂದ ಪೋಷಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಲು ಉತ್ಸಾಹ ತೋರಿದ್ದಾರೆ. ಬೇರೆಲ್ಲಾ ಶಾಲೆಗಳಿಗೆ ಮಕ್ಕಳ ಕೊರತೆ ಎದುರಾಗಿದ್ದರೆ, ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 274 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಖ್ಯ ಶಿಕ್ಷಕ ಸೇರಿ ಹತ್ತು ಜನ ಶಿಕ್ಷಕರು ಇದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !