ಬುಧವಾರ, ಮೇ 12, 2021
18 °C
ಪರಿಸರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ

ಮನೆಗೊಂದು ಗಿಡ, ಊರಿಗೊಂದು ವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಪ್ರತಿಯೊಬ್ಬರೂ ಮನೆ ಮುಂದೆ ಕನಿಷ್ಠ ಒಂದು ಗಿಡ ನೆಡಬೇಕು. ಊರಿಗೊಂದು ವನ ನಿರ್ಮಾಣ ಮಾಡಬೇಕು’ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ತಾಲ್ಲೂಕಿನ ಕಮಲಾಪುರದ ದರೋಜಿ ಪ್ರಕೃತಿ ವಿಶ್ಲೇಷಣ ಕೇಂದ್ರದಲ್ಲಿ ಶುಕ್ರವಾರ ಸಸಿ ನೆಟ್ಟು, ಅದಕ್ಕೆ ನೀರೆರೆದ ನಂತರ ಮಾತನಾಡಿದರು.

‘ಅಭಿವೃದ್ಧಿಯ ಜೊತೆಯಲ್ಲಿ ಪರಸರ ಉಳಿಸಿ, ಬೆಳೆಸುವ ಕೆಲಸವೂ ಆಗಬೇಕು. ಗಿಡ, ಮರಗಳಿದ್ದರೆ ಪರಿಸರ ಸಮತೋಲನದಿಂದ ಕೂಡಿರುತ್ತದೆ. ಎಲ್ಲರೂ ಅವರ ಮನೆ ಮುಂದೆ ಒಂದು ಗಿಡ ನೆಟ್ಟು ಅದನ್ನು ಪೋಷಿಸಿ, ಬೆಳೆಸಬೇಕು. ಇದರಿಂದಾಗಿ ಇಡೀ ಊರು ಹಸಿರಾಗುತ್ತದೆ. ಉತ್ತಮ ಗಾಳಿ, ಮಳೆಯಾಗುತ್ತದೆ’ ಎಂದು ಹೇಳಿದರು.

‘ಪರಿಸರ ಸಂರಕ್ಷಣೆಯ ಅರಣ್ಯ ಇಲಾಖೆಯೊಂದರ ಜವಾಬ್ದಾರಿಯಲ್ಲ. ಪ್ರತಿಯೊಬ್ಬರೂ ಗಿಡ, ಮರಗಳನ್ನು ಬೆಳೆಸಬೇಕು. ಪ್ರಕೃತಿಯಿಂದ ಸಾಕಷ್ಟು ಪಡೆಯುವ ನಾವು, ಅದಕ್ಕೆ ಸ್ವಲ್ಪ ವಾಪಸ್‌ ಕೊಡಬೇಕು. ಉತ್ತಮ ಪರಿಸರದಿಂದ ಉತ್ತಮ ಬದುಕು ಸಾಧ್ಯ’ ಎಂದರು.

ಗುರುವಾರ ಸಂಜೆ ದರೋಜಿ ಕರಡಿಧಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿಗೆ ಬಂದಿದ್ದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಕರಡಿಗಳ ಛಾಯಾಚಿತ್ರ ನೋಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್.ಲಾವಣ್ಯ ಇದ್ದರು.

ಬಳಿಕ ಸಚಿವರು ಅರಣ್ಯ ಭವನಕ್ಕೆ ಭೇಟಿ ನೀಡಿ, ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಕಾರ್ಯಕ್ರಮ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೈಗೊಂಡಿರುವ ಕಾರ್ಯಕ್ರಮದ ಪ್ರಾತ್ಯಕ್ಷಿಕೆ, ಭಿತ್ತಿ ಚಿತ್ರ ವೀಕ್ಷಿಸಿದರು. ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌, ವಲಯ ಅರಣ್ಯ ಅಧಿಕಾರಿಗಳಾದ ರಮೇಶ, ವಿನಯ್‌, ಉಷಾ, ಉಪ ಸಹಾಯಕ ಅರಣ್ಯ ಅಧಿಕಾರಿ ಪರಮೇಶ್ವರಯ್ಯ ಇತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.