ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್‌ ರೋಕೋ ಚಳವಳಿ ತಡೆದ ಪೊಲೀಸರು

ಪ್ರತಿಭಟನಾಕಾರರು–ಪೊಲೀಸರ ನಡುವೆ ಮಾತಿನ ಚಕಮಕಿ, ರೈತರ ಬಂಧನ
Last Updated 18 ಫೆಬ್ರುವರಿ 2021, 12:46 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘದಿಂದ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ರೈಲ್‌ ರೋಕೋ ಚಳವಳಿಯನ್ನು ಪೊಲೀಸರು ತಡೆದರು. ಇದರಿಂದಾಗಿ ಎಲ್ಲ ರೈಲುಗಳು ಎಂದಿನಂತೆ ಸುಗಮವಾಗಿ ಸಂಚರಿಸಿದವು.

ಮಧ್ಯಾಹ್ನ 12ಕ್ಕೆ ಪ್ರತಿಭಟನಾಕಾರರು ನಗರದ ಕನಕದಾಸ ವೃತ್ತದಿಂದ ರೈಲು ನಿಲ್ದಾಣದ ವರೆಗೆ ರ್‍ಯಾಲಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದರು. ರೈಲು ನಿಲ್ದಾಣದ ಬಳಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ ತೆಗೆದು ಪ್ರತಿಭಟನಾಕಾರರು ಮುಂದೆ ಹೋಗಲು ಯತ್ನಿಸಿದರು.

ಆದರೆ, ಪೊಲೀಸರು ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಈ ವೇಳೆ ನೂಕಾಟ, ತಳ್ಳಾಟ ಉಂಟಾಯಿತು. ಹೋರಾಟಗಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ವಾಹನದಲ್ಲಿ ಕರೆದೊಯ್ದರು.

ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌, ‘ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ದೇಶದಾದ್ಯಂತ ರೈಲ್‌ ರೋಕೋ ಚಳವಳಿ ನಡೆಸಲಾಗುತ್ತಿದ್ದು, ಅದರ ಭಾಗವಾಗಿ ನಗರದಲ್ಲೂ ಹೋರಾಟ ನಡೆಸಲಾಗುತ್ತಿದೆ. ಕಾಯ್ದೆ ರದ್ದುಗೊಳಿಸುವವರೆಗೆ ಹೋರಾಟಗಳು ನಿರಂತರವಾಗಿ ನಡೆಯಲಿವೆ’ ಎಂದು ಹೇಳಿದರು.

‘ರೈತರ ವಿಷಯದಲ್ಲಿ ಕೇಂದ್ರ ಸರ್ಕಾರವು ಮೊಂಡುತನ ಪ್ರದರ್ಶಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ರೈತರ ಹಿತಕ್ಕೆ ವಿರುದ್ಧವಾಗಿ ನಡೆದುಕೊಂಡ ಯಾವ ಸರ್ಕಾರವೂ ಉಳಿದಿಲ್ಲ. ಕೂಡಲೇ ಸರ್ಕಾರ ತನ್ನ ಹಠಮಾರಿ ಧೋರಣೆ ಬಿಟ್ಟು ರೈತರೊಂದಿಗೆ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

‘ನವದೆಹಲಿಯಲ್ಲಿ ರೈತರು ಎರಡುವರೆ ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಅನೇಕ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸಿಲ್ಲ. ಈ ಹೋರಾಟ ಕಾಡ್ಗಿಚ್ಚಿನಂತೆ ಇಡೀ ದೇಶ ವ್ಯಾಪಿಸುತ್ತಿದೆ. ಅದು ಬೇರೆ ಸ್ವರೂಪ ಪಡೆದುಕೊಳ್ಳುವುದಕ್ಕೂ ಮುನ್ನ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು. ಕಾರ್ಪೊರೇಟ್‌, ಬಂಡವಾಳಷಾಹಿಗಳಿಗೆ ಮಣೆ ಹಾಕುವುದನ್ನು ಬಿಟ್ಟು ಅನ್ನದಾತರಿಗೆ ನೋವಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ದಲಿತ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ, ಸಿಪಿಐ ಮುಖಂಡ ಆರ್‌. ಭಾಸ್ಕರ್ ರೆಡ್ಡಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕೆ.ನಾಗರತ್ನಮ್ಮ, ಸಮುದಾಯ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಮುನಿರಾಜು, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಎನ್‌. ಯಲ್ಲಾಲಿಂಗ, ಭಾರತ ವಿದ್ಯಾರ್ಥಿ ಫೆಡರೇಶನ್‌ ತಾಲ್ಲೂಕು ಅಧ್ಯಕ್ಷ ಜೆ. ಶಿವುಕುಮಾರ, ಮುಖಂಡರಾದ ಸಣ್ಣಕ್ಕಿ ರುದ್ರಪ್ಪ, ಗೋಪಾಲ್‌, ಜಡಿಯಪ್ಪ, ತಾಯಪ್ಪ ನಾಯಕ, ರಮೇಶ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT