ಶನಿವಾರ, ಡಿಸೆಂಬರ್ 7, 2019
18 °C
ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ಜಿಲ್ಲಾಧಿಕಾರಿ ಕರೆ

ಉತ್ತಮ ಫಲಿತಾಂಶಕ್ಕಾಗಿ ಪರಿಶ್ರಮ ಅಗತ್ಯ: ಡಾ.ವಿ.ರಾಮ್ ಪ್ರಸಾದ್ ಮನೋಹರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಳ್ಳಾರಿ: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ಐದರ ಒಳಗಿನ ಸ್ಥಾನ ಪಡೆಯಬೇಕು. ಅದಕ್ಕಾಗಿ ಎಲ್ಲ ಶಿಕ್ಷಕರೂ ಹೆಚ್ಚಿನ ಪರಿಶ್ರಮಪಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್‌ ಕರೆ ನೀಡಿದರು.

ನಗರದ ಜಿಲ್ಲಾ ಗುರುಭವನದ ನಿವೇಶನದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕೆಲವು ವರ್ಷಗಳಿಂದ ಫಲಿತಾಂಶದಲ್ಲಿ ಹಿಂದೆ ಉಳಿದಿದ್ದ ಜಿಲ್ಲೆಯು ಮುಂದುವರಿಯಲು ಶಿಕ್ಷಕರ ಪರಿಶ್ರಮವೇ ಕಾರಣ’ ಎಂದು ಶ್ಲಾಘಿಸಿದರು.

ನಿವೇಶನ: ‘ಮಹಾತ್ಮಗಾಂಧಿ ನಗರ ಬಡಾವಣೆಯಲ್ಲಿ ಮನೆ ಕಟ್ಟಲು ನಿವೇಶನ ವಿತರಿಸಲಾಗುತ್ತಿದ್ದು, ಶಿಕ್ಷಕರೂ ಅರ್ಜಿ ಸಲ್ಲಿಸಿದರೆ ಪರಿಗಣಿಸಲಾಗುವುದು. ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನೂ ನೀಡಲಾಗುವುದು’ ಎಂದರು.

ಸಂವಾದ: ‘ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯನ್ನು ಆಯ್ಕೆ ಮಾಡಿಕೊಂಡು ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರತಿ ತಿಂಗಳೂ ಸಂವಾದ ನಡೆಸಲಾಗುವುದು’ ಎಂದರು.

'ಶಾಸಕರು ಮತ್ತು ಶಿಕ್ಷಕರ ಸಂಘದ ಬೇಡಿಕೆಯಂತೆ ಗುರುಭವನ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ₨ ೬.೫೦ ಕೋಟಿ ಅನುದಾನ ದೊರೆತಿದೆ’ ಎಂದು ತಿಳಿಸಿದರು.

130 ಶಿಕ್ಷಕರಿಗೆ ದೆಹಲಿ ಪ್ರವಾಸ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಪರಿಶ್ರಮಪಟ್ಟ 130 ಶಿಕ್ಷಕರನ್ನು ದೆಹಲಿ ಪ್ರವಾಸಕ್ಕೆ ಕಳಿಸಲಾಗುವುದು. ಅ.18ರಿಂದ ಪ್ರವಾಸ ಆರಂಭವಾಗಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಜಿಲ್ಲೆಯಲ್ಲಿರುವ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ₨ 600 ಕೋಟಿ ಅನುದಾನದಲ್ಲಿ ಯೋಜನೆ ರೂಪಿಸಲಾಗಿದೆ’ ಎಂದ ಅವರು, ಗುರುಭವನಕ್ಕೆ ಎಸ್‌.ರಾಧಾಕೃಷ್ಣನ್ ಹೆಸರಿಡುವಂತೆ ಸೂಚಿಸಿದರು.

 ಶಿಕ್ಷಕರ ಗೀತೆ ರಚಿಸಿ: ‘ರೈತರನ್ನು ಗೌರವಿಸಲು ರೈತರ ಗೀತೆ ಇರುವಂತೆ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ಗೀತೆ ರಚಿಸಬೇಕಿದೆ’ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಿಂಗಪ್ಪ ಮನವಿ ಪತ್ರ ಸಲ್ಲಿಸಿದರು.

ಸನ್ಮಾನ: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ 24 ಮಂದಿಯನ್ನು ಮತ್ತು 55 ನಿವೃತ್ತ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಪಿ.ದೀನಾ, ಸದಸ್ಯೆ ಸೌಭಾಗ್ಯ, ಮೇಯರ್ ಆರ್.ಸುಶೀಲಾ ಬಾಯಿ, ಉಪಮೇಯರ್ ವಿ.ಲಕ್ಷ್ಮಿದೇವಿ, ಸದಸ್ಯ ಮಲ್ಲನಗೌಡ, ಇಲಾಖೆಯ ಉಪನಿರ್ದೇಶಕ ಓ.ಶ್ರೀಧರನ್‌, ಶಿಕ್ಷಕರ ಸಂಘದ ಮುಖಂಡರಾದ ಆನಂದ್ ನಾಯ್ಕ್, ಎ.ಕೆ.ರಾಮಣ್ಣ, ವಿ.ಟಿ.ದಕ್ಷಿಣಮೂರ್ತಿ, ಮರಿಸ್ವಾಮಿರೆಡ್ಡಿ, ಎಂ.ಬಿ.ಶಿವಣ್ಣ ಇದ್ದರು.

ತಡ: ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಮಧ್ಯಾಹ್ನ 12.30ಕ್ಕೆ ಆರಂಭವಾಗಿತ್ತು. ಜಿಲ್ಲಾಧಿಕಾರಿಯ ಬರುವಿಕೆಗಾಗಿ ಕಾದಿದ್ದರಿಂದ ಎರಡು ಗಂಟೆ ಕಾಲ ತಡವಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು