ಶನಿವಾರ, ಮಾರ್ಚ್ 6, 2021
21 °C
ತುಂಗಭದ್ರಾ ಜಲಾಶಯದಿಂದ 3 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

ಹಂಪಿ ಸ್ಮಾರಕಗಳು ಜಲಾವೃತ, 10 ಗ್ರಾಮಕ್ಕೆ ಮುಳುಗಡೆ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಮೂರು ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದ್ದು, ತಾಲ್ಲೂಕಿನ ಹಂಪಿ ಸ್ಮಾರಕಗಳು ಜಲಾವೃತವಾಗಿವೆ.

ಹಂಪಿಯ ಚಕ್ರತೀರ್ಥ, ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. ವಿಜಯ ವಿಠಲ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ತಳವಾರಘಟ್ಟ ರಸ್ತೆ ಮೇಲೆ ನೀರು ಬಂದಿರುವುದರಿಂದ ಪ್ರವಾಸಿಗರ ವಾಹನಗಳು ಸಿಲುಕಿಕೊಂಡು ಜನ ಪರದಾಡಿದರು. ಜನರನ್ನು ಚಕ್ಕಡಿಗಳಲ್ಲಿ ಬೇರೆ ಕಡೆ ಸ್ಥಳಾಂತರಿಸಲಾಯಿತು. ಹಂಪಿಗೆ ಹೊಂದಿಕೊಂಡಂತಿರುವ ಬಾಳೆತೋಟಗಳಿಗೆ ನೀರು ನುಗ್ಗಿದ್ದು, ಇನ್ನಷ್ಟೇ ಹಾನಿಯ ಪ್ರಮಾಣ ಗೊತ್ತಾಗಬೇಕಿದೆ.

ಹೊಸಪೇಟೆ ಮತ್ತು ಕಂಪ್ಲಿ ತಾಲ್ಲೂಕಿನ ತಲಾ ಐದು ಗ್ರಾಮಗಳಿಗೆ ನೀರು ನುಗ್ಗಿದ್ದು, ಮುಳುಗಡೆ ಭೀತಿ ಎದುರಿಸುತ್ತಿವೆ. ಕಂಪ್ಲಿ–ಗಂಗಾವತಿ ಸೇತುವೆ ಮೇಲೆ ಅಪಾರ ನೀರು ಹರಿಯುತ್ತಿದ್ದು, ಸಂಚಾರ ಕಡಿತಗೊಂಡಿದೆ.

ಹೂವಿನಹಡಗಲಿಯಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 200 ಹೆಕ್ಟೇರ್‌ ಪ್ರದೇಶದ ಕೃಷಿ ಜಮೀನಿನಲ್ಲಿ ನೀರು ಆವರಿಸಿಕೊಂಡಿದೆ.

ಒಟ್ಟು 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 1,631 ಅಡಿ ನೀರು ಸಂಗ್ರಹವಾಗಿದ್ದು, 2.50 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಸೇತುವೆ ಸಂಪೂರ್ಣ ಭರ್ತಿಯಾಗಲು ಎರಡು ಅಡಿಗಳಷ್ಟೇ ಉಳಿದಿರುವುದರಿಂದ ನೀರು ಹೊರ‌ ಬಿಡಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು