ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯಿಂದ ಮರೆಯಾದ ಸತ್ಯ ಹೊರಬರಲಿ: ಸಾಹಿತಿ ಸಿ. ವೀರಣ್ಣ

ಹಂಪಿ ಕನ್ನಡ ವಿ.ವಿ. ಸಂಶೋಧನಾ ಸಮಾವೇಶದಲ್ಲಿ ಹೇಳಿಕೆ
Last Updated 7 ಜನವರಿ 2019, 13:36 IST
ಅಕ್ಷರ ಗಾತ್ರ

ಹೊಸಪೇಟೆ: ‘ಇತಿಹಾಸದಲ್ಲಿ ಅನೇಕ ಸತ್ಯ ಸಂಗತಿಗಳನ್ನು ಮರೆ ಮಾಚಲಾಗಿದೆ. ಸಂಶೋಧನೆ ಮೂಲಕ ಆ ಪೊರೆಯನ್ನು ಕಳಚಿ ವಾಸ್ತವಾಂಶವನ್ನು ಜಗತ್ತಿಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ’ ಎಂದು ಸಾಹಿತಿ ಸಿ. ವೀರಣ್ಣ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಂಬಾ ಜೋಷಿ ಅಧ್ಯಯನ ಪೀಠದಿಂದ ಸೋಮವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸದಾಗಿ ಯೋಚಿಸಿ, ಶೋಧಿಸಿ ಸತ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲುವುದೇ ನಿಜವಾದ ಸಂಶೋಧನೆ. ಅನೇಕ ವಿಚಾರಗಳು ಬಾಯಿಂದ ಬಾಯಿಗೆ ಬಂದಿವೆ. ದಾಖಲಾದ ವಿಚಾರಗಳು ಬಹಳ ಕಡಿಮೆ. ಅನೇಕ ವಿಷಯಗಳು ಅಕ್ಷರರೂಪಕ್ಕೆ ಬರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿತ್ತು. ಈಗ ಎಲ್ಲರಿಗೂ ಅಕ್ಷರ ಜ್ಞಾನ ಸಿಗುತ್ತಿದೆ. ಅದರ ಬಲದಿಂದ ಸತ್ಯ ಎಲ್ಲರಿಗೂ ತಿಳಿಸಿಕೊಡಬೇಕು’ ಎಂದು ಹೇಳಿದರು.

‘ನಮ್ಮ ಮಹಾಕಾವ್ಯಗಳಲ್ಲಿ ಅನೇಕ ಸತ್ಯ ಸಂಗತಿಗಳಿವೆ. ಕಥೆಯೊಳಗಡೆ ಮನುಷ್ಯನ ಚರಿತ್ರೆ ಇದೆ. ಅದನ್ನು ಸೂಕ್ಷ್ಮವಾಗಿ ಗ್ರಹಿಸಿ, ವಿಶ್ಲೇಷಿಸುವ ಕೆಲಸ ಮಾಡಬೇಕಿದೆ. ವಚನ ಚಳವಳಿ ಕುಶಲ ಕೆಲಸಗಾರರ ಬಹುದೊಡ್ಡ ಚಳವಳಿ. ಪರ್ಯಾಯ ಸಂಸ್ಕೃತಿಯನ್ನು ಕಟ್ಟಿಕೊಡುವ ಕೆಲಸ ಮಾಡಿದ್ದರು. ಮನುಷ್ಯನಲ್ಲಿರುವ ಪ್ರಗತಿಪರ ಚಿಂತನೆಗಳು ಆಗಾಗ ಧ್ವನಿ ಎತ್ತುತ್ತವೆ. ಅವಕಾಶ ಸಿಕ್ಕಾಗ ಹೆಚ್ಚು ಧ್ವನಿಸುತ್ತವೆ ಎನ್ನುವುದಕ್ಕೆ ಅದು ನಿದರ್ಶನ’ ಎಂದು ತಿಳಿಸಿದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹರೀಶ್‌ ರಾಮಸ್ವಾಮಿ ಮಾತನಾಡಿ, ‘ಯಾರಿಗೆ ಸಾಮಾಜಿಕ ಸ್ಪಂದನೆ ಇರುವುದಿಲ್ಲವೋ ಅಂತಹವರಿಂದ ಉತ್ತಮ ಸಂಶೋಧನೆ ನಿರೀಕ್ಷಿಸುವುದು ತಪ್ಪಾಗುತ್ತದೆ. ಸಮಾಜ ವಿಜ್ಞಾನಿಗಳಿಗೆ ಬಹುಮುಖ್ಯವಾಗಿ ಬೇಕಾಗಿರುವುದು ತರ್ಕ. ಅದಿಲ್ಲದಿದ್ದರೆ ಉತ್ತಮ ಸಂಶೋಧನೆ ಕೈಗೊಳ್ಳಲು ಆಗುವುದಿಲ್ಲ’ ಎಂದರು.

‘ಸಂಶೋಧನಾ ವಿದ್ಯಾರ್ಥಿಗೆ ಗ್ರಹಿಕೆ, ಸಂಶೋಧನಾಶಕ್ತಿ, ಜ್ಞಾನವನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಂಬುದು ಗೊತ್ತಿರಬೇಕು. ಪೂರಕವಾದ, ನಿಖರ ಅಂಕಿ ಅಂಶ ಸಂಗ್ರಹಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಕ್ಷೇತ್ರ ಮಾಡಿ ಸಂಶೋಧನೆ ಮಾಡದಿದ್ದರೆ ಅದು ಅಪೂರ್ಣ ಅನಿಸಿಕೊಳ್ಳುತ್ತದೆ. ಒಳ್ಳೆಯ ಸಂಶೋಧನೆ 20 ಪುಟಗಳಷ್ಟಿದ್ದರೂ ಸಾಕು. ಗ್ರಂಥದ ರೂಪದಲ್ಲಿಯೇ ಇರಬೇಕಾಗಿಲ್ಲ’ ಎಂದು ಹೇಳಿದರು.

‘ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅಂಗೈಯಲ್ಲೇ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಅವುಗಳನ್ನು ಬಳಸಿಕೊಂಡು ಉತ್ತಮ ಸಂಶೋಧನೆ ಮಾಡಬಹುದು. ಆದರೆ, ಉತ್ತಮ ವಿಷಯದ ಆಯ್ಕೆ ಎಲ್ಲಕ್ಕಿಂತ ಮುಖ್ಯವಾದದ್ದು. ಉತ್ತಮ ವಿಷಯ ಆಯ್ಕೆ ಮಾಡಿಕೊಂಡರೆ ಅರ್ಧ ಕೆಲಸ ಮುಗಿದಂತೆಯೇ ಸರಿ’ ಎಂದರು.

ಕುಲಸಚಿವ ಮಂಜುನಾಥ ಬೇವಿನಕಟ್ಟಿ, ಅಧ್ಯಯನಾಂಗದ ನಿರ್ದೇಶಕ ಶಿವಾನಂದ ವಿರಕ್ತಮಠ, ಪೀಠದ ಸಂಚಾಲಕ ವಿರೂಪಾಕ್ಷಿ ಪೂಜಾರಹಳ್ಳಿ, ಶೈಕ್ಷಣಿಕ ಉಪಕುಲಸಚಿವ ಎಸ್.ವೈ.ಸೋಮಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT