ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಪಯಣ ಕಷ್ಟ.. ಕಷ್ಟ..

ಅನಿಶ್ಚಿತತೆಯಲ್ಲಿ ಹೊಸಪೇಟೆ–ಬಳ್ಳಾರಿ ಚತುಷ್ಪಥ ಕಾಮಗಾರಿ; ಪ್ರಯಾಣಿಕರಿಗೆ ನರಕ ಯಾತನೆ
Last Updated 26 ಜೂನ್ 2019, 16:15 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ–ಹೊಸಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿ 63ರ ಚತುಷ್ಪಥ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಉತ್ತರಕ್ಕೆ ಸದ್ಯ ಯಾವುದೇ ಉತ್ತರವಿಲ್ಲ.

ಕಾಮಗಾರಿ ಅನಿಶ್ಚಿತತೆಯಿಂದ ಕೂಡಿರುವುದೇ ಸದದ್ಯ ಪರಿಸ್ಥಿತಿಗೆ ಈ ಕಾರಣ. ಈ ಸಾಲಿನ ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಇದುವರೆಗೆ ಶೇ 35ರಷ್ಟು ಕೆಲಸವಷ್ಟೇ ಪೂರ್ಣಗೊಂಡಿದೆ. ಆರು ತಿಂಗಳ ಹಿಂದೆ ಮಣ್ಣಿನ ಕೊರತೆ ಎದುರಾಗಿದ್ದರಿಂದ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿತ್ತು. ಎರಡ್ಮೂರು ತಿಂಗಳಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ಎರಡೂ ಕಡೆ ಸಿ.ಸಿ ರಸ್ತೆ ನಿರ್ಮಾಣ, ಕಿರು ಹಾಗೂ ದೊಡ್ಡ ಸೇತುವೆಗಳ ಕೆಲಸ ಅರ್ಧಂಬರ್ಧ ಆಗಿದೆ. ಇನ್ನೂ ಹಲವೆಡೆ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ, ಸೂಕ್ತ ತಯಾರಿ ಮಾಡಿಕೊಳ್ಳದೆ ಕೆಲಸ ಆರಂಭಿಸಿರುವುದರಿಂದ ಹೊಸಪೇಟೆ–ಬಳ್ಳಾರಿ ನಡುವಿನ ಪ್ರಯಾಣ ಜನರಿಗೆ ನರಕವಾಗಿ ಪರಿಣಮಿಸಿದೆ.

ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಸ್ವಲ್ಪ ಮಳೆಯಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಕ್ಕೂ ಮೊದಲು ಜನ ಒಂದೂವರೆ ತಾಸಿನಲ್ಲಿ ಹೊಸಪೇಟೆ–ಬಳ್ಳಾರಿ ನಡುವಿನ ಪ್ರಯಾಣಕ್ಕೆ ಸಮಯ ತೆಗೆದುಕೊಳ್ಳುತ್ತಿದ್ದರು. ಈಗ ಎರಡು ಗಂಟೆ ಬೇಕಾಗುತ್ತಿದೆ. ನಿತ್ಯ ಅಪಘಾತಗಳು ಸಾಮಾನ್ಯವಾಗಿವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.

ಹೊಸಪೇಟೆಯಿಂದ ಬಳ್ಳಾರಿ ಮೂಲಕ ಆಂಧ್ರಪ್ರದೇಶದ ಗುಂತಕಲ್‌ ರಸ್ತೆ ವರೆಗೆ 95.37 ಕಿ.ಮೀ ಚತುಷ್ಪಥ ಕಾಮಗಾರಿ 2017ರ ಮಾರ್ಚ್‌ನಲ್ಲಿ ಆರಂಭಗೊಂಡಿತ್ತು. ಆರಂಭದಲ್ಲಿ ಪಿ.ಎನ್‌.ಸಿ. ಕಂಪನಿಗೆ ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದ ಕಂಪನಿ ಹಿಂದೆ ಸರಿದಿತ್ತು. ಮರು ಟೆಂಡರ್‌ ಕರೆದು, ಗ್ಯಾಮನ್‌ ಇಂಡಿಯಾ ಕಂಪನಿಗೆ ವಹಿಸಲಾಯಿತು. ಆರಂಭದ ಆರು ತಿಂಗಳು ಶರವೇಗದಲ್ಲಿ ಕಾಮಗಾರಿ ನಡೆಯಿತು. ಬಳಿಕ ಮಣ್ಣಿನ ಕೊರತೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಇಡೀ ಕಾಮಗಾರಿ ನಿಂತು ಹೋಗಿದೆ. ಈಗ ಸಂಪೂರ್ಣ ಕಾಮಗಾರಿ 2020ರ ಅಂತ್ಯಕ್ಕೂ ಮುಗಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

‘ಕಾಮಗಾರಿ ಆರಂಭವಾದ ದಿನದಿಂದಲೂ ಮಣ್ಣಿನ ಸಮಸ್ಯೆ ಕಾಡುತ್ತಿದೆ. ಗಣಿಗಾರಿಕೆಗೆ ಸಂಬಂಧಿಸಿದ ನಿಯಮಗಳು ಬದಲಾಗಿದ್ದರಿಂದ ಮಣ್ಣು ಸುಲಭವಾಗಿ ಸಿಗುತ್ತಿಲ್ಲ. ಈ ಕುರಿತು ಈಗಾಗಲೇ ಜಿಲ್ಲಾ ಆಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜತೆ ಚರ್ಚಿಸಲಾಗಿದೆ. ಶೀಘ್ರ ಎಲ್ಲ ತೊಡಕುಗಳನ್ನು ಬಗೆಹರಿಸಿಕೊಂಡು ಕಾಮಗಾರಿ ಆರಂಭಿಸಲಾಗುವುದು’ ಎಂದು ಗ್ಯಾಮನ್‌ ಕಂಪನಿಯ ಮುಖ್ಯ ಯೋಜನಾ ಅಧಿಕಾರಿ ರಾಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2019ರ ಮಾರ್ಚ್‌ನಲ್ಲಿಯೇ ಕಾಮಗಾರಿ ಮುಗಿಯಬೇಕಿತ್ತು. ಹೆದ್ದಾರಿ ಪ್ರಾಧಿಕಾರ ಅವಧಿ ವಿಸ್ತರಿಸಿದೆ. 2020ರಲ್ಲಿ ಕಾಮಗಾರಿ ಮುಗಿಯುತ್ತದೆಯೋ ಇಲ್ಲವೋ ಎಂದು ಈಗಲೇ ಹೇಳಲು ಆಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

95.37 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹867 ಕೋಟಿ ಅಂದಾಜು ವೆಚ್ಚದ ಯೋಜನೆ ಹಾಕಿಕೊಳ್ಳಲಾಗಿತ್ತು. ಈಗ ಕಾಮಗಾರಿ ವಿಳಂಬವಾಗಿದ್ದರಿಂದ ಸಹಜವಾಗಿಯೇ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಚತುಷ್ಪಥ ನಿರ್ಮಾಣವಾದರೆ ಹೊಸಪೇಟೆ–ಬಳ್ಳಾರಿ ನಡುವಿನ 65 ಕಿ.ಮೀ ಅಂತರವನ್ನು 45 ನಿಮಿಷಗಳಲ್ಲಿ ಕ್ರಮಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT