ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮತ್ತೆ ಜಿಗಿತ ಕಂಡ ಗಣಿನಗರಿ ಹೊಸಪೇಟೆ

388ನೇ ಸ್ಥಾನದಿಂದ 233ನೇ ಸ್ಥಾನಕ್ಕೆ ಏರಿಕೆ
Last Updated 2 ಜನವರಿ 2020, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಸ್ವಚ್ಛ ನಗರಗಳ ಸರ್ವೇಕ್ಷಣ ಪಟ್ಟಿಯಲ್ಲಿ ಹೊಸಪೇಟೆ ನಗರ ಮತ್ತೆ ಜಿಗಿತ ಕಂಡಿದೆ.

2019ನೇ ಸಾಲಿನ ಮೊದಲ ಎರಡು ತ್ರೈಮಾಸಿಕಗಳ ಸ್ವಚ್ಛ ನಗರಗಳ ಸರ್ವೇಕ್ಷಣ ಪಟ್ಟಿಯನ್ನುಕೇಂದ್ರ ನಗರಾಭಿವೃದ್ಧಿ ಇಲಾಖೆ ಬಿಡುಗಡೆಗೊಳಿಸಿದೆ. ಎರಡೂ ತ್ರೈಮಾಸಿಕಗಳಲ್ಲಿ ನಗರ ಉತ್ತಮ ಸಾಧನೆ ತೋರಿದೆ. ಮೊದಲನೇ ತ್ರೈಮಾಸಿಕದಲ್ಲಿ 204ನೇ ಸ್ಥಾನ ಪಡೆದರೆ, ಎರಡನೇ ತ್ರೈಮಾಸಿಕದಲ್ಲಿ 233ನೇ ಸ್ಥಾನ ಲಭಿಸಿದೆ.

ಒಂದು ಲಕ್ಷದಿಂದ ಹತ್ತು ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಸ್ವಚ್ಛತಾ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಗರಕ್ಕೆ ಈ ಶ್ರೇಯ ದೊರೆತಿದೆ. ಸ್ವಚ್ಛತೆಗೆ ಹೆಚ್ಚು ಒತ್ತು ಕೊಟ್ಟು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಗರಗಳ ಪಟ್ಟಿ ಇದಾಗಿದೆ.

2017ನೇ ಸಾಲಿನಲ್ಲಿ ನಗರವು 401ನೇ ಸ್ಥಾನದಲ್ಲಿತ್ತು. 2018ರ ಸಾಲಿನಲ್ಲಿ ಉತ್ತಮ ಸಾಧನೆ ತೋರಿ 388ನೇ ಸ್ಥಾನ ಗಿಟ್ಟಿಸಿತ್ತು. 13 ಸ್ಥಾನ ಜಿಗಿತ ಕಂಡಿತ್ತು. ಈಗ 2019ನೇ ಸಾಲಿನ ಮೊದಲೆರಡು ತ್ರೈಮಾಸಿಕಗಳಲ್ಲಿ ಉತ್ತಮ ಸಾಧನೆ ಮಾಡಿರುವುದರಿಂದ ಒಟ್ಟಾರೆ ರ್‍ಯಾಂಕಿಂಗ್‌ನಲ್ಲಿ ದೊಡ್ಡ ಪಲ್ಲಟ ಉಂಟಾಗಿ, ದೊಡ್ಡ ಜಿಗಿತ ಕಾಣುವ ನಿರೀಕ್ಷೆಯಲ್ಲಿ ನಗರಸಭೆ ಅಧಿಕಾರಿಗಳು ಇದ್ದಾರೆ.

‘ಕಸ ಸಂಗ್ರಹಿಸುವ ವಾಹನಗಳೊಂದಿಗೆ ಧ್ವನಿವರ್ಧಕ ಅಳವಡಿಸಿ, ಸ್ವಚ್ಛತೆ ಕುರಿತು ತಿಳಿವಳಿಕೆ ಮೂಡಿಸಲಾಗುತ್ತಿದೆ. ಇದು ಜನರಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಬೆಳಿಗ್ಗೆ ಧ್ವನಿವರ್ಧಕದ ಶಬ್ದ ಕೇಳಿದೊಡನೆ ಜನ ನೇರವಾಗಿ ವಾಹನದೊಳಗೆ ತಂದು ಕಸ ಹಾಕಿ ಹೋಗುತ್ತಾರೆ. ಹೀಗೆ ಎಲ್ಲರ ಸಹಕಾರದಿಂದ ಬದಲಾವಣೆ ಉಂಟಾಗುತ್ತಿದೆ. ಬರುವ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಿ, ಅಗ್ರ ಸ್ಥಾನಕ್ಕೆ ಏರಲು ಪ್ರಯತ್ನಿಸಲಾಗುವುದು’ ಎಂದು ನಗರಸಭೆ ಪರಿಸರ ಎಂಜಿನಿಯರ್‌ ಜಿ. ಆರತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ ಚರಂಡಿಗಳನ್ನು ಸ್ವಚ್ಛಗೊಳಿಸಿ, ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಎಲ್ಲೆಡೆ ಸ್ವಚ್ಛತೆ ಕಂಡು ಬರುತ್ತಿದೆ. ಬರುವ ದಿನಗಳಲ್ಲಿ ಇದರಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು. ಕೆಲವರು ಮನೆಯಲ್ಲೇ ಹಸಿ, ಒಣ ಕಸಿ ಬೇರ್ಪಡಿಸಿ ಕೊಡುತ್ತಿದ್ದಾರೆ. ಮತ್ತೆ ಕೆಲವರು ಮನೆಯಲ್ಲೇ ಗೊಬ್ಬರ ನಿರ್ಮಿಸಿ, ಅವರ ತೋಟಕ್ಕೆ ಹಾಕುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ನಗರಸಭೆಯಿಂದ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುವುದು’ ಎಂದು ತಿಳಿಸಿದರು.

‘ಜನವಸತಿ ಹಾಗೂ ವಾಣಿಜ್ಯಕ್ಕೆ ಮೀಸಲಾದ ಪ್ರದೇಶದಲ್ಲಿ ಹಸಿ, ಒಣ ಕಸದ ಡಬ್ಬಿ ಇರಿಸಲಾಗಿದೆ. ಜನ ಅವುಗಳ ಮೇಲೆ ಬರೆದಿರುವುದನ್ನು ನೋಡಿ, ಕಸವನ್ನು ಪ್ರತ್ಯೇಕವಾಗಿ ಹಾಕಿ ಹೋಗುತ್ತಿದ್ದಾರೆ. ಇದರಿಂದಾಗಿ ವಿಲೇವಾರಿಗೆ ಸಹಾಯವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT