ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಯಾವಾಗ ಇರುತ್ತೋ, ಹೋಗುತ್ತೋ ಗೊತ್ತಿಲ್ಲ: ಸಚಿವ ಆನಂದ್‌ ಸಿಂಗ್‌

ವನ್ಯಜೀವಿ ಸಂರಕ್ಷಣೆ ಸಪ್ತಾಹದಲ್ಲಿ ಹೇಳಿಕೆ
Last Updated 2 ಅಕ್ಟೋಬರ್ 2020, 7:43 IST
ಅಕ್ಷರ ಗಾತ್ರ

ಹೊಸಪೇಟೆ: ‘ಈ ಸರ್ಕಾರ ಯಾವಾಗ ಇರುತ್ತೋ, ಹೋಗುತ್ತೋ ಗೊತ್ತಿಲ್ಲ’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿದರು.

ತಾಲ್ಲೂಕಿನ ಕಮಲಾಪುರ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ವನ್ಯಜೀವಿ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

‘ನಾನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ನನ್ನ ಕ್ಷೇತ್ರದಲ್ಲಿ ಮೊದಲ ಕಾರ್ಯಕ್ರಮವಾದ್ದರಿಂದ ಇಲ್ಲೇ ಉಳಿದುಕೊಂಡೆ. ಈ ಸರ್ಕಾರ ಯಾವಾಗ ಇರುತ್ತೋ, ಹೋಗುತ್ತೋ ಗೊತ್ತಿಲ್ಲ. ಮಾಧ್ಯಮದವರು ಇದನ್ನು ತಪ್ಪಾಗಿ ಭಾವಿಸಬಾರದು. ಮೂರು ವರ್ಷ ಸರ್ಕಾರ ಇರುತ್ತೆ. ನನ್ನ ಕ್ಷೇತ್ರಕ್ಕೆ ಮೊದಲ ಆದ್ಯತೆ’ ಎಂದು ಸಾವರಿಸಿಕೊಂಡು ಹೇಳಿದರು.

‘ರಣಹದ್ದು ತಳಿ ಸಂವರ್ಧನೆಗೆ ₹2 ಕೋಟಿ’

‘ರಾಮನಗರದಲ್ಲಿ ಅಳಿವಿನಂಚಿನ ರಣಹದ್ದು ತಳಿ ಸಂವರ್ಧನೆಗೆ ₹2 ಕೋಟಿ ಮೀಸಲಿಡಲಾಗಿದೆ. ಅವುಗಳನ್ನು ಸಂರಕ್ಷಿಸಿ, ಸಂತತಿ ಬೆಳೆಸಬೇಕಿದೆ’. ‘ಈ ಹಿಂದೆ ಅನೇಕ ಕಡೆ ರಣಹದ್ದುಗಳು ಕಾಣಿಸುತ್ತಿದ್ದವು. ಎಲ್ಲಾದರೂ ದನ ಸತ್ತು ಬಿದ್ದರೆ ಅದರ ಸುತ್ತ ರಣಹದ್ದುಗಳು ಮುತ್ತಿಕೊಳ್ಳುತ್ತಿದ್ದವು. ಈಗ ಒಂದೂ ಕೂಡ ಕಾಣಿಸುತ್ತಿಲ್ಲ. ಅವುಗಳನ್ನು ಉಳಿಸುವ ಹೊಣೆ ನಮ್ಮ ಮೇಲಿದೆ’ ಎಂದರು.

ಪ್ರತಿಯೊಬ್ಬರೂ ಪ್ರಕೃತಿ ಉಳಿಸಲು ಶ್ರಮಿಸಬೇಕು. ಒಂದುವೇಳೆ ಪ್ರಕೃತಿ ಉಳಿಸದಿದ್ದರೆ ನಮಗಿಲ್ಲ ಉಳಿಗಾಲ’. ‘ಇಡೀ ಭೂಮಿ ಮೇಲೆ ಶೇ 3ರಷ್ಟು ಪ್ರದೇಶವಷ್ಟೇ ಪ್ರಾಣಿಗಳಿಗೆ ಸೀಮಿತವಾಗಿದೆ. ಅಲ್ಲದೇ ಬೇರೆ ಬೇರೆ ಉದ್ದೇಶಕ್ಕೆ ಪ್ರಕೃತಿಯಲ್ಲಿರುವ ಸಂಪನ್ಮೂಲ ಬಳಸಿಕೊಳ್ಳುತ್ತಿದ್ದೇವೆ. ಇದರಿಂದಾಗಿ ಪದೇ ಪದೆ ಮಾನವ, ಪ್ರಾಣಿ ಸಂಘರ್ಷಗಳು ಉಂಟಾಗುತ್ತಿವೆ’ ಎಂದರು.

‘ಕಾಡು ಹಾಗೂ ಕಾಡಂಚಿನಲ್ಲಿ ಅನೇಕ ತಲೆಮಾರುಗಳಿಂದ ವಾಸಿಸುತ್ತಿರುವ ಹಾಡಿ ಜನರಿಂದ ಈ ಪ್ರಕೃತಿ, ವನ್ಯಜೀವಿಗಳು ಉಳಿದಿವೆ. ಅದೇ ರೀತಿ ಇಂದಿನ ತಲೆಮಾರಿನ ಯುವಕರು ಕಾಡು, ಕಾಡು ಪ್ರಾಣಿ ಉಳಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘15–20 ವರ್ಷಗಳ ಹಿಂದೆ ಯಾರು ಬೇಕಾದರೂ ಸುಲಭವಾಗಿ ಕಾಡಿಗೆ ಹೋಗಿ ಬರುತ್ತಿದ್ದರು. ಮನಸ್ಸೋ ಇಚ್ಛೆ ನಾಶ ಕೂಡ ಮಾಡುತ್ತಿದ್ದರು. ಪ್ರತಿಯೊಂದು ಚಟುವಟಿಕೆಗಳಿಗೆ ಕಾಡು ಉಪಯೋಗವಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಜನರಲ್ಲಿ ಅರಿವು ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಜನರೊಂದಿಗೆ ಉತ್ತಮ ಸಂಬಂಧ ಹೊಂದಬೇಕು. ಜನರಿಗೆ ಕಾಡಿನ ಬಗ್ಗೆ ಅರಿವು ಮೂಡಿಸಬೇಕು. ಕೆಲವು ಅಧಿಕಾರಿಗಳ ಕಾರ್ಯವೈಖರಿಯಿಂದ ಇಲಾಖೆಗೆ ಕೆಟ್ಟ ಹೆಸರು. ಅಧಿಕಾರಿಗಳ ವಿರುದ್ಧ ಆರೋಪಗಳೇ ಜಾಸ್ತಿ ಕೇಳಿ ಬರುತ್ತವೆ. ಅದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಸೂಚಿಸಿದರು.

ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಮೋಟಾರ್‌ ಸೈಕಲ್‌ ರ್‍ಯಾಲಿಗೆ ಹಸಿರು ನಿಶಾನೆ ತೋರಿದರು. ಪ್ರಕೃತಿ ನಿರೂಪಣಾ ಕೇಂದ್ರದಲ್ಲಿ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ, ಅವುಗಳನ್ನು ವೀಕ್ಷಿಸಿದರು.

ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಎಚ್‌. ಲಿಂಗರಾಜ್, ಬಳ್ಳಾರಿ ವಿಭಾಗದ ಉಪವಲಯ ಸರಂಕ್ಷಣಾಧಿಕಾರಿ ಸಿದ್ದರಾಮಪ್ಪ ಚಳಕಾಪುರೆ, ವಾಜಪೇಯಿ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್‌. ಕಿರಣ ಕುಮಾರ, ಮುಖ್ಯ ಅರಣ್ಯ ಅಧಿಕಾರಿ ನಾಗೇಶ್‌, ವಲಯ ಅರಣ್ಯ ಅಧಿಕಾರಿಗಳಾದ ವಿನಯ್‌ ಕುಮಾರ್‌, ಉಷಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ಸದಸ್ಯೆ ಹನುಮಕ್ಕ, ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳೇಮಠ, ‘ಬುಲ್‌ ರೈಡರ್ಸ್‌’ನ ಪ್ರಭಂಜನ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT