‘ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ’

ಸೋಮವಾರ, ಮಾರ್ಚ್ 25, 2019
21 °C

‘ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ’

Published:
Updated:
Prajavani

ಹೊಸಪೇಟೆ: ‘ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ಬಂದರೆ, ತಕ್ಷಣ ಸ್ಪಂದಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳು ಯಾವುದೇ ರೀತಿಯ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಎಲ್ಲಿ ನೀರಿನ ಸಮಸ್ಯೆಯಿದೆಯೋ ತಕ್ಷಣ ಆ ಗ್ರಾಮಕ್ಕೆ ಭೇಟಿ ಕೊಡಬೇಕು. ಯಾವ ರೀತಿ ಅವರಿಗೆ ನೀರಿನ ವ್ಯವಸ್ಥೆ ಮಾಡಬಹುದು ಎಂಬುದನ್ನು ಅರಿತುಕೊಂಡು ಮುಂದುವರಿಯಬೇಕು. ಅದಕ್ಕೆ ಹಣದ ಕೊರತೆ ಇಲ್ಲ’ ಎಂದು ಹೇಳಿದರು.

‘ನೀರು ಮತ್ತು ಮೇವು ಪೂರೈಸುವ ವಿಚಾರದಲ್ಲಿ ಜಿಲ್ಲಾಧಿಕಾರಿ ಗಂಭೀರವಾಗಿದ್ದರೆ. ಒಂದುವೇಳೆ ನೀವು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ತಹಶೀಲ್ದಾರ್‌ ಹಾಗೂ ನನ್ನನ್ನು ಹೊಣೆಗಾರರಾಗಿ ಮಾಡುತ್ತಾರೆ. ಅದಕ್ಕೆ ಯಾರೂ ಅಸ್ಪದ ಕೊಡಬಾರದು. ನಿತ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು’ ಎಂದು ನಿರ್ದೇಶನ ನೀಡಿದರು.

ಸೋಲಾರ್‌ಗೆ 57 ಫಲಾನುಭವಿಗಳು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 57 ಫಲಾನುಭವಿಗಳಿಗೆ ಸೋಲಾರ್‌ ದೀಪ ಮತ್ತು ವಾಟರ್‌ ಹೀಟರ್‌ ಕೊಡಲಾಗುವುದು. ಫಲಾನುಭವಿಗಳನ್ನು ಗುರುತಿಸಿ, ಪಟ್ಟಿ ಕಳುಹಿಸಲು ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿದೆ. ಆದರೆ, ಇದುವರೆಗೆ ಯಾವ ಪಂಚಾಯಿತಿಯೂ ಹೆಸರು ಕಳುಹಿಸಿಲ್ಲ’ ಎಂದು ವಲಯ ಅರಣ್ಯ ಅಧಿಕಾರಿ ಬಸವರಾಜ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಟಿ. ವೆಂಕೋಬಪ್ಪ, ‘ಈ ಸಂಬಂಧ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ಕೊಡುತ್ತೇನೆ. ಸಾಧ್ಯವಾದರೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಿ, ಹೆಚ್ಚಿನ ಜನರಿಗೆ ಯೋಜನೆಯ ಲಾಭ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಅಧ್ಯಕ್ಷೆ ಜೋಗದ ನೀಲಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !