ಭಾನುವಾರ, ಆಗಸ್ಟ್ 25, 2019
23 °C
ಎಐಎಂಎಸ್‌ಎಸ್‌ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ಧರಣಿ

‘ಉನ್ನಾವ್ ಸಂತ್ರಸ್ತೆಗೆ ನ್ಯಾಯ ದೊರಕಿಸಿ’

Published:
Updated:
Prajavani

ಬಳ್ಳಾರಿ: ‘ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಮೇಲಿನ ಕೊಲೆ ಯತ್ನ ಮತ್ತು ಆಕೆಯ ಕುಟುಂಬದ ಸದಸ್ಯರ ಕೊಲೆ ಖಂಡನೀಯ. ಆಕೆಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಧರಣಿ ನಡೆಸಿದರು.

‘ಉತ್ತರ ಪ್ರದೇಶ ರಾಜ್ಯದ ಉನ್ನಾವ್ ಜಿಲ್ಲೆಯಲ್ಲಿ 2017ರ ಜೂನ್‌ನಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಘಟನೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಅಲ್ಲಿನ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ ಅವರು ಸಂತ್ರಸ್ತೆಯ ಪರವಾಗಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ಹೊರಟಿರುವ ಕೃತ್ಯ ಖಂಡನೀಯ. ಆರೋಪಿಗಳು ಸಂತ್ರಸ್ತೆಯ ಕಾರಿಗೆ ಲಾರಿಯಿಂದ ಢಿಕ್ಕಿ ಹೊಡೆಸಿ ಆಕೆಯ ಚಿಕ್ಕಮ್ಮಂದಿರನ್ನು ಕೊಂದಿರುವುದು ಹೀನಕೃತ್ಯ’ ಎಂದು ಘಟಕದ ಪ್ರಮುಖರಾದ ಎ.ಶಾಂತಾ, ಎಂ.ಎನ್‌.ಮಂಜುಳಾ ಮತ್ತು ಕೆ.ಎಂ. ಈಶ್ವರಿ ಆಕ್ರೋಶ ವ್ಯಕ್ತಪಡಿಸಿದರು.

‘ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರದಂಥ ಘಟನೆಗಳು ದೇಶದೆಲ್ಲಡೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ನ್ಯಾಯಾಂಗ, ಪೊಲೀಸ್, ರಾಜಕೀಯ ವ್ಯವಸ್ಥೆಗಳು ಕೊಳೆತಿದ್ದು, ಸಂವೇದನೆ ಕಳೆದುಕೊಂಡಿವೆ. ಮಹಿಳೆಯರಿಗೆ ನ್ಯಾಯ ಕೊಡುವಲ್ಲಿ ವಿಫಲವಾಗಿವೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂತ್ರಸ್ತೆಗೆ ನ್ಯಾಯ ದೊರಕುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದರು. 

Post Comments (+)