ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕೆ.ಜಿ.ಎಫ್‌. ಕ್ರೇಜ್‌ಗೆ ಮಾರುಹೋದ ಯುವಕರು

ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಯುವಕರ ದಂಡು; ಬೆತ್ತದ ರುಚಿಗಿಂತ ಚಿತ್ರ ಹೆಚ್ಚೆಂದರು
Last Updated 21 ಡಿಸೆಂಬರ್ 2018, 10:32 IST
ಅಕ್ಷರ ಗಾತ್ರ

ಹೊಸಪೇಟೆ: ಯಶ್‌ ನಟನೆಯ ಕೆ.ಜಿ.ಎಫ್‌. ಸಿನಿಮಾ ಶುಕ್ರವಾರ ತೆರೆ ಕಂಡ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಚಿತ್ರದ ಮೊದಲ ಪ್ರದರ್ಶನ ಕಣ್ತುಂಬಿಕೊಳ್ಳಲುಶುಕ್ರವಾರ ಬೆಳಗಿನ ಜಾವ ಯುವಕರ ದಂಡುಮೈನಡುಗುವ ಚಳಿಯನ್ನೂ ಲೆಕ್ಕಿಸದೆ ಇಲ್ಲಿನ ಬಾಲ ಚಿತ್ರಮಂದಿರದ ಎದುರು ಜಮಾಯಿಸಿತ್ತು. ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಯುವಕರು ಬಂದದ್ದರಿಂದ ಚಿತ್ರಮಂದಿರದ ಪರಿಸರದಲ್ಲಿ ಜನಜಾತ್ರೆ ಕಂಡು ಬಂತು.

ಚಿತ್ರ ಪ್ರದರ್ಶನಕ್ಕೂ ಮುನ್ನ ಯಶ್‌ ಅಭಿಮಾನಿಗಳು, ಅವರ ಕಟೌಟ್‌ ಹಾಗೂ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಬೃಹತ್‌ ಹೂವಿನ ಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯಶ್‌ ಪರ ಘೋಷಣೆಗಳನ್ನು ಕೂಗಿದರು. ನಂತರ ಟಿಕೆಟ್‌ ಪಡೆಯಲು ತಾ ಮುಂದು, ನಾ ಮುಂದು ಎಂದು ಕೌಂಟರ್‌ ಮುಂದೆ ಯುವಕರು ಮುಗಿ ಬಿದ್ದರು. ನೂಕಾಟ, ತಳ್ಳಾಟ ಹೆಚ್ಚಾಗಿದ್ದರಿಂದ ಪೊಲೀಸರು ಮಧ್ಯ ಪ್ರವೇಶಿಸಿದರು. ಬೆತ್ತದ ರುಚಿ ತೋರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಟಿಕೆಟ್‌ ಗಿಟ್ಟಿಸಿಕೊಂಡವರ ಮುಖಚರ್ಯೆಯಲ್ಲಿ ಏನೋ ಸಾಧಿಸಿದ ಖುಷಿ ಕಂಡು ಬಂದರೆ, ಟಿಕೆಟ್‌ ಸಿಗದವರು ಸಪ್ಪೆ ಮುಖ ಮಾಡಿಕೊಂಡು ಅಸಹಾಯಕರೆಂಬಂತೆ ನಿಂತುಕೊಂಡಿದ್ದರು. ಮತ್ತೆ ಕೆಲವರು, ಮೊದಲ ಪ್ರದರ್ಶನಕ್ಕೆ ಟಿಕೆಟ್‌ ಸಿಗದಿದ್ದರೇನೂ ಹತ್ತು ಗಂಟೆಗೆ ನಿಗದಿಯಾಗಿದ್ದ ಎರಡನೇ ಪ್ರದರ್ಶನ ನೋಡೋಣ ಎಂದು ಚಿತ್ರಮಂದಿರದ ಬಳಿಯೇ ಕಾದು ಕುಳಿತಿದ್ದರು. ಚಿತ್ರಮಂದಿರದ ಎತ್ತರದ ಕಾಂಪೌಂಡ್‌, ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಏರಿ ಕುಳಿತುಕೊಂಡಿದ್ದರು. ಮತ್ತೆ ಕೆಲವರು ಚಿತ್ರಮಂದಿರ ಎದುರಿನ ರಸ್ತೆ ವಿಭಜಕದ ಮೇಲೆ ಠಿಕಾಣಿ ಹೂಡಿದ್ದರು. ಚಿತ್ರಮಂದಿರದಲ್ಲಿ ವಾಹನ ನಿಲುಗಡೆಗೆ ಜಾಗ ಸಾಕಾಗದ ಕಾರಣ ಜನ ರಸ್ತೆಯುದ್ದಕ್ಕೂ ವಾಹನಗಳನ್ನು ನಿಲ್ಲಿಸಿದ್ದರು. ಇದರಿಂದ ಹಂಪಿ ರಸ್ತೆಯಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ಸಂಚಾರ ಅಸ್ತವ್ಯಸ್ತಗೊಂಡಿತು.

ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ವೇಳೆ ಕೊನೆಯ ಪ್ರದರ್ಶನಕ್ಕೂ ನೂಕು ನುಗ್ಗಲು ಕಂಡು ಬಂತು. ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಕೆಲವರು ಟಿಕೆಟ್‌ ಪಡೆದು, ಅದನ್ನು ಹೆಚ್ಚಿನ ದರದಲ್ಲಿ ಹೊರಗೆ ಮಾರಾಟ ಮಾಡಿಕೊಳ್ಳುತ್ತಿರುವುದು ಕಂಡು ಬಂತು. ನೆಚ್ಚಿನ ನಟನ ಸಿನಿಮಾ ನೋಡಲು ನಿಗದಿತ ದರಕ್ಕಿಂತ ಹೆಚ್ಚು ಹಣ ಕೊಟ್ಟು, ಟಿಕೆಟ್‌ ಪಡೆದು ಚಿತ್ರ ವೀಕ್ಷಿಸಿದರು.

ಇನ್ನು ಚಿತ್ರಮಂದಿರದಲ್ಲಿ ಸಿನಿಮಾ ಶುರುವಾಗುತ್ತಿದ್ದಂತೆ ಶಿಳ್ಳೆ, ಕೇಕೆ ಮುಗಿಲು ಮುಟ್ಟಿತ್ತು. ಯಶ್‌ ಪರ ಘೋಷಣೆಗಳು ಮೊಳಗುತ್ತಿದ್ದವು. ಬಹುತೇಕ ಜನ ಮೊಬೈಲ್‌ಗಳಲ್ಲಿ ಸಿನಿಮಾ ಸೆರೆಹಿಡಿದುಕೊಳ್ಳುತ್ತಿದ್ದರು. ಆದರೆ, ಯಾರೊಬ್ಬರು ಅವರನ್ನು ತಡೆಯಲು ಹೋಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT