ಶನಿವಾರ, ಸೆಪ್ಟೆಂಬರ್ 18, 2021
27 °C

ಕೋವಿಡ್–19: ಹೊಸಪೇಟೆಯಲ್ಲಿ ಶಂಕಿತನ ರಕ್ತಪರೀಕ್ಷೆ ವರದಿ ನೆಗೆಟಿವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ದುಬೈನಿಂದ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರ ರಕ್ತದ ಮಾದರಿ ತಪಾಸಣೆಯ ನಂತರ ಅವರಿಗೆ ಕೋವಿಡ್–19 ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ತಿಳಿಸಿದರು.

‘ಕೋವಿಡ್‌–19 ಶಂಕೆಯ ಮೇರೆಗೆ ಇತ್ತೀಚೆಗೆ ಹೊಸಪೇಟೆ ನಿವಾಸಿಯೊಬ್ಬರ ರಕ್ತದ ಮಾದರಿ ಪರೀಕ್ಷಿಸಲಾಯಿತು. ತಪಾಸಣೆಯ ನಂತರ ಅವರಿಗೆ ಸೋಂಕು ತಗುಲಿಲ್ಲ ಎನ್ನುವುದು ಖಚಿತವಾಗಿದೆ’ ಎಂದು ಉಪವಿಭಾಗಾಧಿಕಾರಿ ತಿಳಿಸಿದರು.

‘ದುಬೈನಿಂದ ಹಿಂದಿರುಗಿದ್ದ ವ್ಯಕ್ತಿಯ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ಅವರಿಗೆ ಸೋಂಕು ತಗುಲಿಲ್ಲ ಎಂದು ಪರೀಕ್ಷೆಯ ನಂತರ ಗೊತ್ತಾಯಿತು. ವಿದೇಶದಿಂದ ಬಂದವರಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ಅಂತಹವರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ. ಅದರ ಬಗ್ಗೆ ಯಾರಿಗೂ ಭಯ ಬೇಡ’ ಎಂದು ಹೇಳಿದರು.

ಅಪಪ್ರಚಾರ ಮಾಡಿದರೆ ಶಿಸ್ತುಕ್ರಮ

‘ಕೋವಿಡ್‌–19 ಸೋಂಕಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವುದು, ವದಂತಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಇದೇ ಸಂದರ್ಭ ಅವರು ಎಚ್ಚರಿಕೆ ನೀಡಿದರು.

‘ಭಾರತದಲ್ಲಿ ಈವರೆಗೆ ಒಟ್ಟು 34 ಶಂಕಿತ ಸೋಂಕಿತರನ್ನು ಗುರುತಿಸಲಾಗಿದೆ. ಯಾರೊಬ್ಬರೂ ಮೃತಪಟ್ಟಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇಲ್ಲಸಲ್ಲದ ವಿಷಯ ಪೋಸ್ಟ್‌ ಮಾಡಿ ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ವಿಶ್ವ ಪಾರಂಪರಿಕ ತಾಣ ಹಂಪಿ ನಗರದ ಹತ್ತಿರದಲ್ಲೇ ಇದೆ. ನಿತ್ಯ ವಿವಿಧ ದೇಶಗಳಿಂದ ನೂರಾರು ಜನ ಬಂದು ಹೋಗುತ್ತಾರೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಹಂಪಿಯಲ್ಲಿ ಈಗಾಗಲೇ ವೈದ್ಯರ ತಂಡ ನಿಯೋಜಿಸಲಾಗಿದೆ. ಪ್ರತಿಯೊಬ್ಬರ ತಪಾಸಣೆ ನಡೆಸಲಾಗುತ್ತಿದೆ. ವಿದೇಶಿ ಪ್ರವಾಸಿಗರು ಯಾವ್ಯಾವ ದೇಶಗಳನ್ನು ಸುತ್ತಿ ಬಂದಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದರು.

‘ವಿದೇಶಿ ಪ್ರವಾಸಿಗರು ಹೋಟೆಲ್‌ಗಳಿಗೆ ಬಂದಾಗ ಅವರು ಯಾವ ದೇಶಗಳ ಮೂಲಕ ಪ್ರಯಾಣಿಸಿ ಬಂದಿದ್ದಾರೆ ಎಂಬ ವಿವರ ಪಡೆದುಕೊಳ್ಳಬೇಕು. ಕೆಮ್ಮು, ನೆಗಡಿ, ಅತಿಯಾದ ಜ್ವರದಿಂದ ಬಳಲುತ್ತಿದ್ದರೆ ತಕ್ಷಣವೇ ತಾಲ್ಲೂಕು ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಬೇಕು. ಸಾಧ್ಯವಾದರೆ ಸ್ಕ್ರೀನಿಂಗ್‌ ಸಾಧನಗಳಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ, ‘ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಇರಾನ್‌ ದೇಶಗಳ ಪ್ರಜೆಗಳು ನಗರಕ್ಕೆ ಬಂದಾಗ ಅವರ ಮೇಲೆ ವಿಶೇಷ ಗಮನ ಹರಿಸಬೇಕು. ಅವರಲ್ಲಿ ಕೆಮ್ಮು, ನೆಗಡಿ, ಜ್ವರಯಿದ್ದರೆ ಕಡ್ಡಾಯವಾಗಿ ನಮ್ಮ ಗಮನಕ್ಕೆ ತರಬೇಕು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು