ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ದಿನವೂ ಮುಂದುವರಿದ ಮುಷ್ಕರ; ಖಾಸಗಿ ವಾಹನಗಳಿಂದ ಪ್ರಯಾಣಿಕರ ಸುಲಿಗೆ

ಮೂರು ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಗೆ ಎರಡು ಕೋಟಿಗೂ ಅಧಿಕ ನಷ್ಟ
Last Updated 13 ಡಿಸೆಂಬರ್ 2020, 10:27 IST
ಅಕ್ಷರ ಗಾತ್ರ
ADVERTISEMENT
"ಬಸ್‌ ಸಂಚಾರ ನಿಂತಿರುವುದರಿಂದ ಖಾಸಗಿ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಭಾನುವಾರ ಹೊಸಪೇಟೆಯಲ್ಲಿ ಆಟೊಗಳು ಜನರನ್ನು ಕುರಿಗಳಂತೆ ತುಂಬಿಕೊಂಡು ಸಂಚಾರ ಬೆಳೆಸಿದವು"

ಹೊಸಪೇಟೆ: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮೂರು ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಎರಡು ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಹೊಸಪೇಟೆ ವಿಭಾಗ ವ್ಯಾಪ್ತಿಯಲ್ಲಿ ಮೊದಲ ದಿನ ₹20 ಲಕ್ಷ, ಎರಡು ಮತ್ತು ಮೂರನೇ ದಿನ ತಲಾ ₹40 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಬಳ್ಳಾರಿ ವಿಭಾಗ ವ್ಯಾಪ್ತಿಯಲ್ಲೂ ಇಷ್ಟೇ ನಷ್ಟವಾಗಿದೆ ಎಂದು ಗೊತ್ತಾಗಿದೆ.
ಮುಷ್ಕರಕ್ಕೆ ಮೊದಲ ದಿನವಾದ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶನಿವಾರ ಎರಡನೇ ದಿನ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದರಿಂದ ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಬಸ್‌ ರಸ್ತೆಗೆ ಇಳಿಯಲಿಲ್ಲ. ಮೂರನೇ ದಿನವೂ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ. ಇದರಿಂದಾಗಿ ಜಿಲ್ಲೆಯ ಯಾವ ಭಾಗದಲ್ಲೂ ಬಸ್‌ಗಳು ಸಂಚರಿಸಿಲ್ಲ.

ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರುಗುಪ್ಪ, ಕುರುಗೋಡು, ಕಂಪ್ಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಹಾಗೂ ಹರಪನಹಳ್ಳಿಯಲ್ಲೆಲ್ಲಾ ಮುಷ್ಕರಕ್ಕೆ ಉತ್ತಮ ಬೆಂಬಲ ಸಿಕ್ಕಿದೆ. ಎಲ್ಲ ತಾಲ್ಲೂಕು ಕೇಂದ್ರಗಳ ಬಸ್‌ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್‌ಗಳು ಡಿಪೊ ಬಿಟ್ಟು ಹೊರಬರಲಿಲ್ಲ.

ಮುಷ್ಕರ ನಿರತರು ಮುಷ್ಕರ ನಡೆಸುತ್ತಿರುವ ಸ್ಥಳದಲ್ಲೇ ಆಹಾರ ತಯಾರಿಸಿ, ಅಲ್ಲೇ ಸೇವಿಸಿದರು. ಕ್ರಾಂತಿಗೀತೆ, ಮುಖಂಡರ ಭಾಷಣ ಆಲಿಸುತ್ತ ಸಮಯ ಕಳೆಯುತ್ತಿದ್ದಾರೆ. ಮುಷ್ಕರ ನಿರತರ ಪರವಾಗಿ ಅವರ ಸಂಘಟನೆಗಳ ಮುಖಂಡರು ಬೆಂಗಳೂರಿನಲ್ಲಿ ಸಾರಿಗೆ ಸಚಿವರೊಂದಿಗೆ ನಡೆಸುತ್ತಿರುವ ಮಾತುಕತೆಯ ಪ್ರತಿಯೊಂದು ವಿವರ ದೂರವಾಣಿಯಲ್ಲಿ ಪಡೆಯುತ್ತಿದ್ದಾರೆ. ನಂತರ ಮುಷ್ಕರ ನಿರತರಿಗೆ ವಿವರಿಸುತ್ತಿದ್ದಾರೆ. ‘ಬೇಡಿಕೆ ಈಡೇರಿಸುವವರೆಗೆ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಭಟನಾ ನಿರತರು ತಿಳಿಸಿದ್ದಾರೆ.

ಬಸ್‌ ಸಂಚಾರ ನಿಂತಿರುವುದರಿಂದ ಖಾಸಗಿ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಭಾನುವಾರ ಹೊಸಪೇಟೆಯಲ್ಲಿ ಆಟೊಗಳು ಜನರನ್ನು ಕುರಿಗಳಂತೆ ತುಂಬಿಕೊಂಡು ಸಂಚಾರ ಬೆಳೆಸಿದವು

ಖಾಸಗಿಯವರ ಸುಲಿಗೆ
ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ.

ಕೆಲಸ ನಿಮಿತ್ತ ಬೇರೆ ಊರುಗಳಿಂದ ಇಲ್ಲಿ ಸಿಲುಕಿಕೊಂಡಿರುವವರು, ತುರ್ತು ಕೆಲಸದ ನಿಮಿತ್ತ ಬೇರೆ ಕಡೆಗಳಿಗೆ ಹೋಗುವವರು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಆಶ್ರಯಿಸುವ ಸಂದರ್ಭ ಬಂದೊದಗಿದೆ. ಇದೇ ಸಮಯ ಎಂದು ಭಾವಿಸಿ ಖಾಸಗಿ ವಾಹನಗಳವರು ಪ್ರಯಾಣಿಕರಿಂದ ಮನಬಂದಂತೆ ಹಣ ತೆಗೆದುಕೊಳ್ಳುತ್ತಿದ್ದಾರೆ.

ಹೊಸಪೇಟೆ–ಕಂಪ್ಲಿ ನಡುವೆ 35 ಪ್ರಯಾಣ ದರ ಇದೆ. ಹೊಸಪೇಟೆ–ಬಳ್ಳಾರಿ ನಡುವೆ ಸಂಚರಿಸಲು ಬಸ್ಸಿಗೆ ₹65 ಟಿಕೆಟ್‌ ಇದೆ. ಆದರೆ, ಖಾಸಗಿ ವಾಹನಗಳವರು ಕಂಪ್ಲಿಗೆ ಹೋಗಲು ₹100, ಬಳ್ಳಾರಿಗೆ ತೆರಳಲು ₹150ರಿಂದ ₹200 ಪಡೆಯುತ್ತಿದ್ದಾರೆ. ಇನ್ನೂ ಆಟೊಗಳವರು ಅದಕ್ಕೆ ಹೊರತಾಗಿಲ್ಲ.

ಸಿಟಿ ಬಸ್‌ಗಳು ಸಂಚರಿಸದ ಕಾರಣ ಆಟೊಗಳವರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದುಕೊಳ್ಳುತ್ತಿದ್ದಾರೆ. ಅ‌ವರು ಹೇಳುವ ದರವೇ ಅಂತಿಮ ಎಂಬಂತಾಗಿದೆ. ಅವರನ್ನು ಯಾರೂ ಕೇಳುವವರು ಇಲ್ಲದಂತಾಗಿದೆ ಎನ್ನುವುದು ಸಾರ್ವಜನಿಕರ ಗೋಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT