ಭಾನುವಾರ, ಆಗಸ್ಟ್ 25, 2019
28 °C
ಕಮಲಾಪುರದಿಂದ ಹೊಸಪೇಟೆ ವರೆಗೆ ರೈತರಿಂದ ಪಾದಯಾತ್ರೆ

15 ದಿನದಲ್ಲಿ ಕೆರೆ ತುಂಬಿಸುವ ಭರವಸೆ

Published:
Updated:
Prajavani

ಹೊಸಪೇಟೆ: ತುಂಗಭದ್ರಾ ಜಲಾಶಯದ ಕಾಲುವೆ ಮೂಲಕ ತಾಲ್ಲೂಕಿನ ಕಮಲಾಪುರ ಕೆರೆ ತುಂಬಿಸಿ, ಅದನ್ನು ಉಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಪಾದಯಾತ್ರೆ ನಡೆಸಿದರು.

ಕಮಲಾಪುರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭಗೊಂಡ ರ್‍ಯಾಲಿಯು ಗಾಳೆಮ್ಮನಗುಡಿ, ಮಲಪನಗುಡಿ, ಕೊಂಡನಾಯಕನಹಳ್ಳಿ, ಅನಂತಶಯನಗುಡಿ ಮೂಲಕ ಹಾದು ರೋಟರಿ ವೃತ್ತದಲ್ಲಿ ಕೊನೆಗೊಂಡಿತು. ಅಲ್ಲಿ ರೈತರು ಮಾನವ ಸರಪಳಿ ನಿರ್ಮಿಸಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದರು.

ವಿಷಯ ತಿಳಿದು ಸಂಸದ ವೈ. ದೇವೇಂದ್ರಪ್ಪ, ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಮ್ಮಪ್ಪ, ನಾಗಭೂಷಣ ಧರಣಿ ಸ್ಥಳಕ್ಕೆ ಭೇಟಿ ನೀಡಿ, ರೈತರಿಂದ ಮನವಿ ಪತ್ರ ಸ್ವೀಕರಿಸಿದರು.

ಬಳಿಕ ಮಾತನಾಡಿದ ದೇವೇಂದ್ರಪ್ಪ, ‘ಹದಿನೈದು ದಿನಗಳಲ್ಲಿ ಕಮಲಾಪುರ ಕೆರೆ ಸಂಪೂರ್ಣವಾಗಿ ತುಂಬಿಸಲಾಗುವುದು. ಆರು ತಿಂಗಳೊಳಗೆ ತುರ್ತಾ ಕಾಲುವೆ ದುರಸ್ತಿಗೊಳಿಸಲಾಗುವುದು. ಸ್ವತಃ ನಾನೇ ಅಧಿಕಾರಿಗಳ ಬೆನ್ನು ಹತ್ತಿ ಕೆಲಸ ಮಾಡಿಸುತ್ತೇನೆ. ಅದರ ಬಗ್ಗೆ ಯಾರಿಗೂ ಸಂಶಯ ಬೇಡ’ ಎಂದು ಭರವಸೆ ನೀಡಿದರು.

‘ವಾರದೊಳಗೆ ಸ್ಥಳೀಯ ನೀರುಗಂಟರನ್ನು ಬೇರೆಡೆ ಸ್ಥಳಾಂತರಿಸಲಾಗುವುದು. ಇಷ್ಟರಲ್ಲೇ ಜಿಲ್ಲೆಯ ಎಲ್ಲ ಭಾಗದ ರೈತರ ಸಭೆ ಕರೆದು, ಅವರ ಸಮಸ್ಯೆಗಳ ಕುರಿತು ಚರ್ಚಿಸಿ, ಮಾಹಿತಿ ಕಲೆ ಹಾಕುವೆ. ನಂತರ ಆದ್ಯತೆಯ ಮೇರೆಗೆ ಹಂತ ಹಂತವಾಗಿ ಆ ಕೆಲಸ ಕೈಗೆತ್ತಿಕೊಳ್ಳುತ್ತೇನೆ’ ಎಂದರು.

‘ಕಮಲಾಪುರ ಕೆರೆಗೆ ನೀರು ಹರಿಸುತ್ತಿರುವ ವಿಷಯವನ್ನು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೆರೆಗೆ ನೀರು ಹರಿಸುತ್ತಿರುವ ಛಾಯಾಚಿತ್ರ, ವಿಡಿಯೊ ಕಳುಹಿಸುವಂತೆ ಅವರೇ ಸೂಚಿಸಿದ್ದರು. ಕೆಲಸ ಆಗುತ್ತಿರುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರು ಏನೇ ಸಮಸ್ಯೆಯಿದ್ದರೂ ನೇರವಾಗಿ ಬಂದು ಹೇಳಿಕೊಂಡರೆ ಅವುಗಳನ್ನು ಬಗೆಹರಿಸಲಾಗುವುದು’ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌, ‘ಕಮಲಾಪುರ ಕೆರೆಗೆ ಐತಿಹಾಸಿಕ ಪರಂಪರೆ ಇದೆ. ಕಾಲುವೆ ಮೂಲಕ ಈ ಕೆರೆಗೆ ಆರಂಭದಲ್ಲಿ ನಿತ್ಯ 11 ಕ್ಯುಸೆಕ್‌ ನೀರು ಬಿಡಲಾಗುತ್ತಿತ್ತು. ನಂತರ 8 ಕ್ಯುಸೆಕ್‌ಗೆ ಇಳಿಕೆ ಮಾಡಲಾಯಿತು. ಕೆಲ ವರ್ಷಗಳಿಂದ 5 ಕ್ಯುಸೆಕ್‌ಗೆ ಇಳಿಸಲಾಗಿದೆ. ಕೆರೆ ತುಂಬುತ್ತಿಲ್ಲ. ಕೆರೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುತ್ತಿರುವ ರೈತರಿಗೆ ತೊಂದರೆ ಆಗುತ್ತಿದೆ. ಮೊದಲಿನಂತೆ ನೀರು ಹರಿಸಬೇಕು’ ಎಂದು ಆಗ್ರಹಿಸಿದರು.

‘ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ ₹ 430 ಕೋಟಿ ಮಂಜೂರಾದರೂ ಕೆಲಸ ಕೈಗೆತ್ತಿಕೊಂಡಿಲ್ಲ. ಕಾಲುವೆ ಭಾಗದ ಗ್ರಾಮಗಳ ರೈತರ ಸಭೆ ಕರೆದು, ಅವರ ಸಲಹೆ ಪಡೆದು ಕೆಲಸ ಆರಂಭಿಸಬೇಕು. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ’ ಎಂದು ಟೀಕಿಸಿದರು.

ಸಂಘದ ಮುಖಂಡರಾದ ರೇವಣಸಿದ್ದಪ್ಪ, ಮಲ್ಲಿಕಾರ್ಜುನ, ಸಣ್ಣಕ್ಕಿ ರುದ್ರಪ್ಪ, ಎಲ್‌.ಎಸ್‌.ರುದ್ರಪ್ಪ, ಕೆ.ಸುರೇಸ, ಶ್ರೀನಿವಾಸ, ನಾಗರಾಜ, ಗೋಪಾಲಕೃಷ್ಣ, ರಮೇಶ, ನಾದೀಂ ಇದ್ದರು.

Post Comments (+)