ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯದ ಹಿನ್ನೀರಿನ ಲೇಕ್‌ ವ್ಯೂವ್‌ ಪ್ರವೇಶ ನಿರ್ಬಂಧ

ಪ್ರವಾಸಿ ತಾಣದಲ್ಲೀಗ ಮೌನ
Last Updated 13 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿರುವ ಜನರ ಅಚ್ಚುಮೆಚ್ಚಿನ ತಾಣ ಲೇಕ್‌ ವ್ಯೂವ್‌ಗೆ ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಪ್ರವಾಸಿ ತಾಣವೀಗ ಜನರಿಲ್ಲದೆ ಭಣಗುಡುತ್ತಿದೆ.

ಮುನಿರಾಬಾದ್‌ನ ಮುಖ್ಯ ದ್ವಾರಕ್ಕೆ ಬೀಗ ಜಡಿದು, ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ತುಂಗಭದ್ರಾ ನೀರಾವರಿ ನಿಗಮ ಹಾಗೂ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಒಳಗೆ ಬಿಡುತ್ತಿಲ್ಲ. ಇದರಿಂದಾಗಿ ಇಡೀ ಪರಿಸರದಲ್ಲಿ ಮೌನ ಆವರಿಸಿಕೊಂಡಿದೆ.

ಅಣೆಕಟ್ಟೆ ಸಂಪೂರ್ಣ ಭರ್ತಿಯಾದರೆ ಲೇಕ್‌ ವ್ಯೂವ್‌ಗೆ ವಿಶೇಷ ಕಳೆ ಬರುತ್ತದೆ. ಹಿನ್ನೀರಿನಿಂದ ಕೂಡಿರುವ ಈ ಪ್ರದೇಶದಲ್ಲಿ ಗುಣಮಟ್ಟದ ರಸ್ತೆ, ಪಾದಚಾರಿ ಮಾರ್ಗ, ಜನರ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಏಕಕಾಲಕ್ಕೆ ಸಾವಿರಾರು ಜನ ಈ ಪ್ರದೇಶದಲ್ಲಿ ಸುತ್ತಾಡುವಷ್ಟು ವಿಶಾಲವಾಗಿದೆ. ಚಿಣ್ಣರಿಂದ ಹಿರಿಯರ ವರೆಗೆ ಪ್ರತಿಯೊಬ್ಬರೂ ಈ ಸ್ಥಳಕ್ಕೆ ಬಂದು ಕೆಲಹೊತ್ತು ಕಾಲ ಕಳೆದು ಹೋಗುತ್ತಿದ್ದರು.

ಅದರಲ್ಲೂ ಸುರ್ಯೋದಯ ಹಾಗೂ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲೆಂದೆ ಜಿಲ್ಲೆ ಸೇರಿದಂತೆ ನೆರೆಯ ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಹುಬ್ಬಳ್ಳಿಯಿಂದ ಜನ ಬರುತ್ತಿದ್ದರು. ಅನೇಕರಿಗೆ ಈಗ ಕೂಡ ಪ್ರವೇಶಕ್ಕೆ ನಿರ್ಬಂಧಿಸಿರುವ ವಿಷಯ ಗೊತ್ತೇ ಇಲ್ಲ. ನಿತ್ಯ ಅನೇಕ ಜನ ಬಂದು ನಿರಾಶರಾಗಿ ವಾಪಸ್‌ ಹೋಗುತ್ತಿದ್ದಾರೆ.

ಆಗಸ್ಟ್‌ನಿಂದ ಫೆಬ್ರುವರಿ ವರೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತಿದ್ದರು. ಇದರಿಂದಾಗಿ ಅದರ ಪರಿಸರದಲ್ಲಿನ ಹೋಟೆಲ್‌ಗಳು, ಗೂಡಂಗಡಿಗಳು, ಪಾನಿಪುರಿ, ಐಸ್‌ಕ್ರೀಂ, ಮೆಕ್ಕೆಜೋಳ, ಆಟೊ ರಿಕ್ಷಾದವರಿಗೆ ಕೈತುಂಬ ಕೆಲಸವಿರುತ್ತಿತ್ತು. ಈಗ ಅವರಿಗೆ ಕೆಲಸವಿಲ್ಲದೆ ಗೋಳಾಡುತ್ತಿದ್ದಾರೆ.

‘ಎರಡ್ಮೂರು ತಿಂಗಳ ಹಿಂದೆ ಯಾರೋ ಕೆಲವು ಯುವಕರು ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡು, ಮಾರಣಾಂತಿಕವಾಗಿ ಪರಸ್ಪರ ಹಲ್ಲೆ ನಡೆಸಿಕೊಂಡಿದ್ದಾರೆ. ಅಂದಿನಿಂದ ಒಳಗೆ ಹೋಗಲು ಯಾರಿಗೂ ಬಿಡುತ್ತಿಲ್ಲ. ಇದರಿಂದ ನಮ್ಮ ವ್ಯಾಪಾರ ಸಂಪೂರ್ಣ ಬಿದ್ದು ಹೋಗಿದೆ. ಪ್ರವಾಸಿಗರಿಂದಲೇ ನಮ್ಮ ಹೋಟೆಲ್‌ ನಡೆಯುತ್ತಿತ್ತು. ಈಗಲೂ ಸಾಕಷ್ಟು ಜನ ಬರುತ್ತಿದ್ದಾರೆ. ಆದರೆ, ವಿಷಯ ತಿಳಿದು ಮುಖ್ಯದ್ವಾರದಿಂದಲೇ ವಾಪಸ್‌ ಹೋಗುತ್ತಿದ್ದಾರೆ’ ಎಂದು ಹೋಟೆಲ್‌ ಮಾಲೀಕ ರಫೀಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಲಾಶಯ ತುಂಬಿದರಷ್ಟೇ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಲ್ಲದಿದ್ದರೆ ಯಾರು ಕೂಡ ಮೂಸಿಯೂ ನೋಡುವುದಿಲ್ಲ. ಸತತ ಎರಡನೇ ವರ್ಷ ಅಣೆಕಟ್ಟೆ ಭರ್ತಿಯಾಗಿದೆ. ವಿಷಯ ತಿಳಿದು ಅಪಾರ ಸಂಖ್ಯೆಯಲ್ಲಿ ಜನ ವಾಹನಗಳಲ್ಲಿ ಬಂದು ಹಿಂತಿರುಗುತ್ತಿದ್ದಾರೆ. ಅನೇಕರು ನಿತ್ಯ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ವಾಪಸ್‌ ಹೋಗುತ್ತಿದ್ದಾರೆ. ಪ್ರವಾಸಿಗರಿಗಾಗಿಯೇ ಈ ಸ್ಥಳ ಅಭಿವೃದ್ಧಿ ಪಡಿಸಲಾಗಿದೆ. ಅವರಿಗೆ ಬಿಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಲೇಕ್‌ ವ್ಯೂವ್‌ ನನಗೆ ಬಹಳ ಇಷ್ಟವಾದ ಸ್ಥಳ. ನಾನು ನಮ್ಮ ಗೆಳೆಯರೊಂದಿಗೆ ಕೊಪ್ಪಳ ಜಿಲ್ಲೆ ಕಾರಟಗಿಯಿಂದ ಬಂದಿದ್ದೆ. ಆದರೆ, ಇಲ್ಲಿಗೆ ಬಂದ ನಂತರ, ಸಾರ್ವಜನಿಕರಿಗೆ ಒಳಗೆ ಬಿಡುತ್ತಿಲ್ಲ ಎಂಬ ವಿಷಯ ಗೊತ್ತಾಯಿತು. ಪೊಲೀಸರಿಗೆ ಕೇಳಿದರೆ, ‘ಮೇಲಿನ ಅಧಿಕಾರಿಗಳು ಯಾರಿಗೂ ಬಿಡದಂತೆ ಸೂಚನೆ ಕೊಟ್ಟಿದ್ದಾರೆ. ದಯವಿಟ್ಟು ಹಿಂತಿರುಗಿ ಹೋಗಿ’ ಎಂದು ಹೇಳಿದ್ದಾರೆ. ಎಷ್ಟೇ ಮನವಿ ಮಾಡಿದರೂ ಬಿಡಲಿಲ್ಲ. ನಮ್ಮಂತೆ ಅನೇಕ ಜನ ಬಂದು ವಾಪಸ್‌ ಹೋಗುತ್ತಿದ್ದಾರೆ. ಒಂದುವೇಳೆ ಬಂದ್‌ ಮಾಡಿದರೆ ಪತ್ರಿಕೆ, ಮಾಧ್ಯಮಗಳ ಮೂಲಕ ಜನರಿಗೆ ವಿಷಯ ತಿಳಿಸಬಹುದಿತ್ತು. ಯಾವುದೇ ಸೂಚನೆ ಕೊಡದೆ ಬಂದ್‌ ಮಾಡಿರುವುದು ಸರಿಯಲ್ಲ’ ಎಂದು ಯುವತಿ ನಂದಿನಿ ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT