ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಮಾನ ಮಾಡಿದವರಿಗೆ ಪಾಠ ಕಲಿಸಿ: ದೇವದಾಸಿಯರ ಅಹೋರಾತ್ರಿ ಧರಣಿಯಲ್ಲಿ ಮುಖಂಡ ಜಂಬಯ್ಯ

Last Updated 18 ಸೆಪ್ಟೆಂಬರ್ 2019, 12:19 IST
ಅಕ್ಷರ ಗಾತ್ರ

ಹೊಸಪೇಟೆ: ‘ದೇವದಾಸಿಯರು ಸೇರಿದಂತೆ ಸಮಾಜದ ಎಲ್ಲ ವರ್ಗದವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಿಕೊಡುವ ಬದಲು ತನ್ನ ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಆನಂದ್‌ ಸಿಂಗ್‌ ಮತದಾರರಿಗೆ ಅಪಮಾನ ಮಾಡಿದ್ದು, ಬರುವ ಉಪಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಬಿ.ಎಸ್‌. ಮರಡಿ ಜಂಬಯ್ಯ ನಾಯಕ ಹೇಳಿದರು.

ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ನಗರದ ತಹಶೀಲ್ದಾರ್‌ ಕಚೇರಿ ಎದುರು ಎರಡು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದರು.

‘ಅನರ್ಹ ಶಾಸಕ ಆನಂದ್‌ ಸಿಂಗ್‌ ಎರಡು ಸಲ ಬಿಜೆಪಿ, ಒಂದು ಬಾರಿ ಕಾಂಗ್ರೆಸ್‌ನಿಂದ ಗೆದ್ದರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿಲ್ಲ. ಹುಸಿ ಭರವಸೆಗಳಲ್ಲಿಯೇ ಕಾಲ ಕಳೆದಿದ್ದಾರೆ. ಎಂದೂ ಜನರ ಸಮಸ್ಯೆಗಳಿಗೆ ಅವರು ಸ್ಪಂದಿಸಲಿಲ್ಲ. ತನ್ನ ವೈಯಕ್ತಿಕ ಸ್ವಾರ್ಥಕ್ಕಾಗಿ ಈಗ ಮತ್ತೆ ಪಕ್ಷಾಂತರಕ್ಕೆ ಮುಂದಾಗಿದ್ದಾರೆ. ಇಂತಹರನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ’ ಎಂದರು.

‘ದೇವದಾಸಿಯರು, ಹಿಂದುಳಿದ ವರ್ಗದವರಿಗೆ ನಿವೇಶನ ಕೊಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಆನಂದ್‌ ಸಿಂಗ್‌ ತಲೆಗೆ ಹಾಕಿಕೊಂಡಿಲ್ಲ. ನಗರದಲ್ಲಿ ನಿವೇಶನ ಕೊಡಲು ಜಮೀನು ಇಲ್ಲ ಎಂದು ನುಣುಚಿಕೊಂಡಿದ್ದಾರೆ. ಆದರೆ, 30–40 ಎಕರೆ ವಿಶಾಲ ಪ್ರದೇಶದಲ್ಲಿ ಲೇಔಟ್‌, ಭವ್ಯ ಬಂಗಲೆ ನಿರ್ಮಿಸುತ್ತಿದ್ದಾರೆ. ಅವರ ಐಷಾರಾಮಿ ಜೀವನಕ್ಕೆ ಎಲ್ಲ ಬೇಕು. ಆದರೆ, ಬಡವರಿಗೆ ಏನು ಬೇಡವೇ?’ ಎಂದು ಪ್ರಶ್ನಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನಮ್ಮ, ‘ದೇವದಾಸಿಯರ ನಿಖರ ಸಂಖ್ಯೆ ಕಲೆ ಹಾಕಲು ಹೋದ ವರ್ಷ ಸರ್ಕಾರ ರಾಜ್ಯದಾದ್ಯಂತ ಸರ್ವೇ ನಡೆಸಿದೆ. ಆದರೆ, ಜಿಲ್ಲೆ ಸೇರಿದಂತೆ ಅನೇಕ ಕಡೆಗಳಲ್ಲಿ ದೇವದಾಸಿಯರ ಹೆಸರು ಕೈಬಿಟ್ಟು ಹೋಗಿವೆ. ಪುನಃ ಸರ್ವೇ ನಡೆಸಿ, ಅವರ ಹೆಸರು ಸೇರಿಸಬೇಕು. ಅಷ್ಟೇ ಅಲ್ಲ, ದೇವದಾಸಿಯರ ಮಕ್ಕಳ ಹೆಸರು ಕೂಡ ಅದರಲ್ಲಿ ಸೇರ್ಪಡೆ ಮಾಡಬೇಕು. ಅನೇಕ ದೇವದಾಸಿಯರು ಮರಣ ಹೊಂದಿದ್ದಾರೆ. ಮಕ್ಕಳ ಹೆಸರು ಸೇರಿಸುವುದರಿಂದ ಸರ್ಕಾರದ ಸೌಲಭ್ಯಗಳು ಅವರಿಗೆ ಸಿಗುತ್ತವೆ’ ಎಂದರು.

ತಾಲ್ಲೂಕು ಅಧ್ಯಕ್ಷೆ ಹಂಪಮ್ಮ, ಕಾರ್ಯದರ್ಶಿ ಯಲ್ಲಮ್ಮ, ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ, ದೇವದಾಸಿಯರು, ಅವರ ಮಕ್ಕಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT