ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಪೊಲೀಸ್‌ ಇಲಾಖೆಗೆ ‘ಮೇಜರ್ ಸರ್ಜರಿ’

ವಿಜಯನಗರ ಜಿಲ್ಲೆಯಲ್ಲಿ ಶೇ 90ಕ್ಕೂ ಹೆಚ್ಚು ಸಿಬ್ಬಂದಿಯ ವರ್ಗಾವಣೆ
Last Updated 18 ಜೂನ್ 2022, 4:06 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯಲ್ಲಿ ‘ಮೇಜರ್‌ ಸರ್ಜರಿ’ ಮಾಡಲಾಗಿದೆ.

ಅಖಂಡ ಬಳ್ಳಾರಿ ಜಿಲ್ಲೆಯಿದ್ದಾಗ ಸಿಬ್ಬಂದಿ ಎಲ್ಲೆಲ್ಲಿ ಕೆಲಸ ನಿರ್ವಹಿಸುತ್ತಿದ್ದರೋ ಅವರು ಹೊಸ ಜಿಲ್ಲೆ ಉದಯಗೊಂಡ ನಂತರವೂ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದರು. ಮತ್ತೆ ಕೆಲವರನ್ನು ಬಳ್ಳಾರಿಯಿಂದ ವಿಜಯನಗರಕ್ಕೆ ವರ್ಗಾವಣೆಗೊಳಿಸಲಾಗಿತ್ತು. ಹೊಸ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಸಿಬ್ಬಂದಿಯ ಸೇವಾ ಪುಸ್ತಕ ಅಪ್‌ಡೇಟ್‌ ಆಗಿರಲಿಲ್ಲ. ಈಗ ಆ ಕೆಲಸ ಪೂರ್ಣಗೊಂಡಿದ್ದು, ಆ ಕಡತಗಳನ್ನು ವಿಜಯನಗರಕ್ಕೆ ಹಸ್ತಾಂತರಿಸಲಾಗಿದ್ದು, ಅದನ್ನು ಆಧರಿಸಿಯೇ ಪೊಲೀಸ್‌ ಸಿಬ್ಬಂದಿಯ ವರ್ಗಾವಣೆ ಮಾಡಲಾಗಿದೆ.

ಕಾನ್‌ಸ್ಟೆಬಲ್‌, ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಎ.ಎಸ್‌.ಐ ಸೇರಿದಂತೆ ಒಟ್ಟು 800ಕ್ಕೂ ಹೆಚ್ಚು ಸಿಬ್ಬಂದಿಯನ್ನು ಈಗಾಗಲೇ ಜಿಲ್ಲೆಯ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಕೆಲವರು ಈಗಾಗಲೇ ಹೊಸ ಠಾಣೆಗಳಲ್ಲಿ ಕೆಲಸ ಆರಂಭಿಸಿದ್ದು, ಮತ್ತೆ ಕೆಲವರು ಹೊಸ ಸ್ಥಳಕ್ಕೆ ಇನ್ನಷ್ಟೇ ಹೋಗಬೇಕಿದೆ. ಶೇ 90ಕ್ಕೂ ಹೆಚ್ಚು ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆ ಕೊನೆಗೊಂಡಿದೆ ಎಂದು ಜಿಲ್ಲಾ ಪೊಲೀಸ್‌ ಮೂಲಗಳು ತಿಳಿಸಿವೆ.

‘ಅನೇಕ ವರ್ಷಗಳಿಂದ ಯಾರೆಲ್ಲ ಸ್ವಂತ ಊರುಗಳ ಠಾಣೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರೋ ಹಾಗೂ ಐದು ವರ್ಷಗಳ ಕಾಲ ಒಂದೇ ಪೊಲೀಸ್‌ ಠಾಣೆಯಲ್ಲಿ ಬೇರು ಬಿಟ್ಟಿದ್ದರೋ ಅಂತಹವರನ್ನು ಆದ್ಯತೆಯ ಮೇರೆಗೆ ವರ್ಗಾವಣೆಗೊಳಿಸಲಾಗಿದೆ. ಸೇವಾ ಹಿರಿತನ ಆಧರಿಸಿ ಕೌನ್ಸೆಲಿಂಗ್‌ ಪ್ರಕ್ರಿಯೆ ಮೂಲಕ ವರ್ಗಾವಣೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಠಾಣೆಗಳಲ್ಲಿ ಅಲ್ಲಿನ ಡಿವೈಎಸ್ಪಿಗಳು, ಇನ್‌ಸ್ಪೆಕ್ಟರ್‌ಗಳು ಕೆಲ ಸಿಬ್ಬಂದಿಯನ್ನು ಉಳಿಸಬೇಕೆಂದು ಕೇಳಿದ್ದರು. ಆದರೆ, ಅಲ್ಲೂ ಕೂಡ ಸೇವಾ ಹಿರಿತನ ನಿಯಮ ಆಧರಿಸಿಯೇ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾರಿಗೂ ತಾರತಮ್ಯ ಮಾಡಿಲ್ಲ’ ಎಂದು ಹೇಳಿದರು.

‘ನಾನು 25 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಎಂದೂ ವರ್ಗಾವಣೆ ಮಾಡಿರಲಿಲ್ಲ. ಈಗ ಜಿಲ್ಲೆಯ ಎಲ್ಲ ಠಾಣೆಗಳಿಂದ ಶೇ 80ರಿಂದ 90ರಷ್ಟು ಸಿಬ್ಬಂದಿ ವರ್ಗಾವಣೆ ಮಾಡಿದ್ದಾರೆ. ಎಲ್ಲರ ಸೇವಾ ಹಿರಿತನ, ಐದು ವರ್ಷಕ್ಕೂ ಹೆಚ್ಚು ಕಾಲದಿಂದ ಕೆಲಸ ಮಾಡಿದ್ದರೆ ಅಂತಹವರನ್ನು ಕೌನ್ಸೆಲಿಂಗ್‌ ಮೂಲಕ ಪಾರದರ್ಶಕವಾಗಿ ವರ್ಗಾವಣೆಗೊಳಿಸಲಾಗಿದೆ. ರಾಜಕೀಯ ಹಸ್ತಕ್ಷೇಪವಿಲ್ಲದೇ ವರ್ಗಾವಣೆ ನಡೆಯುತ್ತಿರುವುದು ಖುಷಿ ತಂದಿದೆ. ಹೀಗಾದಾಗ ಪೊಲೀಸ್‌ ಇಲಾಖೆಯ ಬಗ್ಗೆ ಎಲ್ಲರಿಗೂ ಗೌರವ ಬರಲು ಸಾಧ್ಯ’ ಎಂದು ಹೆಸರು ಹೇಳಲಿಚ್ಛಿಸದ ಎಎಸ್‌ಐ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳೀಯ ಶಾಸಕ, ಸಂಸದರಿಂದ ಪತ್ರ ತಂದು ಅನೇಕರು ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಬೀಡು ಬಿಟ್ಟಿದ್ದರು. ಈಗ ಅವರು ಅನಿವಾರ್ಯವಾಗಿ ಜಾಗ ಖಾಲಿ ಮಾಡಿದ್ದಾರೆ. ಮತ್ತೆ ಕೆಲವರು ಸ್ವಂತ ಊರುಗಳ ಠಾಣೆಗಳಲ್ಲಿ ಹಲವು ವರ್ಷಗಳಿಂದ ಉಳಿದುಕೊಂಡು, ಜನರ ಮೇಲೆ ಸವಾರಿ ಮಾಡುತ್ತಿದ್ದರು ಎಂಬ ದೂರುಗಳಿದ್ದವು. ಈಗ ಅಂತಹವರೆಲ್ಲ ಬೇರೆಡೆ ವರ್ಗಾವಣೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT