ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆಯಲ್ಲಿ ಮಲ್ಲಿಗೆ ನಾಡಿನ ಚಿಣ್ಣರ ಸಾಧನೆ

ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಮಿಂಚಿದ ಗ್ರಾಮೀಣ ವಿದ್ಯಾರ್ಥಿಗಳು
Last Updated 12 ಫೆಬ್ರುವರಿ 2019, 19:46 IST
ಅಕ್ಷರ ಗಾತ್ರ

ಹೂವಿನಹಡಗಲಿ: ಇಲ್ಲಿನ ಗುಜರೋ ಕೆನೋರೊ ಖಾನ್ ಕರಾಟೆ ತರಬೇತಿ ಶಾಲೆಯ ಮಕ್ಕಳು ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.

ಪಟ್ಟಣದ ಸೊಪ್ಪಿನ ಕಾಳಮ್ಮ ಬಡಾವಣೆ ರಸ್ತೆಯಲ್ಲಿ ಓಡಾಡುವ ಜನರಿಗೆ ಶನಿವಾರ ಮತ್ತು ಭಾನುವಾರ ಯ್ಹಾ.. ಹ್ಹೂ.. ಯ್ಹಾ.. ಹ್ಹೂ... ಸದ್ದು ಕಿವಿಗೆ ಅಪ್ಪಳಿಸುತ್ತದೆ. ಕುತೂಹಲ ತಡೆಯದೇ ಲಿಟಲ್‌ ಚಾಂಪ್ಸ್‌ ಶಾಲಾವರಣ ಇಣುಕಿದರೆ ಮಕ್ಕಳು ತನ್ಮಯತೆಯಿಂದ ಕರಾಟೆ ಕಲಿಯುವುದು ಕಾಣಿಸುತ್ತದೆ.

‌ಮುಂಡರಗಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಕರಾಟೆ ಮಾಸ್ಟರ್, ಮಾನ್ಯರಮಸಲವಾಡದ ಪುಂಡಿಕಾಳ ಮಲ್ಲಿಕಾರ್ಜುನ ಮಾರ್ಗದರ್ಶನದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರಾಟೆ ಕಲಿಯುತ್ತಿದ್ದಾರೆ.

ಹುಬ್ಬಳ್ಳಿ, ತುಮಕೂರು, ಲಕ್ಷ್ಮೇಶ್ವರ, ರೋಣದಲ್ಲಿ ಜರುಗಿದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ ಷಿಪ್‌ಗಳಲ್ಲಿ ಮಲ್ಲಿಗೆ ನಾಡಿನ ಈ ಚಿಣ್ಣರು ಗಮನಾರ್ಹ ಸಾಧನೆ ಮಾಡಿದ್ದಾರೆ. ‘ಕಟಾ’ ಮತ್ತು ‘ಕುಮಟೆ’ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿ ಏಳು ಚಿನ್ನ, ಎಂಟು ಬೆಳ್ಳಿ, ಐದು ಕಂಚಿನ ಪದಕ ಬಾಚಿಕೊಂಡಿದ್ದಾರೆ.

ಕೆ.ಮನ್ನತ್, ವಿ.ಆರ್.ಪೂಜಿತಾ, ಶಿವರಾಮಕೃಷ್ಣ, ಜಿ.ಪಿ.ಪ್ರಾಂಜಲಿ, ಮೊಹಮ್ಮದ್‌ ಸಾಬ್‌, ಎಚ್.ಪಿ.ಧನ್ಯಾ, ನವ್ಯಶ್ರೀ, ಜೆ.ಸೇತುರಾಮ್, ರುಶ್ಮಿತಾ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಭಿಷೇಕ್ ಮತ್ತು ರೋಚಕ್ ರಾಜ್ಯ ಮಟ್ಟದ ಸಾಧನೆ ಮಾಡಿದ್ದಾರೆ.

ಈ ತರಬೇತಿ ಶಾಲೆಯ ಪುಟ್ಟ ಬಾಲಕಿ, ಎರಡನೇ ತರಗತಿಯ ರುಶ್ಮಿತಾ ಕರಾಟೆ ಸಮವಸ್ತ್ರ ಧರಿಸಿ ನಿಂತರೆ ಆಕೆಯಲ್ಲಿ ವಯಸ್ಸಿಗೆ ಮೀರಿದ ಗಾಂಭೀರ್ಯ ಬರುತ್ತದೆ. ಯುದ್ಧದ ನಾಟ್ಯ ಭಂಗಿಯನ್ನು ಒಳಗೊಂಡಿರುವ ‘ಕಟಾ’ ವಿಭಾಗದಲ್ಲಿ ಈ ಬಾಲಕಿಗೆ ಸಾಟಿಯಿಲ್ಲ. ತುಮಕೂರು, ಹುಬ್ಬಳ್ಳಿಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರುಶ್ಮಿತಾ, 26 ಕೆ.ಜಿ. ವಿಭಾಗದಲ್ಲಿ ಎಂಟು ಜನರ ಜತೆ ಸೆಣಸಾಡಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಆ ಎರಡೂ ಸ್ಪರ್ಧೆಗಳಲ್ಲಿ ಆಕೆ ತನ್ನ ಪುಟ್ಟ ಕೈಗಳಿಂದ ಹಿಡಿದುಕೊಳ್ಳಲಾರದಷ್ಟು ಟ್ರೋಫಿಗಳನ್ನು ಗೆದ್ದಿದ್ದಾಳೆ.

ಎಂಟನೇ ತರಗತಿಗೆ ಆರು ಅಡಿ ಎತ್ತರ ಬೆಳೆದಿರುವ ಶಿವರಾಮಕೃಷ್ಣ ಸಣಕಲು ದೇಹ ಹೊಂದಿದ್ದರೂ ಎಂತಹ ಬಲಾಢ್ಯನನ್ನೂ ಹೊಡೆದು ಉರುಳಿಸುವ ಶಕ್ತಿ ಬೆಳೆಸಿಕೊಂಡಿದ್ದಾನೆ. ಕರಾಟೆಯ ‘ಕುಮಟೆ’ ವಿಭಾಗದಲ್ಲಿ ಪಳಗಿರುವ ಶಿವರಾಮಕೃಷ್ಣ ಹಳದಿ ಬೆಲ್ಟ್‌ ಅರ್ಹತೆಯಲ್ಲಿದ್ದರೂ ಬ್ಲೂ ಬೆಲ್ಟ್‌ನವರ ಜತೆ ಸೆಣಸಾಡಿ ಮೇಲುಗೈ ಸಾಧಿಸಿದ್ದಾರೆ. ಮತ್ತೊಬ್ಬ ಚುರುಕಿನ ಪಟು ಕೆ. ಮನ್ನತ್ ‘ಕಟಾ’ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಪ್ರವೇಶ ಪಡೆದಿದ್ದಾರೆ.

‘ಪ್ರತಿ ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಮತ್ತು ಸಂಜೆ ತರಬೇತಿ ನೀಡುತ್ತೇವೆ. ಬರುವ ದಿನಗಳಲ್ಲಿ ಹೂವಿನಹಡಗಲಿಯಲ್ಲೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ ಆಯೋಜಿಸುವ ಯೋಜನೆ ಇದೆ’ ಎಂದು ಕರಾಟೆ ಮಾಸ್ಟರ್ ಪಿ.ಮಲ್ಲಿಕಾರ್ಜುನ ತಿಳಿಸಿದರು.

‘ಕರಾಟೆ ಬರೀ ಆತ್ಮರಕ್ಷಣೆಯ ಕಲೆ ಅಲ್ಲ. ಒಬ್ಬ ವ್ಯಕ್ತಿ ಕರಾಟೆ ಕಲಿತಿದ್ದರೆ ಇಡೀ ಪರಿವಾರವನ್ನು ರಕ್ಷಣೆ ಮಾಡಬಹುದು.ಈ ಕಲೆಯು ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ, ಕೌಶಲಗಳನ್ನು ಕಲಿಸುತ್ತದೆ. ಆರೋಗ್ಯ, ಬುದ್ದಿಮತ್ತೆಯನ್ನು ಹೆಚ್ಚಿಸುತ್ತದೆ. ಕರಾಟೆ ಸಾಧಕರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಉತ್ತೇಜನ ನೀಡುತ್ತಿವೆ. ಈ ಅವಕಾಶಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT