ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು: ರೈತರ ಆದಾಯ ಹೆಚ್ಚಿಸಿದ ಚೆಂಡು ಹೂ ಕೃಷಿ

ಸಂಡೂರು ತಾಲ್ಲೂಕಿನ 2000 ಎಕರೆಯಲ್ಲಿ ಚೆಂಡು ಹೂ ಬೆಳೆ
Last Updated 16 ಸೆಪ್ಟೆಂಬರ್ 2021, 4:17 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ಚೋರನೂರು ಹೋಬಳಿ ಭಾಗದಲ್ಲಿ ಮುಂಗಾರಿನಲ್ಲಿ ಜೋಳ, ಮೆಕ್ಕೆಜೋಳ, ತೊಗರಿ ಮುಂತಾದ ಬೆಳೆಗಳ ಜೊತೆಗೆ ಬೆಳೆದ ಚೆಂಡು ಹೂ ರೈತರ ಆದಾಯವನ್ನು ಹೆಚ್ಚಿಸಿದೆ.

ತಾಲ್ಲೂಕಿನ ಬಂಡ್ರಿ, ಅಂಕಮನಾಳು, ಚೋರುನೂರು, ದೊಡ್ಡ ಉಪ್ಪಾರಳ್ಳಿ, ತಿಪ್ಪನಮರಡಿ, ತುಂಬರಗುದ್ದಿ, ಜಿಗೇನಹಳ್ಳಿ, ಬೊಮ್ಮಾಘಟ್ಟ ಮುಂತಾದ ಗ್ರಾಮಗಳಲ್ಲಿ ಸುಮಾರು 2000 ಎಕರೆಯಲ್ಲಿ ಚೆಂಡು ಹೂವನ್ನು ಬೆಳೆಯಲಾಗಿದೆ. ಹಿಂದಿನ ವರ್ಷ ಸುಮಾರು 900 ಎಕರೆಯಲ್ಲಿ ಬೆಳೆಯಲಾಗಿತ್ತು. ಈ ವರ್ಷ ಚೆಂಡು ಹೂವಿನ ಕೃಷಿ ಕ್ಷೇತ್ರ ಹೆಚ್ಚಳವಾಗಿದೆ ಎನ್ನುತ್ತಾರೆ ರೈತರಿಗೆ ಚೆಂಡು ಹೂವಿನ ಕೃಷಿಯನ್ನು ಪರಿಚಯಿಸಿ, ಅದಕ್ಕೆ ಮಾರುಕಟ್ಟೆಯನ್ನು ಒದಗಿಸುತ್ತಿರುವ ಎವಿಟಿ ಕಂಪನಿಯ ಸೂಪರ್‌ವೈಸರ್‌ ಹುಲಿಕುಂಟೆಪ್ಪ.

ಚೆಂಡು ಹೂ ಕೃಷಿಗೆ ನೀರಾವರಿ ವ್ಯವಸ್ಥೆ ಅಗತ್ಯವಿದೆ. ಏಪ್ರಿಲ್, ಮೇ ತಿಂಗಳಲ್ಲಿ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಲಾಗುತ್ತದೆ. ನಾಟಿ ಮಾಡಿದ ಎರಡು ತಿಂಗಳಿಗೆ ಹೂ ಬಿಡಲು ಆರಂಭವಾಗುತ್ತದೆ. ಹೂ ಬಿಡಲು ಆರಂಭವಾದ ಮೇಲೆ ಪ್ರತಿ ವಾರ ಹೂವನ್ನು ಕಟಾವು ಮಾಡಲಾಗುತ್ತದೆ. ಒಂದು ಎಕರೆಯಲ್ಲಿ ಪ್ರತಿವಾರ 8-10 ಕ್ವಿಂಟಾಲ್ ಹೂ ಕಟಾವು ಮಾಡಬಹುದು. ಎರಡು ತಿಂಗಳು ಹೂ ಸಿಗುತ್ತದೆ. ಕಂಪನಿ ವತಿಯಿಂದ ರೈತರಿಗೆ ಬೀಜ, ಗೊಬ್ಬರ, ಔಷಧ ನೀಡಿ, ಹೂ ಖರೀದಿ
ಸಮಯದಲ್ಲಿ ಇವುಗಳ ಖರ್ಚನ್ನು ಮುರಿದುಕೊಂಡು ರೈತರಿಗೆ ಉಳಿದ ಹಣವನ್ನು ನೀಡಲಾಗುತ್ತದೆ. ಚೆನ್ನಾಗಿ ಬೆಳೆದರೆ ಎಕರೆಗೆ ₹ 75 ಸಾವಿರದವರೆಗೆ ಲಾಭ ಗಳಿಸಬಹುದು ಎಂದು ತಿಳಿಸಿದರು.

‘ನಾನು ಒಂದು ಎಕರೆ ಜಮೀನಿನಲ್ಲಿ ಈ ವರ್ಷ ಹೊಸದಾಗಿ ಚೆಂಡು ಹೂ ಬೆಳೆದಿದ್ದೇನೆ. ₹7ಕ್ಕೆ ಕೆಜಿಯಂತೆ ಕಂಪನಿಯವರು ಕೊಂಡುಕೊಳ್ಳುತ್ತಾರೆ. ಈಗಾಗಲೆ 5 ಬಾರಿ ಹೂ ಕಟಾವು ಮಾಡಿ ಮಾರಾಟ ಮಾಡಿದ್ದೇವೆ. ಒಮ್ಮೆಗೆ ಸುಮಾರು 800 ರಿಂದ 1000 ಕೆಜಿ ಹೂ ಸಿಗುತ್ತದೆ. ಹೂ ಕಟಾವು ಸಂದರ್ಭದಲ್ಲಿ ಹಲವರಿಗೆ ಕೆಲಸವೂ ಸಿಗುತ್ತಿದೆ. ಕೊನೆಯಲ್ಲಿ ಇದರಿಂದ ಲಾಭ ಎಷ್ಟೆಂಬುದು ತಿಳಿಯಲಿದೆ ಎಂದು ಚೆಂಡು ಹೂ ಬೆಳೆದಿರುವ ಬಂಡ್ರಿ ಗ್ರಾಮದ ರೈತರಾದ ಸಿದ್ದಪ್ಪ ಹಾಗೂ ಮುಕ್ಕಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಆಹಾರ ಬೆಳೆಗಳು, ಬಾಳೆ, ಮಾವು ಬೆಳೆಗಳ ಜೊತೆಗೆ ಇತ್ತೀಚೆಗೆ ಅಡಕೆ, ಪಪ್ಪಾಯ, ಅಂಜೂರ, ಚೆಂಡು ಹೂ ಮುಂತಾದ ಬೆಳೆಗಳ ಕೃಷಿಯ ಕಡೆಗೂ ರೈತರು ಗಮನ ಹರಿಸಿದ್ದಾರೆ. ಇದು ರೈತರ ಆದಾಯವನ್ನು ಹೆಚ್ಚಿಸಲು ಅನುಕೂಲವಾಗಿದೆ. ಒಂದೆರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿ ರುವುದರಿಂದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ. ಬೆಳೆಗೆ ಉತ್ತಮ ಬೆಲೆ ಸಿಕ್ಕರೆ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಂತಾಗುತ್ತದೆ ಎನ್ನುತ್ತಾರೆ ಈ ಭಾಗದ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT