ಸಿರುಗುಪ್ಪ: ಮುತ್ತುಗದ ಎಲೆ ಬದುಕು ತೋರಿಸಿತು!

ಬುಧವಾರ, ಏಪ್ರಿಲ್ 24, 2019
29 °C
ಊಟದ ಹಾಳೆಯ ಉದ್ಯಮ

ಸಿರುಗುಪ್ಪ: ಮುತ್ತುಗದ ಎಲೆ ಬದುಕು ತೋರಿಸಿತು!

Published:
Updated:
Prajavani

ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ಅರಣ್ಯದಲ್ಲಿ ಸಿಗುವ ಮುತ್ತುಗದ ಎಲೆಯಿಂದ ಊಟದ ಹಾಳೆಗಳನ್ನು ತಯಾರಿಸುವ ಮೂಲಕ, ತಾಲ್ಲೂಕಿನ ಇಬ್ರಾಂಪುರ ಗ್ರಾಮದ ಕೃಷಿ ಕುಟುಂಬವೊಂದು ಸ್ವಾವಲಂಬನೆ ಸಾಧಿಸಿದೆ.

ಹತ್ತು ವರ್ಷದ ಹಿಂದೆ ಗ್ರಾಮದ ಎಸ್‌.ಮಂಜುನಾಥಗೌಡರು ಮದುವೆಯೊಂದಕ್ಕೆ ಹೋಗಿದ್ದಾಗ ಊಟದ ಸಮಯದಲ್ಲಿ ಬಳಸಿದ್ದ ಎಲೆಯೇ ಅವರಿಗೆ ಪ್ರೇರಣೆಯಾಗಿದ್ದು ವಿಶೇಷ. ಈಗ ಅವರ ಕಿರು ಉದ್ಯಮಕ್ಕೆ ದಶಕದ ಸಂಭ್ರಮ.

‘ಆಂಧ್ರ ಮತ್ತು ಒರಿಸ್ಸಾ ರಾಜ್ಯ ಗಡಿಭಾಗದ ಅರಣ್ಯಗಳಲ್ಲಿ ದೊರಕುವ ಮುತ್ತುಗದ ಎಲೆಗಳನ್ನು ಖರೀದಿಸಿ ಮನೆಯಲ್ಲಿಯೇ ಚಿಕ್ಕದಾಗಿ ಊಟದ ಹಾಳೆ ತಯಾರಿಸಲಾರಂಭಿದ ಅವರು, ಅದಕ್ಕಾಗಿ, ಪ್ರಧಾನ್‌ ಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ, ಸ್ಥಳೀಯ ಸಿಂಡಿಕೇಟ್ ಬ್ಯಾಂಕಿನಲ್ಲಿ ₹10 ಲಕ್ಷ ನೆರವು ಪಡೆದರು.

ಬೆಂಗಳೂರು, ಹೈದ್ರಾಬಾದ್ ನಗರದಿಂದ ಊಟದ ಹಾಳೆ ತಯಾರಿಸುವ ಯಂತ್ರಗಳನ್ನು ತಂದು ಮನೆಯಲ್ಲಿಯೇ ಘಟಕ ಸ್ಥಾಪಿಸಿದರು. ಆಂಧ್ರದಿಂದ ಕಚ್ಚಾ ಮುತ್ತುಗದ ಎಲೆ ಮತ್ತು 4 ರಿಂದ 5 ಟನ್ ಪೇಪರ್‌ ಅನ್ನು ಅವರು ಖರೀದಿಸುತ್ತಾರೆ. ಉದ್ಯಮದಲ್ಲಿ ಅವರ ಪತ್ನಿ ನೀರಜಾ ಸಹಕರಿಸುತ್ತಿದ್ದಾರೆ.

ಸದ್ಯ ಅವರು, ಆರು ಮಂದಿ ಕೆಲಸದವರೊಂದಿಗೆ ನಿತ್ಯ 2 ಸಾವಿರದಿಂದ 4 ಸಾವಿರವರೆಗೆ ಊಟದ ಹಾಳೆಗಳನ್ನು ಸಿದ್ಧಪಡಿಸಿ, ತಲಾ 25, 20 ಮತ್ತು 15 ರಂತೆ ಕಂತೆಗಳನ್ನು ಮಾಡಿ ಗ್ರಾಹಕರಿಗೆ ಪೂರೈಸುತ್ತಿದ್ದಾರೆ.

ಒಂದು ಕಂತೆಗೆ ₹55 ರಿಂದ ₹60 ದರ ನಿಗದಿ ಮಾಡಿದ್ದು, ಅವರ ಮನೆ ಬಾಗಿಲಿಗೇ ವರ್ತಕರು ಬಂದು ಖರೀದಿಸುತ್ತಾರೆ. ಸಿರುಗುಪ್ಪ ಸುತ್ತಮುತ್ತಲಿನ ಗ್ರಾಮಗಳಿಗೆ ಅವರೇ ತೆರಳಿ ಅಂಗಡಿಗಳಿಗೆ ನೇರವಾಗಿ ಕಂತೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಊಟ ಹಾಳೆ ಮಾರಾಟದಿಂದ ಬಂದ ಆದಾಯದಲ್ಲಿ, ನಾಲ್ಕು ವರ್ಷದೊಳಗೆ ಅವರು ಸಾಲ ಮರುಪಾವತಿ ಮಾಡಿ, ಮತ್ತೆ ಅದೇ ಬ್ಯಾಂಕಿನಲ್ಲಿ ₹5 ಲಕ್ಷ ಪಡೆದಿರುವುದು ವಿಶೇಷ. ‘ಈ ಯೋಜನೆಯಲ್ಲಿ ಪಡೆದ ಆರ್ಥಿಕ ನೆರವಿನಲ್ಲಿ ₹2.60 ಲಕ್ಷ ಸಹಾಯಧನ ದೊರಕಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಉದ್ಯಮದಲ್ಲಿಯೇ ಲಾಭಗಳಿಸಿ ಮನೆ ಕಟ್ಟಿಕೊಂಡಿದ್ದೇನೆ, ಮಗಳ ಮದುವೆ ಮಾಡಿರುವೆ, ಮಗನ ವಿದ್ಯಾಭ್ಯಾಸ ಮಾಡಿಸಿ ಆತನಿಗೆ ಸ್ವಯಂ ಉದ್ಯೋಗಕ್ಕಾಗಿ ಅಂಗಡಿಯೊಂದನ್ನು ಸ್ಥಾಪಿಸಿಕೊಟ್ಟು ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿರುವೆ, ಪ್ರತಿಯೊಂದು ಹಳ್ಳಿಯಲ್ಲಿ ಇಂಥ ಉದ್ಯಮ ಸ್ಥಾಪಿಸಿಕೊಳ್ಳಲು ಆಸಕ್ತಿಯುಳ್ಳವರಿಗೆ ಮಾರ್ಗದರ್ಶನ ಮಾಡಲೂ ಸಿದ್ಧ’ ಎಂದರು.

ಸಂಪರ್ಕಕ್ಕೆ: 9945798848.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !