ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್ವೆಂಟ್ ಮೀರಿಸುವ ಶಿಶು ಕೇಂದ್ರ

ಕೊಯಿಲಾರಗಟ್ಟಿ ಅಂಗನವಾಡಿ ತಾಲ್ಲೂಕಿಗೇ ಮಾದರಿ
Last Updated 9 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಇನ್ನೂ ಸ್ಪಷ್ಟವಾಗಿ ಮಾತು ಬಾರದ ಈ ಮಕ್ಕಳು ಗೆರೆಗಳ ಮೇಲೆ ಕಪ್ಪೆಚಿಪ್ಪು, ಶಂಖ, ಹುಣಸೆಬೀಜ ಜೋಡಿಸಿ ಅಕ್ಷರ ಜ್ಞಾನ ಪಡೆಯುತ್ತಾರೆ. ಖಾಲಿ ಬೆಂಕಿ ಪೊಟ್ಟಣ ಜೋಡಿಸಿ ಪಿರಮಿಡ್ ರಚಿಸುತ್ತಾರೆ. ತುಂಡು ಬಟ್ಟೆಗಳ ಬಣ್ಣ ಗುರುತಿಸುತ್ತಾರೆ. ನಾನಾ ವಸ್ತುಗಳನ್ನು ಬಳಸಿ ಸ್ಪರ್ಶಜ್ಞಾನ, ವಸ್ತುವಿನ ಭಾರ ಅರಿಯುತ್ತಾರೆ.

ಇದು ತಾಲ್ಲೂಕಿನ ಕೊಯಿಲಾರಗಟ್ಟಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿರುವ ಕಲಿಕಾ ವಾತಾವರಣ. ಕಾರ್ಯಕರ್ತೆ ಹುಣ್ಸಿಕಾಯಿ ಲೀಲಾವತಿ, ಸಹಾಯಕಿ ಟಿ.ಸುಮಂಗಲಮ್ಮನವರ ಇಚ್ಛಾಶಕ್ತಿಯಿಂದ ಕಾನ್ವೆಂಟ್ ಗಳಿಗೆ ಸಡ್ಡು ಹೊಡೆಯುವಂತೆ ಅಂಗನವಾಡಿ ಕೇಂದ್ರ ರೂಪುಗೊಂಡಿದೆ.

ಅಂಗನವಾಡಿ ಕೇಂದ್ರಗಳ ಬಗ್ಗೆ ಎಲ್ಲೆಡೆ ಮೂಗು ಮುರಿಯುವ ವಾತಾವಾರಣವಿದೆ. ಕೊಯಿಲಾರಗಟ್ಟಿ ಕೇಂದ್ರ ಇದಕ್ಕೆ ಅಪವಾದವೆಂಬಂತಿದೆ. ಮೂರರಿಂದ ಆರು ವರ್ಷದೊಳಗಿನ 38 ಮಕ್ಕಳು ಕೇಂದ್ರಕ್ಕೆ ದಾಖಲಾಗಿದ್ದಾರೆ. ಗ್ರಾಮದ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಕಾನ್ವೆಂಟ್ ಹಾದಿ ತುಳಿಯದೇ ಅಂಗನವಾಡಿ ಕೇಂದ್ರಕ್ಕೆ ಬರುತ್ತಿರುವುದು ವಿಶೇಷ.

18 ಮಹಿಳೆಯರು ಮಾತೃಪೂರ್ಣ ಫಲಾನುಭವಿಗಳಿದ್ದಾರೆ. ಎಂಟು ಮಹಿಳೆಯರು ಮಾತೃವಂದನಾ ಸೌಲಭ್ಯ ಪಡೆದಿದ್ದಾರೆ. ಕೇಂದ್ರದ ಎಲ್ಲ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ತಲುಪಿಸುವ ಮೂಲಕ ಕಾರ್ಯಕರ್ತೆ ಸ್ಥಳೀಯರ ವಿಶ್ವಾಸ ಗಳಿಸಿದ್ದಾರೆ.
ಮಕ್ಕಳನ್ನು ಆಕರ್ಷಿಸುವ ಆಟಿಕೆಗಳು, ಚಟುವಟಿಕೆ ಆಧಾರಿತ ಪರಿಕರಗಳನ್ನು ಕಾರ್ಯಕರ್ತೆ ಮತ್ತು ಸಹಾಯಕಿ ಸ್ವಂತ ಖರ್ಚಿನಲ್ಲಿ ತಯಾರಿಸಿದ್ದಾರೆ. ಕೇಂದ್ರದೊಳಗೆ ಮಕ್ಕಳು ಸ್ವಚ್ಛಂದವಾಗಿ ಆಟವಾಡಲು ಗೊಂಬೆ ಮನೆ ರೂಪಿಸಿದ್ದಾರೆ.

ಬಟ್ಟೆ ಅಂಗಡಿ, ಕಿರಾಣಿ ಅಂಗಡಿಯ ಮಾದರಿಗಳನ್ನು ತೆರೆದಿದ್ದಾರೆ. ವಿವಿಧ ದವಸ, ಧಾನ್ಯ, ಕೃಷಿ ಪರಿಕರಗಳನ್ನು ಪರಿಚಯ ಮಾಡಿಕೊಡಲಾಗುತ್ತಿದೆ. ಕೇಂದ್ರದ ಗೋಡೆಗಳ ಮೇಲೆ ದಿಕ್ಕುಗಳು, ಹಣ್ಣು, ಹೂವು, ತರಕಾರಿಗಳ ಚಿತ್ರ ಬಿಡಿಸಲಾಗಿದೆ. ಐತಿಹಾಸಿಕ ಸ್ಥಳಗಳು, ವಾಹನಗಳು, ಸಾಧಕರು, ಚಲಾವಣೆಯಲ್ಲಿರುವ ನೋಟು, ನಾಣ್ಯಗಳನ್ನು ಚಾರ್ಟ್ ಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಈ ರೀತಿಯ ಪೂರಕ ಕಲಿಕಾ ವಾತಾವರಣದಿಂದ ಕೂಡಿರುವ ಅಂಗನವಾಡಿ ಕೇಂದ್ರ ತಾಲ್ಲೂಕಿಗೆ ಮಾದರಿಯಾಗಿದೆ.

ಕವಯತ್ರಿಯೂ ಆಗಿರುವ ಕಾರ್ಯಕರ್ತೆ ಲೀಲಾವತಿ ಅಂಗನವಾಡಿ ಕೇಂದ್ರದ ಮೇಲೆಯೂ ತಮ್ಮ ಸಾಹಿತ್ಯದ ಪ್ರಭಾವ ಬೀರಿದ್ದಾರೆ. ಕೇಂದ್ರದಲ್ಲಿ ಮೇರು ಸಾಹಿತಿ, ಕವಿಗಳ ಪರಿಚಯ, ನಾಡು ನುಡಿಯ ವೈಶಿಷ್ಟ್ಯವನ್ನು ಬಿಂಬಿಸಿದ್ದಾರೆ. ಲೀಲಾವತಿ ಅವರ ಸೇವೆಯನ್ನು ಗುರುತಿಸಿ ಹೂವಿನಹಡಗಲಿ ಗವಿಮಠ, ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸನ್ಮಾನಿಸಿ, ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT