ಗುರುವಾರ , ಜನವರಿ 21, 2021
16 °C
ಕಾಟಾಚಾರದ ಬದಲು ಅರ್ಥಪೂರ್ಣವಾಗಿರಲಿ

ಹಂಪಿ ಉತ್ಸವಕ್ಕೆ ನವೆಂಬರ್‌ ತಿಂಗಳೇ ಸೂಕ್ತ: ಬಹುತೇಕ ಸಾರ್ವಜನಿಕರ ಅಭಿಪ್ರಾಯ

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ’ಹಂಪಿ ಉತ್ಸವಕ್ಕೆ ನವೆಂಬರ್‌ ತಿಂಗಳೇ ಸೂಕ್ತ. ಯಾವ್ಯಾವುದೋ ನೆಪವೊಡ್ಡಿ ಉತ್ಸವವನ್ನು ಮುಂದೂಡಿ, ಕಾಟಾಚಾರಕ್ಕೆ ಆಚರಿಸುವುದು ಸರಿಯಾದ ಕ್ರಮವಲ್ಲ. ಪ್ರಭುತ್ವ ಅದರ ಮೂಲ ಆಶಯ ಅರ್ಥ ಮಾಡಿಕೊಳ್ಳಬೇಕು’.

ಎರಡು ದಿನಗಳ ಉತ್ಸವದಲ್ಲಿ ಪಾಲ್ಗೊಂಡವರು, ಬಹುತೇಕ ಸ್ಥಳೀಯರ ಅಭಿಪ್ರಾಯ ಇದೇ ಆಗಿದೆ. ಈ ಕುರಿತು ‘ಪ್ರಜಾವಾಣಿ’ ಕೆಲವರನ್ನು ನೇರವಾಗಿ ಮಾತನಾಡಿಸಿದಾಗ ಮೇಲಿನಂತೆ ತಮ್ಮ ಮನದಾಳದ ವಿಷಯಗಳನ್ನು ಹಂಚಿಕೊಂಡರು.

ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿನಿಂದಲೂ ಮಳೆಯ ಕೊರತೆ ಇದೆ. ಬೇಸಿಗೆ ಹಾಗೂ ಚಳಿಗಾಲವೇ ಇಲ್ಲಿ ಹೆಚ್ಚಿರುತ್ತದೆ. ಜೂನ್‌, ಜುಲೈನಿಂದ ಜನವರಿ ವರೆಗೆ ವಾತಾವರಣ ತಂಪಿರುತ್ತದೆ. ಇದನ್ನು ಮನಗಂಡೆ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರು ಉತ್ಸವವನ್ನು ಪ್ರತಿ ವರ್ಷ ನವೆಂಬರ್‌ 3ರಿಂದ 5ರ ವರೆಗೆ ಆಚರಿಸಲು ತೀರ್ಮಾನ ಕೈಗೊಂಡಿದ್ದರು. ಅದರಂತೆ ಅನೇಕ ವರ್ಷ ನಡೆದುಕೊಂಡು ಬಂತು..

ನಂತರದ ದಿನಗಳಲ್ಲಿ ಬರ, ಚುನಾವಣೆ ಸೇರಿದಂತೆ ಇತರೆ ಕಾರಣಗಳ ನೆಪವೊಡ್ಡಿ ಉತ್ಸವದ ದಿನಾಂಕವನ್ನು ಆಗಾಗ ಬದಲಿಸಲಾಯಿತು. ಅಷ್ಟೇ ಅಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಸಚಿವ ಜನಾರ್ದನ ರೆಡ್ಡಿ ಅವರು ಪ್ರಧಾನ ವೇದಿಕೆಯನ್ನೇ ಸ್ಥಳಾಂತರ ಮಾಡಿದ್ದರು. ನಂತರ ಕಾಂಗ್ರೆಸ್‌ ಸರ್ಕಾರವು ಎಂ.ಪಿ. ಪ್ರಕಾಶ್‌ ಅವರ ಆಶಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ನವೆಂಬರ್‌ನಲ್ಲಿ ಉತ್ಸವ ಆಚರಿಸಿತು. ಜತೆಗೆ ಎದುರು ಬಸವಣ್ಣ ಮಂಟಪದಲ್ಲಿ ಪ್ರಧಾನ ಕಾರ್ಯಕ್ರಮ ಸಂಘಟಿಸಿತು. ಈಗ ಅದೇ ರೀತಿ ಮುಂದುವರಿದಿದೆ. ಆದರೆ, ನವೆಂಬರ್‌ ಬದಲಿಗೆ ಮಾರ್ಚ್‌ನಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ.

’ನವೆಂಬರ್‌ನಲ್ಲಿ ಬಳ್ಳಾರಿ ಲೋಕಸಭೆ ಉಪಚುನಾವಣೆ ನಡೆದದ್ದರಿಂದ ಉತ್ಸವವನ್ನು ಮಾರ್ಚ್‌ನಲ್ಲಿ ಆಚರಿಸಬೇಕಾಗಿ ಬಂದಿದೆ’ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಸಬೂಬು ಕೊಟ್ಟು ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ನ. 3ರಂದು ಫಲಿತಾಂಶ ಘೋಷಣೆಯಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿತ್ತು. ನವೆಂಬರ್‌ ಅಂತ್ಯದಲ್ಲೋ ಅಥವಾ ಡಿಸೆಂಬರ್‌ನಲ್ಲೋ ಕಾರ್ಯಕ್ರಮ ಸಂಘಟಿಸಬಹುದಿತ್ತು. ಅದರ ಬದಲು ಮೂರು ತಿಂಗಳ ನಂತರ ಬಿರು ಬಿಸಿಲಲ್ಲೂ, ಅದು ಕೂಡ ಕಾಟಾಚಾರಕ್ಕೆ ಆಯೋಜಿಸುವ ಜರೂರುತ್ತು ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

’ನವೆಂಬರ್‌ನಲ್ಲಿ ವಾತಾವರಣ ತಂಪಿರುತ್ತದೆ. ಆ ಸಂದರ್ಭದಲ್ಲಿ ಉತ್ಸವ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಾರೆ. ಇಂತಹ ಸುಡುವ ಬಿಸಿಲಿನಲ್ಲಿ ಜನ ಬರುವುದು ಕಷ್ಟ. ಮನೆಯಲ್ಲೇ ಕೂರಲಿಕ್ಕೆ ಆಗುತ್ತಿಲ್ಲ. ಇಂತಹದ್ದರಲ್ಲಿ ಹೊರಗೆ ಹೇಗೆ ಬರುತ್ತಾರೆ. ಅದಕ್ಕೆ ಮೊದಲ ದಿನದ ಕಾರ್ಯಕ್ರಮವೇ ಸಾಕ್ಷಿ. ಸಂಜೆ 6.30ರ ವರೆಗೆ ಯಾವ ವೇದಿಕೆಯ ಎದುರು ಜನ ಇರಲಿಲ್ಲ. ಕತ್ತಲಾದ ನಂತರವಷ್ಟೇ ಜನ ಬಂದಿದ್ದರು’ ಎಂದು ನೀಲಪ್ಪ ಬಳ್ಳಾರಿ ಹೇಳಿದರು.

‘ಹಿಂದಿನ ವರ್ಷ ಸಾಕಷ್ಟು ಜನ ಮಳಿಗೆಗಳಿಗೆ ಭೇಟಿ ಕೊಟ್ಟಿದ್ದರು. ಈ ವರ್ಷ ಅದು ಕಂಡು ಬಂದಿಲ್ಲ. ನಮಗೆ ಟೆಂಟ್‌ ಕೆಳಗೆ ಕೂರಲು ಆಗುತ್ತಿಲ್ಲ. ನವೆಂಬರ್‌ ಉತ್ಸವಕ್ಕೆ ಹೇಳಿಮಾಡಿಸಿದ ಸಮಯ. ಹಾಗಾಗಿ ಯಾವುದೇ ಕಾರಣಕ್ಕೂ ಅದನ್ನು ಬದಲಿಸಬಾರದು’ ಎಂದು ಮೀನುಗಾರಿಕೆಯ ಮತ್ತು ರೇಷ್ಮೆ ಇಲಾಖೆ ಜಂಟಿಯಾಗಿ ತೆರೆದಿರುವ ಮಳಿಗೆಯಲ್ಲಿದ್ದ ನಾಗಪ್ಪ, ತಿಪ್ಪೇಸ್ವಾಮಿ ತಮ್ಮ ಅನುಭವ ಹಂಚಿಕೊಂಡರು.

’ವಾಸ್ತವದಲ್ಲಿ ಈ ಸಲ  ಉತ್ಸವ ಆಯೋಜಿಸುವ ಯೋಚನೆಯನ್ನೇ ಸರ್ಕಾರ ಕೈಬಿಟ್ಟಿತ್ತು. ಸ್ಥಳೀಯರ ಹೋರಾಟ ಹಾಗೂ ಶೀಘ್ರದಲ್ಲೇ ಲೋಕಸಭೆಗೆ ಉಪಚುನಾವಣೆ ನಡೆಯಲಿದೆ. ಒಂದುವೇಳೆ ಉತ್ಸವ ಆಯೋಜಿಸದಿದ್ದರೆ ಮತದಾರರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಭಾವಿಸಿ, ಸಂಘಟಿಸಿದ್ದಾರೆ. ನಿಜವಾಗಿಯೂ ಜನಪ್ರತಿನಿಧಿಗಳಿಗೆ ಕಾಳಜಿ ಇದ್ದಿದ್ದರೆ ಬೇಸಿಗೆಯಲ್ಲಿ ಯಾವುದೇ ರೀತಿಯ ಸೂಕ್ತ ಸಿದ್ಧತೆಗಳಿಲ್ಲದೆ ಮಾಡುತ್ತಿರಲಿಲ್ಲ’ ಎಂದು ಕಲಾವಿದ ಮಾರುತಿ ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.