ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44 ಸಾವಿರ ಅರ್ಜಿ; ಇಬ್ಬರು ರೈತರಿಗೆ ‘ಸಮ್ಮಾನ್‌’

Last Updated 11 ಮಾರ್ಚ್ 2019, 19:47 IST
ಅಕ್ಷರ ಗಾತ್ರ

ಹೊಸಪೇಟೆ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಸೌಲಭ್ಯ ಪಡೆಯಲು ಬಳ್ಳಾರಿ ಜಿಲ್ಲೆಯಲ್ಲಿ 44 ಸಾವಿರಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಕೇವಲ ಇಬ್ಬರು ರೈತರಿಗೆ ನಿಧಿ ಸಿಕ್ಕಿದೆ!

ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ಪ್ರತಿ ರೈತರ ಖಾತೆಗೆ ನೇರವಾಗಿ ₹2 ಸಾವಿರ ಜಮೆ ಮಾಡಲಾಗುತ್ತದೆ. ನೀರಾವರಿ ಹಾಗೂ ಮಳೆಯಾಶ್ರಿತ ಕೃಷಿ ಮಾಡುವ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಜಿಲ್ಲೆಯಲ್ಲಿ 1.87 ಲಕ್ಷ ಸಣ್ಣ ರೈತರಿದ್ದಾರೆ. ಆದರೆ, ಯೋಜನೆ ಜಾರಿಗೆ ಬಂದ ನಂತರದಿಂದ ಇದುವರೆಗೆ ಜಿಲ್ಲೆಯಲ್ಲಿ 44,728 ರೈತರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 28,396 ರೈತರ ದಾಖಲೆಗಳನ್ನು ತಂತ್ರಾಂಶಕ್ಕೆ ಅಳವಡಿಸಿ, ಸ್ವೀಕೃತಿ ಪತ್ರ ಕೊಡಲಾಗಿದೆ. ಅದರಲ್ಲಿ ಇಬ್ಬರು ರೈತರ ಖಾತೆಗಷ್ಟೇ ಹಣ ಜಮೆಯಾಗಿದೆ.

‘ಯೋಜನೆಯ ಕುರಿತು ಹೆಚ್ಚಿನ ರೈತರಿಗೆ ಈಗೀಗ ಮಾಹಿತಿ ಗೊತ್ತಾಗುತ್ತಿದೆ. ದಿನೇ ದಿನೇ ಹೆಚ್ಚೆಚ್ಚೂ ಅರ್ಜಿಗಳು ಬರುತ್ತಿವೆ. ಇತ್ತೀಚೆಗಷ್ಟೇ ಯೋಜನೆ ಜಾರಿಗೆ ಬಂದಿರುವುದರಿಂದ ಇಲ್ಲಿಯವರೆಗೆ 44 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ದಿನ ಕಳೆದಂತೆ ಈ ಸಂಖ್ಯೆ ಹೆಚ್ಚಾಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜೆ. ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರು ಫಾರಂ ‘ಡಿ’ಯಲ್ಲಿ ದೃಢೀಕರಣ ಕೊಡುವುದು ಕಡ್ಡಾಯ. ಎಲ್ಲ ದಾಖಲೆಗಳು ಸರಿಯಾಗಿ ಇದ್ದರಷ್ಟೇ ತಂತ್ರಾಂಶ ಸ್ವೀಕರಿಸುತ್ತದೆ. ದಾಖಲೆಗಳಲ್ಲಿ ವಿವರ ಸರಿಯಾಗಿರದಿದ್ದಲ್ಲಿ ಸ್ವೀಕರಿಸುವುದಿಲ್ಲ. ಹಂತ ಹಂತವಾಗಿ ತಂತ್ರಾಂಶಕ್ಕೆ ರೈತರ ಮಾಹಿತಿ ಅಪ್‌ಲೋಡ್‌ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಎರಡು ವಾರಗಳ ಹಿಂದೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಇಬ್ಬರು ರೈತರಿಗೆ ನಿಧಿ ನೀಡಲಾಗಿದೆ. ಎಲ್ಲ ರೈತರ ದಾಖಲೆಗಳನ್ನು ಸಂಗ್ರಹಿಸಿ, ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಿದ ನಂತರ ನೇರವಾಗಿ ಅವರ ಖಾತೆಗೆ ಹಣ ಬಂದು ಜಮೆಯಾಗಲಿದೆ. ಈಗಷ್ಟೇ ಆರಂಭವಾಗಿರುವುದರಿಂದ ರೈತರು ಚಿಂತೆ ಪಡಬೇಕಿಲ್ಲ. ಎಲ್ಲ ಅರ್ಹ ರೈತರಿಗೆ ಯೋಜನೆಯ ಲಾಭ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT