ಸೋಮವಾರ, ಜೂನ್ 27, 2022
21 °C

ಹೊಸಪೇಟೆ: ಬೆಳಿಗ್ಗೆ ಜನಜಾತ್ರೆ, ಮಧ್ಯಾಹ್ನ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಐದು ದಿನಗಳ ಸಂಪೂರ್ಣ ಲಾಕ್‌ಡೌನ್‌ನಿಂದ ಸೋಮವಾರ ಸಡಿಲಿಕೆ ನೀಡಿದ್ದರಿಂದ ಜನ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಸೋಮವಾರ, ಮಂಗಳವಾರ ಬೆಳಿಗ್ಗೆ ಆರರಿಂದ ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಜಿಲ್ಲಾಡಳಿತವು ಕಾಲಾವಕಾಶ ನೀಡಿದೆ. ಹಿಂದಿನ ದಿನವೇ ಸಡಿಲಿಕೆಯ ವಿಷಯ ಗೊತ್ತಾಗಿದ್ದರಿಂದ ಸಾರ್ವಜನಿಕರು ಸೋಮವಾರ ಬೆಳ್ಳಂಬೆಳಿಗ್ಗೆ ರಸ್ತೆಗೆ ಇಳಿದಿದ್ದರು.

ನಗರದ ತಾಲ್ಲೂಕು ಕ್ರೀಡಾಂಗಣ, ಟಿ.ಬಿ. ಡ್ಯಾಂ ರಸ್ತೆ, ದೀಪಾಯನ ಶಾಲೆ ಮೈದಾನ, ಬಳ್ಳಾರಿ ರಸ್ತೆ, ಹಂಪಿ ರಸ್ತೆಯ ತಾತ್ಕಾಲಿಕ ಮಾರುಕಟ್ಟೆಗಳಿಗೆ ದಾಂಗುಡಿ ಇಟ್ಟ ಜನ ಹಣ್ಣು, ತರಕಾರಿ ಖರೀದಿಸಿದರು. ನಗರದ ಸೂಪರ್‌ ಮಾರ್ಕೆಟ್‌ ಸೇರಿದಂತೆ ಇತರೆ ದಿನಸಿ ಅಂಗಡಿಗಳ ಎದುರು ಉದ್ದನೆಯ ಸಾಲು ಕಂಡು ಬಂತು. ಪೊಲೀಸರು ಎಲ್ಲೆಡೆ ಗಸ್ತು ತಿರುಗಿ, ಜನ ಗುಂಪುಗೂಡದಂತೆ ನೋಡಿಕೊಂಡರು. ಆದರೆ, ಅವರು ಅಲ್ಲಿಂದ ನಿರ್ಗಮಿಸುತ್ತಿದ್ದಂತೆ ಗುಂಪು ಗುಂಪಾಗಿ ನಿಂತು ವಸ್ತುಗಳನ್ನು ಖರೀದಿಸಿದರು.  ಅಂತರ ಮರೀಚಿಕೆಯಾಗಿತ್ತು. ಆದರೆ, ಬಹುತೇಕರು ಮಾಸ್ಕ್‌ ಧರಿಸಿಕೊಂಡು ಓಡಾಡುತ್ತಿದ್ದರು.

ಅಗತ್ಯ ವಸ್ತು ಖರೀದಿಗೆ ಕೊಟ್ಟ ಕಾಲಾವಕಾಶವನ್ನು ಕೆಲವರು ಬಂಡವಾಳ ಮಾಡಿಕೊಂಡು, ಸ್ನೇಹಿತರನ್ನು ಭೇಟಿಯಾದರು. ಅಲ್ಲಲ್ಲಿ ರಸ್ತೆಬದಿಯಲ್ಲಿ ನಿಂತು ಮಾತನಾಡುತ್ತ ಕಾಲ ಕಳೆದರು. ಮತ್ತೆ ಕೆಲವರು ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗಿ ಬಂದರು.

ಮಧ್ಯಾಹ್ನ 12 ಗಂಟೆಗೆ ಕೆಲವೇ ನಿಮಿಷಗಳು ಉಳಿಯುತ್ತಿದ್ದಂತೆ ಸಾರ್ವಜನಿಕರು ಮಾರುಕಟ್ಟೆ, ದಿನಸಿ ಮಳಿಗೆಗಳಿಂದ ಮನೆಗಳತ್ತ ಮುಖ ಮಾಡಿದರು. ಅಲ್ಲಲ್ಲಿ ರಸ್ತೆಬದಿ ನಿಂತಿದ್ದವರನ್ನು ಪೊಲೀಸರು ತಾಕೀತು ಮಾಡಿ ಕಳುಹಿಸಿದರು. ಬಳಿಕ ಎಂದಿನಂತೆ ನಗರದಲ್ಲಿ ಸಾರ್ವಜನಿಕ ಸಂಚಾರ ಸಂಪೂರ್ಣ ನಿಂತು ಹೋಯಿತು. ಈ ಹಿಂದಿನಂತೆ ನಗರ ಸಂಪೂರ್ಣ ಮೌನಕ್ಕೆ ಜಾರಿತು.

ಐದು ದಿನಗಳ ನಂತರ ಬ್ಯಾಂಕುಗಳು ಬಾಗಿಲು ತೆರೆದಿದ್ದರಿಂದ ಅಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂತು. ಪಿಂಚಣಿದಾರರು, ರೈತರು ಸಾಲಿನಲ್ಲಿ ನಿಂತು ಹಣ ಬಿಡಿಸಿಕೊಂಡರು. ತಿಂಗಳ ಆರಂಭದಲ್ಲೇ ಬ್ಯಾಂಕುಗಳನ್ನು ಬಂದ್‌ ಮಾಡಿದ್ದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು