ಶುಕ್ರವಾರ, ಆಗಸ್ಟ್ 23, 2019
21 °C
ಫೇಸ್‌ಬುಕ್‌ನಲ್ಲಿ ಭಾವುಕ ಬರಹ

ರಾಜಕೀಯ ಬದುಕಿನ ಬೆಳಕು ತೋರಿದ ತಾಯಿಯ ಮಡಿಲು: ರೆಡ್ಡಿ

Published:
Updated:

ಬಳ್ಳಾರಿ: ‘ನನಗೆ ಜನ್ಮಕೊಟ್ಟ ತಾಯಿ ರುಕ್ಮಿಣಮ್ಮ ಚೆಂಗಾರೆಡ್ಡಿ ಒಂದು ಕಡೆಯಾದರೆ ಮತ್ತೊಂದು ಕಡೆ ನನ್ನ ರಾಜಕೀಯ ಬದುಕಿನ ಬೆಳಕು ತೋರಿದ ಮತ್ತು ಪ್ರೀತಿ ವಿಶ್ವಾಸದ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದ ಮತ್ತೊಬ್ಬ ತಾಯಿ ಶ್ರೀಮತಿ ಸುಷ್ಮಾ ಸ್ವರಾಜ್’ ಎಂದು ಜಿ.ಜನಾರ್ದನರೆಡ್ಡಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಬಳ್ಳಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಹದಿನೆಂಟು ದಿನದಲ್ಲಿ ಕನ್ನಡ ಕಲಿತು, ನಮ್ಮ ಕುಟುಂಬವಲ್ಲದೆ ಇಡೀ ವಿಶ್ವದ ಗಮನ ಸೆಳೆದ ಅಪ್ರತಿಮ ಮೇಧಾವಿ ಅವರು. ಸತತ ಹದಿಮೂರು ವರ್ಷಗಳ ಕಾಲ ಕೊಟ್ಟ ಮಾತಿನಂತೆ ಬಳ್ಳಾರಿಗೆ ಬಂದು, ನಾವು ನಡೆಸುವ ಐತಿಹಾಸಿಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡಿದ್ದು ಪೂರ್ವಜನ್ಮದ ಪುಣ್ಯವೆಂದೇ ಭಾವಿಸುತ್ತೇನೆ’ ಎಂದಿದ್ದಾರೆ.

‘1999 ರ ಲೋಕಸಭೆ ಚುನಾವಣೆಯಲ್ಲಿ ಸೋತ ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ತೆರಳಿದಾಗ ಅವರ ಸೋಲಿನ ದುಃಖವನ್ನು ಭರಿಸಲಾಗದೆ ನಾನು ಮತ್ತು ನನ್ನ ಸ್ನೇಹಿತ ಶ್ರೀರಾಮುಲು ಕಣ್ಣೀರಿಟ್ಟಾಗ ತಾಯಿಯಂತೆ ಸಮಾಧಾನಪಡಿಸಿದ ಅವರನ್ನು ನನ್ನ ಜೀವನದ ಕೊನೆ ಉಸಿರಿರುವವರೆಗೂ ಮರೆಯಲು ಸಾಧ್ಯವಿಲ್ಲ’ ಎಂದು ಸ್ಮರಿಸಿದ್ದಾರೆ.

‘ನನ್ನ ಮಗಳು ಬ್ರಹ್ಮಣಿ ಸುಷ್ಮಾ ಸ್ವರಾಜ್ ಅವರ ಬಗ್ಗೆ ಅತಿಯಾದ ಮಧುರ ಬಾಂಧವ್ಯವನ್ನು ಹೊಂದಿದ್ದರು. ಪ್ರತಿ ಬಾರಿ ಬಳ್ಳಾರಿಗೆ ಬಂದಾಗ ಪತ್ನಿ ಲಕ್ಷ್ಮೀ ಅರುಣಾ ಎರಡು ದಿನ ಮುಂಚೆಯೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಒಟ್ಟಾರೆ ಆ ತಾಯಿ ಬಳ್ಳಾರಿಗೆ ಬರುವುದೆಂದರೆ ನಮಗೆ ದೊಡ್ಡ ಹಬ್ಬವಾಗಿತ್ತು’ ಎಂದಿದ್ದಾರೆ.

‘ವರಮಹಾಲಕ್ಷ್ಮಿ ವ್ರತದ ಈ ದಿನಗಳಲ್ಲಿ ತಾಯಿಯ ಅಗಲುವಿಕೆಯ ಈ ಸುದ್ದಿ ನಮಗೆ ಬರ ಸಿಡಿಲು ಬಡಿದು ಅಪ್ಪಳಿಸಿದಂತಾಗಿದೆ’ ಎಂದು ವಿಷಾದಿಸಿದ್ದಾರೆ.

Post Comments (+)