ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗಷ್ಟೇ ವಿಜಯನಗರದ ಹೆಬ್ಬಾಗಿಲು! ಬದಲಾಗದ ಕಮಲಾಪುರ ಪಟ್ಟಣದ ಒಳಚಹರೆ

ಹಾಳಾದ ರಸ್ತೆ, ಕುಡಿಯುವ ನೀರು, ಸ್ವಚ್ಛತೆಯದ್ದೇ ಸಮಸ್ಯೆ
ಅಕ್ಷರ ಗಾತ್ರ

ಹೊಸಪೇಟೆ: ಇದು ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು. ಒಂದು ಕಾಲದಲ್ಲಿ ಇದರ ಸನಿಹದಲ್ಲೇ ವಜ್ರ, ವೈಢೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಶ್ರೀಮಂತಿಕೆಗೆ ಹೆಸರಾಗಿದ್ದ ಸಾಮ್ರಾಜ್ಯ. ಅಂತಹ ವೈಭವದ ದಿನಗಳನ್ನು ಕಂಡ ಪಟ್ಟಣದಲ್ಲಿ ಈಗ ಒಮ್ಮೆ ಸುತ್ತಾಡಿ ನೋಡಿದರೆ ಕಣ್ಣಿಗೆ ಕಾಣುವುದು ಬರೀ ಬಡತನ, ಸಮಸ್ಯೆಗಳ ಸರಮಾಲೆ.

ಇದು ತಾಲ್ಲೂಕಿನ ಕಮಲಾಪುರ ಪಟ್ಟಣದ ಕುರಿತ ಕಿರು ಪೀಠಿಕೆ. ವಿಶ್ವವಿಖ್ಯಾತ ಹಂಪಿ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ದರೋಜಿ ಕರಡಿಧಾಮದಂತಹ ಪ್ರವಾಸಿ ತಾಣಗಳು ಈ ಪಟ್ಟಣದ ಸುತ್ತಮುತ್ತಲಿವೆ.

ಐಷಾರಾಮಿ ಹೋಟೆಲ್‌, ರೆಸಾರ್ಟ್‌ಗಳಿಗೇನೂ ಕೊರತೆಯಿಲ್ಲ. ಪಟ್ಟಣದ ಮಧ್ಯಭಾಗದಿಂದ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆ (ಎಲ್‌.ಎಲ್‌.ಸಿ.) ಮೂಲಕ ನೀರು ಹರಿಯುತ್ತದೆ. ದಾವಣಗೆರೆ–ರಾಯಚೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಹೀಗೆ ಹಲವು ವಿಶೇಷತೆಗಳಿಂದ ಕೂಡಿದ್ದರೂ ಇಲ್ಲಿನ ಜನರ ಜೀವನಮಟ್ಟದಲ್ಲಿ ಬದಲಾವಣೆ ಆಗಿಲ್ಲ. ಅಷ್ಟೇ ಅಲ್ಲ, ಪಟ್ಟಣದ ಚಹರೆಯೂ ಬದಲಾಗಿಲ್ಲ.

ಪ್ರವಾಸೋದ್ಯಮ, ಹೋಟೆಲ್‌ ಉದ್ಯಮ ವೇಗವಾಗಿ ಬೆಳೆಯುತ್ತಿರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತಿವೆ. ಉನ್ನತ ಹುದ್ದೆಗಳು ಹೊರಗಿನವರ ಪಾಲಾದರೆ, ಕೆಳಹಂತದ ನೌಕರಿಗಳಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗುತ್ತಿದೆ. ಕನಿಷ್ಠ ಕೂಲಿಯಲ್ಲಿ ಅನೇಕ ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಹಂಪಿಯಲ್ಲಿ ಪ್ರವಾಸಿ ಮಾರ್ಗದರ್ಶಿಗಳಾಗಿ, ಗೃಹರಕ್ಷಕರಾಗಿ ಕೆಲಸ ನಿರ್ವಹಿಸುವವರ ಪೈಕಿ ಬಹುತೇಕರು ಪಟ್ಟಣದ ನಿವಾಸಿಗಳೆಂಬುದು ವಿಶೇಷ. ಹೀಗಿದ್ದರೂ ಅವರ ಬದುಕಿನಲ್ಲಿ ದೊಡ್ಡ ವ್ಯತ್ಯಾಸವೇನೂ ಆಗಿಲ್ಲ.

ಐಷಾರಾಮಿ ಹೋಟೆಲ್‌ಗಳು ತಲೆ ಎತ್ತುತ್ತಿರುವುದರಿಂದ ಭೂಮಿಯ ಬೆಲೆ ಆಕಾಶಕ್ಕೆ ಮುಟ್ಟಿದೆ. ಹೋಟೆಲ್‌ಗಳಿಂದ ಪಟ್ಟಣ ಪಂಚಾಯಿತಿಗೆ ಅಪಾರ ಆದಾಯ ಬರುತ್ತಿದೆ. ಹೀಗಿದ್ದರೂ ಪಟ್ಟಣ ಹೇಳಿಕೊಳ್ಳುವ ರೀತಿಯಲ್ಲಿ ಅಭಿವೃದ್ಧಿ ಹೊಂದಿಲ್ಲ. ಇಲ್ಲಿರುವ ಮುಖ್ಯರಸ್ತೆಗಳನ್ನು ಹೊರತುಪಡಿಸಿದರೆ ಒಳರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಅನೇಕ ಕಡೆ ಈಗಲೂ ಚರಂಡಿಗಳು ತೆರೆದೇ ಇವೆ. ಇದರಿಂದ ದುರ್ಗಂಧ ಬರುತ್ತಿದೆ. ರೋಗ–ರುಜಿನ ಹರಡಲು ಕಾರಣವಾಗಿದೆ. ಊರ ಸಮೀಪವೇ ಶುದ್ಧ ಕುಡಿಯುವ ನೀರು ಪೂರೈಸುವ ಘಟಕವಿದ್ದರೂ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆ ಆರಂಭವಾದ ಬಳಿಕ ನಾಲ್ಕೈದು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಇದರಿಂದ ಜನರ ನೆಮ್ಮದಿ ಹಾಳಾಗಿದೆ. ಐತಿಹಾಸಿಕ ಪ್ರಾಮುಖ್ಯತೆ ಇರುವ ಇಲ್ಲಿನ ಏಳು ಕೇರಿಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿ ಇಲ್ಲ.

ಒಳ್ಳೆಯದಕ್ಕಿಂತ ಕೆಟ್ಟ ಕಾರಣಗಳಿಗಾಗಿಯೇ ಪಟ್ಟಣ ಸದಾ ಚರ್ಚೆಯಲ್ಲಿ ಇರುತ್ತದೆ. ಜಾತಿ, ಧರ್ಮದ ಹೆಸರಿನಲ್ಲಿ ಪದೇ ಪದೇ ಗಲಭೆಗಳು ಇಲ್ಲಿ ನಡೆಯುತ್ತಿರುತ್ತವೆ. ತಾಲ್ಲೂಕಿನ ಅತಿ ಸೂಕ್ಷ್ಮ ಪಟ್ಟಣವಾಗಿ ಗುರುತಿಸಿಕೊಂಡಿದೆ. ಇದು ಅಭಿವೃದ್ಧಿಯ ವೇಗಕ್ಕೂ ತೊಡಕಾಗಿದೆ.

‘ರಾಜಕೀಯ ಪಕ್ಷಗಳು ಅವುಗಳ ಬೇಳೆ ಬೇಯಿಸಿಕೊಳ್ಳಲು ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಜಾತಿ, ಧರ್ಮದ ಹೆಸರಿನಲ್ಲಿ ಆಗಾಗ ಗಲಾಟೆಗಳು ಸಂಭವಿಸುತ್ತಿವೆ. ಅಭಿವೃದ್ಧಿಗಿಂತ ಗಲಾಟೆಗಳ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತಿರುವುದು ದುಃಖದ ಸಂಗತಿ ಎನ್ನುತ್ತಾರೆ’ ಪಟ್ಟಣದ ನಿವಾಸಿ, ವಿದ್ಯಾರ್ಥಿ ಪಂಪಾನಂದ.

‘ಪಟ್ಟಣಕ್ಕೆ ನಾಲ್ಕೈದು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಜನಪ್ರತಿನಿಧಿಗಳು ಇರುವ ಬಡಾವಣೆಗಳಲ್ಲಿ ಉತ್ತಮ ಸೌಕರ್ಯ ಕಲ್ಪಿಸಲಾಗಿದೆ. ಬೇರೆ ಕಡೆ ಯಾವುದೇ ಸೌಲಭ್ಯ ಇಲ್ಲ’ ಎಂದು ದೂರಿದರು.

‘ಪಟ್ಟಣದ ಪ್ರಮುಖ ರಸ್ತೆಗಳು ಟಾರ್‌ ಕಂಡಿವೆ. ಬಡಾವಣೆಗಳಲ್ಲಿ ಈಗಲೂ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಕುಡಿಯುವ ನೀರು, ಸ್ವಚ್ಛತೆಯ ಸಮಸ್ಯೆ ತೀವ್ರವಾಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ವ್ಯಾಪಾರಿ ಶ್ರೀನಿವಾಸ ಗೋಳು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT