ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಳಸಮುದಾಯ ಏಳಿಗೆಯ ಕ್ರಾಂತಿಯಾಗಲಿ’

‘ಸ್ವೆರೋಸ್‌ ಕರ್ನಾಟಕ’ ಬಳ್ಳಾರಿ ಜಿಲ್ಲಾಮಟ್ಟದ ಸಮಾವೇಶದಲ್ಲಿ ಪೊಲೀಸ್‌ ಆಯುಕ್ತ ಆರ್‌.ಎಸ್‌. ಪ್ರವೀಣ್‌ ಕುಮಾರ್‌
Last Updated 9 ಜನವರಿ 2021, 11:42 IST
ಅಕ್ಷರ ಗಾತ್ರ

ಹೊಸಪೇಟೆ: ‘ತಳ ಸಮುದಾಯಗಳ ಏಳಿಗೆಯ ಕ್ರಾಂತಿಯ ಶಕೆ ಶುರುವಾಗಬೇಕು’ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ, ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ವಸತಿ ಶಾಲೆ ಶಿಕ್ಷಣ ಸಂಸ್ಥೆಗಳ ಸೊಸೈಟಿ ಅಧ್ಯಕ್ಷ ಆರ್‌.ಎಸ್‌. ಪ್ರವೀಣ್‌ ಕುಮಾರ್‌ ಹೇಳಿದರು.

ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಸ್ವೆರೋಸ್‌ ಕರ್ನಾಟಕ’ ಸಂಘಟನೆಯ ಬಳ್ಳಾರಿ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಪ್ರತಿಪಾದಿಸಿರುವಂತೆ ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ಎಷ್ಟೇ ಬಡತನ, ಅಡ್ಡಿ ಎದುರಾದರೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದಿಂದ ಸ್ವಾಭಿಮಾನ, ಸ್ವಾವಲಂಬನೆ ಬರುತ್ತದೆ. ಒಂದು ಕುಟುಂಬದ ಒಬ್ಬ ವ್ಯಕ್ತಿ ಸುಶಿಕ್ಷಿತನಾದರೆ ಇಡೀ ಕುಟುಂಬ ಮುಂದೆ ಬರುತ್ತದೆ’ ಎಂದು ತಿಳಿಸಿದರು.

‘ತಳ ಸಮುದಾಯಗಳು ಇಷ್ಟು ದಿನ ಬೇರೆ ಸಮುದಾಯಗಳವರ ಸೇವೆ ಮಾಡಿದ್ದು ಸಾಕು. ಈಗ ತಳಸಮುದಾಯದವರು ಶಿಕ್ಷಣ ಪಡೆದು ಎಲ್ಲ ರಂಗಗಳಿಗೆ ಪ್ರವೇಶ ಪಡೆಯಬೇಕು. ಅಧಿಕಾರದ ಸ್ಥಾನಕ್ಕೆ ಏರಬೇಕು. ನಾವು ಉನ್ನತ ಸ್ಥಾನಕ್ಕೆ ಹೋದ ನಂತರ ನಮ್ಮ ಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡಬೇಕು’ ಎಂದು ಸಲಹೆ ಮಾಡಿದರು.

ಮುಖಂಡ ಓಬಳೇಶ್‌ ಮಾತನಾಡಿ, ‘ತಳಸಮುದಾಯದವರು ಕೆಲಸ ಮಾಡಿ, ಬದುಕು ಕಟ್ಟಿಕೊಳ್ಳುವುದರಲ್ಲಿಯೇ ಅವರ ಜೀವನ ಕಳೆದು ಹೋಗುತ್ತಿದೆ. ದೈನಂದಿನ ಕೆಲಸದ ಜೊತೆಗೆ ಶಿಕ್ಷಣ ಪಡೆಯಬೇಕು. ಸ್ಥಿತಿವಂತರು ಇಲ್ಲದವರಿಗೆ ಪುಸ್ತಕ, ಶಿಕ್ಷಣ ಕೊಟ್ಟು ಬೆಳೆಸಬೇಕು’ ಎಂದು ಹೇಳಿದರು.

ರಾಷ್ಟ್ರೀಯ ಕಾನೂನು ಶಾಲೆ ತಳಸಮುದಾಯಗಳ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಪ್ರದೀಪ್‌ ರಮಾವತ್‌ ಮಾತನಾಡಿ, ‘ಬಹುತ್ವ, ಭಾತೃತ್ವ, ಸಾಮಾಜಿಕ ನ್ಯಾಯ, ಕಾಳಜಿ ಇಂದಿನ ಯುವಜನತೆಯಲ್ಲಿ ಬಿತ್ತುವ ಅಗತ್ಯವಿದೆ. 21ನೇ ಶತಮಾನಕ್ಕೆ ಬೇಕಾದಂಥ ಹೊಸ ನಾಯಕತ್ವ ಬೆಳೆಸಬೇಕು’ ಎಂದರು.

ಹಣಕಾಸು ಇಲಾಖೆಯ ಜಂಟಿ ನಿರ್ದೇಶಕಿ ಭಾಗ್ಯಲಕ್ಷ್ಮಿ, ‘ಕಲ್ಯಾಣ ಕರ್ನಾಟಕದಲ್ಲಿ ಈಗಲೂ ಬಡತನ ಹೆಚ್ಚಿದೆ. ಸಾಮಾಜಿಕ, ಧಾರ್ಮಿಕ ಆಚರಣೆಗಳಿಂದ ಇಲ್ಲಿನ ಜನರು ಶೋಷಣೆಗೆ ಒಳಗಾಗಿದ್ದಾರೆ. 2,000 ವರ್ಷಗಳಿಂದ ಅಕ್ಷರ, ಅನ್ನ, ಅಧಿಕಾರ, ಸ್ವಾಭಿಮಾನ ನಿರಾಕರಿಸುತ್ತ ಬರಲಾಗಿದೆ. ಅದನ್ನು ಈಗ ಶಿಕ್ಷಣದ ಮೂಲಕ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಸಖಿ ಸಂಸ್ಥೆಯ ನಿರ್ದೇಶಕಿ ಎಂ. ಭಾಗ್ಯಲಕ್ಷ್ಮಿ, ನಸ್ರೀನ್‌, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಬರ್ಟ್‌ ಜೋಸ್‌, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಎನ್‌. ದೇವರಾಜ್‌, ಸಹಾಯಕ ಪ್ರಾಧ್ಯಾಪಕ ಆರ್‌.ವಿ. ಚಂದ್ರಶೇಖರ್‌, ಸಂಘಟನೆಯ ಜಿಲ್ಲಾ ಸಂಯೋಜಕಿ ಮಂಜುಳಾ ಮಾಳಗಿ, ಜಾಗೃತ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಿನ್ನಮ್ಮ, ಗುಲಾಬಿ ದೇವದಾಸಿ ತಾಯಂದಿರ ಸ್ವಸಹಾಯ ಸಂಘ ಅಧ್ಯಕ್ಷೆ ಹುಲಿಗೆಮ್ಮ ಇದ್ದರು. ಸಮುದಾಯ ಸಾಧಕರಿಗೆ ಇದೇ ವೇಳೆ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT