ಗುರುವಾರ , ಏಪ್ರಿಲ್ 22, 2021
29 °C
ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ

ನೇತ್ರಾಬಾಯಿಗೆ ಕರಾಟೆಯೇ ಉಸಿರು

ಕೆ. ಸೋಮಶೇಖರ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ತಾಲ್ಲೂಕಿನ ವಡ್ಡಿನಹಳ್ಳಿ ತಾಂಡಾದ ಯುವತಿ ನೇತ್ರಾಬಾಯಿಗೆ ಕರಾಟೆ ಎಂದರೆ ಎಲ್ಲಿಲ್ಲದ ಪ್ರೀತಿ. ರಾಟೆಯನ್ನೇ ಉಸಿರಾಗಿಸಿಕೊಂಡಿರುವ ಅವರು, ಕರಾಟೆಯಲ್ಲೇ ಹೆಸರು ಮಾಡುವ ಸಂಕಲ್ಪ ಮಾಡಿದ್ದಾರೆ.

ಸಾಮಾನ್ಯವಾಗಿ ಶಾಂತಚಿತ್ತರಂತೆ ಕಾಣುವ ನೇತ್ರಾಬಾಯಿ ಕರಾಟೆ ಸಮವಸ್ತ್ರ ಧರಿಸಿ ನಿಂತರೆ ಗಂಭೀರವಾಗಿ ಬಿಡುತ್ತಾರೆ. ಒಮ್ಮೆಲೇ ಅವರ ಕೈ, ಕಾಲುಗಳಲ್ಲಿ ಅದ್ಭುತ ಶಕ್ತಿ ಸಂಚಾರವಾಗುತ್ತದೆ. ಶೋರಿನ್ ರಿಯು ಮತ್ತು ಶೋರಿನ್ ಕಾನ್ ವಿಭಾಗದಲ್ಲಿ ಹಲವು ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಈಕೆ ಎಂತಹ ಬಲಾಢ್ಯರನ್ನೂ ಹೊಡೆದು ಉರುಳಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದಾಳೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕು ಬ್ಯಾಸಿಗಿದೇರಿಯ ಕಸ್ತೂರಬಾ ಶಾಲೆಯಲ್ಲಿ ಐದನೇ ತರಗತಿ ಓದುವಾಗಲೇ ನೇತ್ರಾಬಾಯಿ ಕರಾಟೆ ಕಲಿಯಲು ಪ್ರಾರಂಭಿಸಿದ್ದಾರೆ. ಅಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಸುಭಾಷ ಅವರಿಂದ ಕರಾಟೆ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಹರಪನಹಳ್ಳಿಯ ಎ.ಡಿ.ಬಿ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಅವರ ಬದುಕು ಕರಾಟೆಮಯವಾಗಿದೆ. ತಾನು ಕಲಿತಿರುವ ಆತ್ಮ ರಕ್ಷಣೆಯ ಕಲೆಯನ್ನು ಇತರೆ ಯುವತಿಯರು ಕಲಿಯಬೇಕು ಎಂಬುದು ನೇತ್ರಾಬಾಯಿ ಹಂಬಲ. ಹೀಗಾಗಿ ಆಸಕ್ತಿಯಿಂದ ಮುಂದೆ ಬರುವ ಯುವತಿಯರು ಹಾಗೂ ಮಕ್ಕಳಿಗೆ ಅವರು ಕರಾಟೆ ತರಬೇತಿ ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ನೆರವಿನೊಂದಿಗೆ ತಾಲ್ಲೂಕಿನ ಹಿರೇಹಡಗಲಿ, ಮಾಗಳ, ಬೂದನೂರು, ಹೊಳಲು, ಮೈಲಾರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಕರಾಟೆ ತರಬೇತಿ ನೀಡಿದ್ದಾರೆ. ಗ್ರಾಮೀಣ ಭಾಗದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನೇತ್ರಾಬಾಯಿ ಕರಾಟೆ ಪಟುಗಳನ್ನಾಗಿ ರೂಪಿಸಿದ್ದಾರೆ.

ಈಚೆಗೆ ಹರಿಹರದಲ್ಲಿರುವ ಕರ್ನಾಟಕ ಅಸೋಷಿಯೇಷನ್ ಆಫ್ ಒಕಿನಾವ ಕರಾಟೆ ದೋ ಶೋರಿನ್ ರಿಯು, ಶೋರಿನ್ ಕಾನ್ ಸಂಸ್ಥೆಯಲ್ಲಿ ಹೆಚ್ಚಿನ ತರಬೇತಿ ಪಡೆದಿರುವ ನೇತ್ರಾಬಾಯಿ, ಅಂತರ ರಾಷ್ಟ್ರೀಯ ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ. ತರಬೇತುದಾರ ರೆನ್ಸಿ, ಎಚ್.ಮಲ್ಲಿಕಾರ್ಜುನ ಮಾರ್ಗದರ್ಶನದಲ್ಲಿ ಇವರ ಕರಾಟೆಯ ಬದುಕಿಗೆ ಮತ್ತಷ್ಟು ಹೊಳಪು ಬಂದಿದೆ.

‘ನನಗೆ ಕರಾಟೆ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಡತನದ ನಡುವೆಯೂ ಈ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದೇನೆ. ಹೂವಿನಹಡಗಲಿಯಲ್ಲಿ ಕರಾಟೆ ತರಬೇತಿ ಶಾಲೆ ತೆರೆದು ಗ್ರಾಮೀಣ ಮಕ್ಕಳು, ಯುವತಿಯರಿಗೆ ತರಬೇತಿ ನೀಡಲು ಬಯಸಿದ್ದೇನೆ’ ಎಂದು ನೇತ್ರಾಬಾಯಿ ಹೇಳಿದರು.

‘ಕರಾಟೆ ಬರೀ ಆತ್ಮರಕ್ಷಣೆಯ ಕಲೆಯಲ್ಲ. ಒಬ್ಬ ವ್ಯಕ್ತಿ ಕರಾಟೆ ಕಲಿತಿದ್ದರೆ ಇಡೀ ಪರಿವಾರವನ್ನು ರಕ್ಷಣೆ ಮಾಡಬಹುದು. ಕರಾಟೆ ಸಾಧಕರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಉತ್ತೇಜನ ನೀಡುತ್ತಿವೆ. ಈ ಅವಕಾಶಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು’ ಎಂಬುದು ಅವರ ಮನವಿ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.