ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಹಾಸಿಗೆ, ಆಮ್ಲಜನಕ್ಕಿಲ್ಲ ಕೊರತೆ: ಸಚಿವ ಆನಂದ್‌ ಸಿಂಗ್‌

ಕೋವಿಡ್‌ ಎದುರಿಸಲು ಸಕಲ ಸಿದ್ಧತೆ–ಸಚಿವ ಆನಂದ್‌ ಸಿಂಗ್‌
Last Updated 28 ಏಪ್ರಿಲ್ 2021, 10:53 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ಕೋವಿಡ್‌–19 ಎರಡನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹಾಸಿಗೆ, ಆಮ್ಲಜನಕಕ್ಕೆ ಕೊರತೆ ಉಂಟಾಗದಂತೆ ಕ್ರಮ ಜರುಗಿಸಲಾಗಿದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಬುಧವಾರ ಇಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬರುವ ದಿನಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರಕರಣಗಳು ಹೆಚ್ಚಾದರೆ ಕಂಟೇನ್‌ಮೆಂಟ್‌ ಜೋನ್‌ ಮಾಡಲಾಗುವುದು. ತಾಲ್ಲೂಕಿನ ವೆಂಕಟಾಪುರದಲ್ಲಿ ಕಂಟೇನ್‌ಮೆಂಟ್‌ ಜೋನ್‌ ಮಾಡಿದ ನಂತರ ಪ್ರಕರಣ ತಗ್ಗಿವೆ’ ಎಂದು ಹೇಳಿದರು.

‘ಬರುವ ದಿನಗಳಲ್ಲಿ ಆರ್‌ಟಿಪಿಸಿಆರ್‌ ಕೇಂದ್ರಗಳನ್ನು ಹೆಚ್ಚಿಸುವ ಚಿಂತನೆ ನಡೆದಿದೆ. ಜಿಲ್ಲೆಯ ಹಲವೆಡೆ ಅನೇಕ ಕೈಗಾರಿಕೆಗಳು ಇರುವುದರಿಂದ ಆ ಕುರಿತು ಚಿಂತಿಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರಿಗೆ ಆಕ್ಸಿಮೀಟರ್‌ ಒದಗಿಸಲಾಗುವುದು. ಜಿಲ್ಲೆಯ ಯಾವುದೇ ಭಾಗದಲ್ಲೂ ಆಕ್ಸಿಜನ್‌, ಬೆಡ್‌ಗೆ ಸಮಸ್ಯೆ ಇಲ್ಲ. 1,128 ಬೆಡ್‌, 700 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಇದೆ. ಇದರೊಂದಿಗೆ ಇನ್ನೊಂದು ವಾರದಲ್ಲಿ 140 ಆಕ್ಸಿಜನ್‌ ಬೆಡ್‌ ಸಿದ್ಧಗೊಳ್ಳಲಿವೆ. ಎರಡೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಶೀಘ್ರದಲ್ಲೇ ತಲಾ 50 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಕಲ್ಪಿಸಲಾಗುವುದು. ಇಡೀ ಜಿಲ್ಲೆಯಲ್ಲಿ ಸದ್ಯ 125 ವೆಂಟಿಲೇಟರ್‌ಗಳಿವೆ’ ಎಂದು ತಿಳಿಸಿದರು.

‘ಮಾರ್ಚ್‌ನಿಂದ ಇದುವರೆಗೆ ಜಿಲ್ಲೆಯಲ್ಲಿ 16,157 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 1,410 ಜನರಲ್ಲಿ ಕೋವಿಡ್‌ ದೃಢಪಟ್ಟಿದೆ. 1,121 ಜನ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ 1,087 ಸಕ್ರಿಯ ಪ್ರಕರಣಗಳಿವೆ. ವಿಮ್ಸ್‌ನಲ್ಲಿ 56 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಕ್ಕುಳಿದವರು ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಅವರ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ. ಒಂದುವೇಳೆ ಅವರು ಅನಗತ್ಯವಾಗಿ ಹೊರಗೆ ತಿರುಗಾಡಿದರೆ ಕೋವಿಡ್‌ ಆರೈಕೆ ಕೇಂದ್ರಕ್ಕೆ ಕಳುಹಿಸಿಕೊಡುವಂತೆ ತಿಳಿಸಲಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜನಾರ್ದನ್, ಉಪವಿಭಾಗಾಧಿಕಾರಿಗಳಾದ ರಮೇಶ್ ಕೋನರೆಡ್ಡಿ, ಸಿದ್ದರಾಮೇಶ್ವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಹೆಚ್ಚುವರಿ ಎಸ್ಪಿ ಬಿ.ಎನ್.ಲಾವಣ್ಯ, ಡಿವೈಎಸ್ಪಿ ವಿ. ರಘುಕುಮಾರ, ವಿಮ್ಸ್ ನಿರ್ದೇಶಕ ಗಂಗಾಧರ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ, ಜಿಲ್ಲಾ ಕ್ಷಯರೋಗ ನಿಯಂತ್ರಾಣಾಧಿಕಾರಿ ಡಾ. ಇಂದ್ರಾಣಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಆರ್.ಅನಿಲ್‍ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್‌, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸಲೀಂ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಇದ್ದರು.

ಗುಣಮಟ್ಟದ ಚಿಕಿತ್ಸೆಗೆ ಡಿಸಿಎಂ ಸೂಚನೆ
‘ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಅವರು ಗುಣಮುಖರಾಗುವವರೆಗೆ ಅವರ ಮೇಲೆ ನಿಗಾ ವಹಿಸಬೇಕು’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

‘ಹೋಂ ಐಸೋಲೇಷನ್‌ನಲ್ಲಿ ಇದ್ದವರಿಗೆ ಕೊಡುತ್ತಿರುವ ಕಿಟ್‌ನೊಂದಿಗೆ ಇನ್ನೂ ಕೆಲವು ಔಷಧಗಳನ್ನು ಸೇರಿಸಿ ಕೊಡಬೇಕು’ ಎಂದು ಬುಧವಾರ ಬಳ್ಳಾರಿ, ವಿಜಯನಗರ ಜಿಲ್ಲೆಯ ಕೋವಿಡ್ ಸ್ಥಿತಿಗತಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ವಿಶೇಷ ಅಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹೇಳಿದರು.
‘ಲಾಕ್‌ಡೌನ್‌ನಿಂದ ನಗರಗಳಿಂದ ವಲಸೆ ಕಾರ್ಮಿಕರು ಹಳ್ಳಿಗಳತ್ತ ಬರುತ್ತಿದ್ದಾರೆ. ಅದರ ಬಗ್ಗೆ ಎಚ್ಚರ ವಹಿಸಿ, ಸೋಂಕು ವ್ಯಾಪಿಸದಂತೆ ನೋಡಿಕೊಳ್ಳಬೇಕು. ಕೋವಿಡ್‌ ಕರ್ತವ್ಯಕ್ಕೆ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT