ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಎರಡು ರೆಗ್ಯುಲರ್‌ ಪದವಿ ಪಡೆಯಲು ಅವಕಾಶವಿಲ್ಲ: ಹಂಪಿ ವಿವಿ

Last Updated 24 ಮೇ 2022, 13:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಏಕಕಾಲಕ್ಕೆ ಎರಡು ರೆಗ್ಯುಲರ್‌ ಪದವಿ ಪಡೆಯುವುದಕ್ಕೆ ಯುಜಿಸಿ ನಿಯಮಗಳಲ್ಲಿ ಅವಕಾಶವಿಲ್ಲ. 2016 ಯುಜಿಸಿ ಆದೇಶ ಹಾಗೂ ಈ ಹಿಂದಿನ ಸುಪ್ರೀಂಕೋರ್ಟ್‌ ಆದೇಶಗಳನ್ನು ಗಮನಿಸಬಹುದಾಗಿದೆ. ಆದರೆ, ಎರಡು ಪದವಿಗಳನ್ನು ಒಟ್ಟಿಗೆ ಪಡೆದರೆ ಯುಜಿಸಿ ಮಾನ್ಯ ಮಾಡಬೇಕೆಂದು ಆದೇಶ ಹೊರಡಿಸಿದೆ ಎಂದು ಸಹಾಯಕ ಪ್ರಾಧ್ಯಾಪಕ ಯರ್ರಿಸ್ವಾಮಿ ಈ. ಅವರು ತಿಳಿಸಿದ್ದಾರೆ. ಈ ಕುರಿತ ದಾಖಲೆಗಳಿದ್ದರೆ ಅದನ್ನು ಸಲ್ಲಿಸಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ತಿಳಿಸಿದ್ದಾರೆ.

‘ವಿಶ್ವವಿದ್ಯಾಲಯವು ಯರ್ರಿಸ್ವಾಮಿ ಅವರಿಗೆ ನೋಟಿಸ್‌ ನೀಡಿದಾಗ ದಾಖಲೆಗಳ ಸಹಿತ ವಿವರಣೆ ನೀಡಬೇಕಿತ್ತು. ಈವರೆಗೆ ಯಾವುದೇ ಸಮರ್ಥನೆ ನೀಡದೇ ಒಂದು ತಿಂಗಳು ಕಾಲಾವಕಾಶ ಕೇಳಿದ್ದಾರೆ. ಎರಡು ಪದವಿ ಒಟ್ಟಿಗೆ ಪಡೆದ ಬಗ್ಗೆ ಪೊಲೀಸ್‌ ಠಾಣೆಗೆ ಉತ್ತರ ನೀಡಿದ್ದಾರೆಯೇ ಹೊರತು ವಿಶ್ವವಿದ್ಯಾಲಯಕ್ಕೆ ಇದುವರೆಗೆ ಸ್ಪಷ್ಟನೆ ನೀಡಿಲ್ಲ. ಯುಜಿಸಿ ಈ ಬಗ್ಗೆ ಯಾವುದೇ ರೀತಿಯ ಆದೇಶ ಹೊರಡಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇಂತಹ ಹಲವು ಪ್ರಕರಣಗಳಲ್ಲಿ ನ್ಯಾಯಾಲಯವು, ಎರಡೂ ಪದವಿಗಳನ್ನು ರದ್ದುಪಡಿಸಿ ಮತ್ತೊಬ್ಬ ವಿದ್ಯಾರ್ಥಿಗೆ ನ್ಯಾಯಯುತವಾಗಿ ದೊರಕಬೇಕಾದ ಪ್ರವೇಶವು ದೊರಕದಂತೆ ವಂಚಿಸಿದ್ದಾರೆಂದು ಠಾಣೆಗಳಲ್ಲಿ ದೂರು ದಾಖಲಿಸುವ ಕ್ರಮ ಜರುಗಿಸಿದೆ’ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯರ್ರಿಸ್ವಾಮಿ ಅವರು ಮಹಿಳಾ ಅಧ್ಯಯನ ವಿಭಾಗದ ಎಂ.ಎ. ಪಿಎಚ್‌.ಡಿ. ಸಂಯೋಜಿತ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ 2003ನೇ ಸಾಲಿನಲ್ಲಿ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಬಿ.ಎ . ಪದವಿ ಪಡೆದ ಅಂಕಪಟ್ಟಿ ಮತ್ತು 2003ನೇ ಸಾಲಿನಲ್ಲಿ ಪಡೆದ ಟಿ.ಸಿ.ಯನ್ನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದ್ದಾರೆ. ಪಿಎಚ್‌.ಡಿ. ಪದವಿ 2010ರಲ್ಲಿ ಪೂರ್ಣಗೊಳಿಸಿದ್ದಾರೆ. 2010ರ ವರೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ರೆಗ್ಯುಲರ್‌ ಪದವಿ ಮಾಡುತ್ತಿದ್ದ ಅವಧಿಯಲ್ಲಿ ಸತ್ಯಾಂಶವನ್ನು ಮರೆಮಾಚಿ, ವಿಜಯನಗರ ಕಾಲೇಜಿನಿಂದ ಡುಪ್ಲಿಕೇಟ್‌ ಟಿ.ಸಿ.ಯನ್ನು 2008ರಲ್ಲಿ ಪಡೆದುಕೊಂಡು, ಅದನ್ನು ತುಮಕೂರಿನ ಕಾಲೇಜಿನಲ್ಲಿ ಸಲ್ಲಿಸಿ ಬಿ.ಇಡಿ. ಪದವಿ ಪೂರೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ, ಡುಪ್ಲಿಕೇಟ್‌ ಟಿ.ಸಿ. ಪಡೆಯಲು ಅಭ್ಯರ್ಥಿಯು ಮೂಲ ಟಿ.ಸಿ. ಕಳೆದು ಹೋದ ಬಗ್ಗೆ ಅಫಿಡವಿಟ್‌ ಮತ್ತು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಕಾಲೇಜಿನಿಂದ ಪಡೆದುಕೊಳ್ಳಬೇಕಾಗುತ್ತದೆ. ಡುಪ್ಲಿಕೇಟ್ ಟಿ.ಸಿ. ಪಡೆದು, ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ರೆಗ್ಯುಲರ್‌ ಪದವಿಗಳನ್ನು ಪಡೆದುಕೊಂಡ ವಿಷಯದಲ್ಲಿ ಅಪರಾಧಿಕ ಕೃತ್ಯದ/ವಂಚನೆಯ ಉದ್ದೇಶವಿದೆಯೇ ಇಲ್ಲವೆ ಎಂಬುದರ ಕುರಿತು ಹಾಗೂ ಅವರ ಮೂಲ ಟಿ.ಸಿ. ಕಳೆದಿದೆ ಎಂದು ಯಾವ ಠಾಣೆಯಲ್ಲಿ ದೂರು ನೀಡಿದ್ದಾರೆ ಅಥವಾ ಯಾವ ಅಫಿಡವಿಟ್‌ ಸಲ್ಲಿಸಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುವುದು ಪೊಲೀಸ್‌ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ತನಿಖೆಯ ನಂತರವಷ್ಟೇ ಪೂರ್ಣ ಸತ್ಯ ಹೊರಬರಲಿದೆ. ಯರ್ರಿಸ್ವಾಮಿ ಪ್ರೊಬೇಷನರಿ ಅವಧಿ ವಿಷಯ ನ್ಯಾಯಾಲಯದಲ್ಲಿ ಇದ್ದು, ಅದರ ಬಗ್ಗೆ ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT